ಗೋವಾ ಕಾಂಗ್ರೆಸ್ ಯುವ ನಾಯಕ ಡಾ. ಕೇತನ್ ಭಾಟಿಕರ್ ಹಾವು ಕಡಿತದಿಂದ ನಿಧನ

ಪಣಜಿ: ಗೋವಾ ಕಾಂಗ್ರೆಸ್‌ನ ಯುವ ನಾಯಕ ಹಾಗೂ ಇತ್ತೀಚೆಗೆ ರದ್ದುಗೊಂಡಿದ್ದ ಪೊಂಡಾ ವಿಧಾನಸಭಾ ಉಪಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದ ಡಾ. ಕೇತನ್ ಭಾಟಿಕರ್ (38) ಅವರು ಹಾವು ಕಡಿತದಿಂದ ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಗುರುವಾರ ರಾತ್ರಿ ದಾಂಡೇಲಿಗೆ ತೆರಳುತ್ತಿದ್ದ ವೇಳೆ ಗೋವಾ-ಕರ್ನಾಟಕ ಗಡಿಯ ಕರ್ಮಲ್ ಘಾಟ್ ಪ್ರದೇಶದಲ್ಲಿ ಈ ಘಟನೆ ನಡೆದಿದೆ. ಯಾವುದೋ ಕಾರಣಕ್ಕೆ ವಾಹನದಿಂದ ಕೆಳಗಿಳಿದಿದ್ದ ವೇಳೆ ಅವರಿಗೆ ಹಾವು ಕಚ್ಚಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ತಕ್ಷಣ ಅವರನ್ನು ಗೋವಾದ ಧರ್ಬಂದೋರಾದ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕರೆದೊಯ್ಯಲಾಯಿತಾದರೂ, ಅವರು ಮೃತಪಟ್ಟಿದ್ದಾರೆ ಎಂದು ವೈದ್ಯರು ಘೋಷಿಸಿದರು.

ಡಾ. ಕೇತನ್ ಭಾಟಿಕರ್ ಅವರು ಪೊಂಡಾ ವಿಧಾನಸಭಾ ಉಪಚುನಾವಣೆಗೆ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದರು. ಆದರೆ, ಹೈಕೋರ್ಟ್ ತೀರ್ಪಿನ ಬಳಿಕ ಉಪಚುನಾವಣೆ ರದ್ದುಗೊಂಡಿತ್ತು. ಈ ಆದೇಶವನ್ನು ಪ್ರಶ್ನಿಸಿ ಅವರು ಸುಪ್ರೀಂ ಕೋರ್ಟ್‌ನಲ್ಲಿ ವಿಶೇಷ ರಜಾ ಪೀಠದ ಮುಂದೆ ಅರ್ಜಿ ಸಲ್ಲಿಸಿದ್ದರು. ಪ್ರಕರಣ ಇನ್ನೂ ಸುಪ್ರೀಂ ಕೋರ್ಟ್‌ನಲ್ಲಿ ವಿಚಾರಣೆಗೆ ಬಾಕಿಯಿದೆ.
ವಿರೋಧ ಪಕ್ಷದ ನಾಯಕ ಯೂರಿ ಅಲೆಮಾವೊ ಅವರು ಭಾಟಿಕರ್ ನಿಧನಕ್ಕೆ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.
‘ಸಾರ್ವಜನಿಕ ಸೇವೆಗೆ ಅವರ ಅಚಲ ಬದ್ಧತೆಯನ್ನು ಸದಾ ಸ್ಮರಿಸಲಾಗುತ್ತದೆ. ಈ ದುಃಖದ ಸಮಯದಲ್ಲಿ ಅವರ ಕುಟುಂಬ, ಸಂಬಂಧಿಕರು ಹಾಗೂ ಸ್ನೇಹಿತರಿಗೆ ಹೃತೂರ್ವಕ ಸಂತಾಪಗಳು. ಅವರ ಆತ್ಮಕ್ಕೆ ಶಾಂತಿ ಸಿಗಲಿ’ ಎಂದು ಅವರು ಹೇಳಿದ್ದಾರೆ.
ಗೋವಾ ಪ್ರದೇಶ ಕಾಂಗ್ರೆಸ್ ಸಮಿತಿ (GPCC) ಕೂಡಾ ತನ್ನ ಪಕ್ಷದ ನಾಯಕನಿಗೆ ಶ್ರದ್ಧಾಂಜಲಿ ಸಲ್ಲಿಸಿದೆ.
‘ಡಾ. ಕೇತನ್ ಭಾಟಿಕರ್ ಅವರ ನಿಧನದಿಂದ ತೀವ್ರ ದುಃಖವಾಗಿದೆ. ಸಾರ್ವಜನಿಕ ಸೇವೆಗೆ ಅವರ ಸಮರ್ಪಣೆ, ಪಕ್ಷ ಹಾಗೂ ಸಮಾಜಕ್ಕೆ ನೀಡಿದ ಕೊಡುಗೆಗಳನ್ನು ಸದಾ ಗೌರವದಿಂದ ಸ್ಮರಿಸಲಾಗುತ್ತದೆ’ ಎಂದು ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಪ್ರಕಟಿಸಿದ ಸಂದೇಶದಲ್ಲಿ ತಿಳಿಸಿದೆ. ‘ಅವರ ಆತ್ಮಕ್ಕೆ ಶಾಂತಿ ಸಿಗಲಿ. ಕುಟುಂಬಕ್ಕೆ ಈ ಅಪಾರ ನಷ್ಟವನ್ನು ಭರಿಸುವ ಶಕ್ತಿ ಸಿಗಲಿ’ ಎಂದು GPCC ಸಂತಾಪ ಸೂಚಿಸಿದೆ.
ಗೋವಾ ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಅವರು ಕೂಡಾ ಭಾಟಿಕರ್ ನಿಧನಕ್ಕೆ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.
‘ಅವರ ಅಗಲಿಕೆ ವೈದ್ಯಕೀಯ ಸಮುದಾಯಕ್ಕೆ ಅಪಾರ ನಷ್ಟವಾಗಿದೆ’ ಎಂದು ಅವರು ಹೇಳಿದ್ದಾರೆ.
ಡಾ. ಕೇತನ್ ಭಾಟಿಕರ್ ಅವರು ಖ್ಯಾತ ಫಿಸಿಯೊಥೆರಪಿಸ್ಟ್ ಆಗಿದ್ದರು. ‘ಈ ಕಷ್ಟಕರ ಸಮಯದಲ್ಲಿ ಅವರ ಕುಟುಂಬ ಮತ್ತು ಸ್ನೇಹಿತರಿಗೆ ಸಂತಾಪಗಳು’ ಎಂದು ಮುಖ್ಯಮಂತ್ರಿ ಸಾವಂತ್ ಹೇಳಿದ್ದಾರೆ.