ಗೋಳಿತ್ತೊಟ್ಟು ಜಂಕ್ಷನ್‌ನಲ್ಲಿ ಕಾರು-ಬೈಕ್ ನಡುವೆ ಭೀಕರ ಅಪಘಾತ: ಅರಸಿನಮಕ್ಕಿ ಸಹಕಾರ ಸಂಘದ ಉದ್ಯೋಗಿ ಸಾ*ವು

ಉಪ್ಪಿನಂಗಡಿ: ಕಾರು ಮತ್ತು ಬೈಕ್ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟಿದ್ದು, ಸಹಸವಾರೆ ಗಂಭೀರವಾಗಿ ಗಾಯಗೊಂಡ ಘಟನೆ ಗೋಳಿತ್ತೊಟ್ಟು ಜಂಕ್ಷನ್‌ನಲ್ಲಿ ರವಿವಾರ ಮಧ್ಯಾಹ್ನ ಸಂಭವಿಸಿದೆ.

ಬೆಳ್ತಂಗಡಿ ತಾಲ್ಲೂಕಿನ ಅರಸಿನಮಕ್ಕಿ ನಿವಾಸಿ, ಅರಸಿನಮಕ್ಕಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಉದ್ಯೋಗಿ ಸದಾನಂದ ಆಚಾರ್ಯ (59) ಮೃತಪಟ್ಟವರು. ಬೈಕ್‌ನಲ್ಲಿದ್ದ ಅವರ ಪತ್ನಿ ಉಷಾ ಅವರು ಗಂಭೀರವಾಗಿ ಗಾಯಗೊಂಡಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಸದಾನಂದ ಆಚಾರ್ಯ ಅವರು ಅರಸಿನಮಕ್ಕಿಯಿಂದ ಉಪ್ಪಿನಂಗಡಿಗೆ ಕೊಕ್ಕಡ ಮಾರ್ಗವಾಗಿ ಬೈಕ್‌ನಲ್ಲಿ ಬರುತ್ತಿದ್ದರು. ಗೋಳಿತ್ತೊಟ್ಟು ಜಂಕ್ಷನ್‌ನಲ್ಲಿ ರಾಷ್ಟ್ರೀಯ ಹೆದ್ದಾರಿ ಪ್ರವೇಶಿಸುತ್ತಿದ್ದಂತೆ, ಉಪ್ಪಿನಂಗಡಿಯಿಂದ ಶಿರಾಡಿ ಕಡೆಗೆ ಸಾಗುತ್ತಿದ್ದ ಕಾರು ಬೈಕ್‌ಗೆ ಡಿಕ್ಕಿ ಹೊಡೆದಿದೆ. ಅಪಘಾತದ ತೀವ್ರತೆಗೆ ಸದಾನಂದ ಅವರು ರಸ್ತೆಗೆ ಎಸೆಯಲ್ಪಟ್ಟು ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ. ಪುತ್ತೂರು ಸಂಚಾರಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡಿದ್ದಾರೆ.