ಮಲೆಮಹದೇಶ್ವರ ಬೆಟ್ಟದಲ್ಲಿ ಚಿರತೆ ಅಟ್ಟಹಾಸ: ನಾಗಮಲೆ ಹಾದಿಯಲ್ಲಿ 10 ವರ್ಷದ ಬಾಲಕನ ಬಲಿ

ಚಾಮರಾಜನಗರ : ಪ್ರಸಿದ್ಧ ಯಾತ್ರಾಸ್ಥಳ ಮಲೆಮಹದೇಶ್ವರ ಬೆಟ್ಟದ ಸಮೀಪದ ನಾಗಮಲೆ ಹಾದಿಯಲ್ಲಿ ರವಿವಾರ ಬೆಳಗ್ಗೆ ಚಿರತೆಯೊಂದು ದಾಳಿ ನಡೆಸಿ 10 ವರ್ಷದ ಬಾಲಕನನ್ನು ಬಲಿಪಡೆದಿದೆ.

ಬೆಂಗಳೂರು ಮೂಲದ ಹರ್ಷಿತ್ (10) ಮೃತಪಟ್ಟ ಬಾಲಕ. ಹನೂರು ತಾಲ್ಲೂಕಿನ ಮಲೆಮಹದೇಶ್ವರ ಬೆಟ್ಟಕ್ಕೆ ಕುಟುಂಬಸ್ಥರ ಜೊತೆ ದರ್ಶನಕ್ಕೆ ಬಂದಿದ್ದ ಹರ್ಷಿತ್, ರವಿವಾರ ಮುಂಜಾನೆ ನಾಗಮಲೆಗೆ ತೆರಳುತ್ತಿದ್ದ ವೇಳೆ ಈ ಘಟನೆ ಸಂಭವಿಸಿದೆ. ಹಾದಿಯಲ್ಲಿ ಸಾಗುತ್ತಿದ್ದಾಗ ಪೊದೆಯಲ್ಲಿದ್ದ ಚಿರತೆ ಏಕಾಏಕಿ ಬಾಲಕನ ಮೇಲೆ ಎರಗಿ ಕಾಡಿನೊಳಗೆ ಎಳೆದೊಯ್ದಿದೆ.
ಕುಟುಂಬಸ್ಥರು ಹಾಗೂ ಭಕ್ತರು ಸುಮಾರು ಅರ್ಧ ಗಂಟೆಗಳ ಕಾಲ ತೀವ್ರ ಹುಡುಕಾಟ ನಡೆಸಿದ ನಂತರ ಹರ್ಷಿತ್ನ ಮೃತದೇಹ ಕಾಡಿನೊಳಗೆ ಪತ್ತೆಯಾಗಿದೆ. ಮೃತದೇಹವನ್ನು ಮಲೆಮಹದೇಶ್ವರ ಬೆಟ್ಟದ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ರವಾನಿಸಲಾಗಿದೆ. ಕಳೆದ ಕೆಲ ತಿಂಗಳ ಹಿಂದೆಯಷ್ಟೇ ಇದೇ ಭಾಗದಲ್ಲಿ ಚಿರತೆ ದಾಳಿಗೆ ಪಾದಯಾತ್ರಿಯೊಬ್ಬರು ಮೃತಪಟ್ಟಿದ್ದರು. ಇದೀಗ ಬಾಲಕನ ಸಾವು ಭಕ್ತಾದಿಗಳಲ್ಲಿ ಅತೀವ ಭಯ ಹಾಗೂ ಆಕ್ರೋಶಕ್ಕೆ ಕಾರಣವಾಗಿದೆ. ಘಟನಾ ಸ್ಥಳದಲ್ಲಿ ಪೋಷಕರ ಆಕ್ರಂದನ ಮುಗಿಲು ಮುಟ್ಟುವಂತಿತ್ತು.