ಬೆಂಗಳೂರಿನಲ್ಲಿ ಮಳೆಗೆ ಒಂಬತ್ತು ಬಲಿ: ವಿದ್ಯುತ್ ಶಾಕ್‌ಗೆ ಇಬ್ಬರು ಬಲಿ

ಬೆಂಗಳೂರು: ನಗರದಲ್ಲಿ ಮಳೆಯ ಆರ್ಭಟ ಮುಂದುವರಿಯುತ್ತಿದ್ದು, ಇಂದು ಸಂಜೆ ಸಂಭವಿಸಿದ ಮಳೆಯ ಅವಾಂತರಗಳಿಗೆ ನಗರದಲ್ಲಿ ಮತ್ತೆರಡು ಬಲಿಯಾಗಿದೆ. ಜೆ.ಪಿ. ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ವಿದ್ಯುತ್ ತಂತಿ ಸ್ಪರ್ಶಿಸಿ ಯುವಕನೊಬ್ಬ ಸ್ಥಳದಲ್ಲೇ ಮೃತಪಟ್ಟಿದ್ದಾನೆ.

ಇದಕ್ಕೂ ಮುನ್ನ ಶಿವಾಜಿನಗರದ ಬೌರಿಂಗ್ ಆಸ್ಪತ್ರೆಯ ಕಾಂಪೌಂಡ್ ಕುಸಿತದಿಂದ 7 ಜನರು ಸಾವನ್ನಪ್ಪಿದ್ದಾರೆ. ಇದರ ನಂತರ ಯಾರಬ್ ನಗರದಲ್ಲಿ ಮಳೆಯಲ್ಲಿ ಬೈಕ್ ಪಾರ್ಕ್ ಮಾಡುತ್ತಿದ್ದ ಸೈಯದ್ ಸೂಫಿಯಾನ್ ಎಂಬ ವಿದ್ಯಾರ್ಥಿ ವಿದ್ಯುತ್ ಶಾಕ್‍ಗೆ ಬಲಿಯಾಗಿದ್ದಾನೆ. ಇದೀಗ ಒಟ್ಟು ಒಂಬತ್ತು ಸಾವು ಸಂಭವಿಸಿದೆ.
ಜೆ.ಪಿ. ನಗರದ ಮಿನಿ ಫಾರೆಸ್ಟ್, 15ನೇ ಕ್ರಾಸ್ ಬಳಿ ಈ ದುರ್ಘಟನೆ ನಡೆದಿದೆ. ಸುಮಾರು 30-35 ವರ್ಷ ವಯಸ್ಸಿನ ರಘು ಎಂಬುವವರು ಮಳೆಯ ನಡುವೆ ಸಂಚರಿಸುತ್ತಿದ್ದಾಗ, ರಸ್ತೆಯಲ್ಲಿದ್ದ ವಿದ್ಯುತ್ ಕಂಬದ ಬಳಿ ಹರಿದುಬಿದ್ದಿದ್ದ ವಿದ್ಯುತ್ ತಂತಿ ತಗುಲಿದ್ದರಿಂದ ತೀವ್ರವಾಗಿ ಶಾಕ್ ತಗುಲಿದೆ. ವಿದ್ಯುತ್ ಪ್ರವಾಹದ ತೀವ್ರತೆಗೆ ರಘು ಅವರು ಸ್ಥಳದಲ್ಲೇ ಪ್ರಾಣ ಕಳೆದುಕೊಂಡಿದ್ದಾರೆ.
ಘಟನಾ ಸ್ಥಳಕ್ಕೆ ಜೆ.ಪಿ. ನಗರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ. ಬೆಸ್ಕಾಂ ಅಧಿಕಾರಿಗಳ ನಿರ್ಲಕ್ಷ್ಯವೇ ಈ ಸಾವಿಗೆ ಕಾರಣ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.