ಸುಡುಗಾಡಿನ ಚಿತೆಗಳ ನಡುವೆ ಸಪ್ತಪದಿ; ಸ್ಮಶಾನದಲ್ಲಿ ನಡೆದ ಮದುವೆಗೆ ಬೆಟ್ಟದ ಜನರ ತೀವ್ರ ಆಕ್ರೋಶ!

ಅಲ್ಮೋರಾ: ಅಂತ್ಯಕ್ರಿಯೆ ಮಾಡುವ ಜಾಗದಲ್ಲಿ ನವ ಜೋಡಿಗಳು ತಮ್ಮ ಜೀವನ ಆರಂಭಿಸಿದ್ದು, ಸಾಕಷ್ಟು ಚರ್ಚೆಗಳನ್ನು ಹುಟ್ಟುಹಾಕಿದೆ. ಇಬ್ಬರೂ ಸ್ಮಶಾನದಲ್ಲಿ ಉರಿಯುವ ಚಿತೆಗಳ ನಡುವೆ ಸಪ್ತಪದಿ ತುಳಿದಿರುವ ಘಟನೆ ಉತ್ತರಾಖಂಡದ ಅಲ್ಮೋರಾದಲ್ಲಿ ನಡೆದಿದೆ. ರಾಮಗಂಗಾ ಮತ್ತು ಬದನ್ಗಢ ನದಿಗಳ ಪವಿತ್ರ ಸಂಗಮ ಸ್ಥಳವದು. ದಶಕಗಳಿಂದಲೂ ಸುತ್ತಮುತ್ತಲ ಗ್ರಾಮಸ್ಥರು ತಮ್ಮ ಪ್ರೀತಿಪಾತ್ರರ ಅಂತ್ಯಕ್ರಿಯೆ ನೆರವೇರಿಸಿ ವಿದಾಯ ಹೇಳುವ ಸುಡುಗಾಡು. ಆದರೆ, ಕಳೆದ ಭಾನುವಾರ ಈ ಸ್ಮಶಾನವು ಯಾರಿಗೂ ಊಹಿಸಲೂ ಅಸಾಧ್ಯವಾದ ರೂಪದಲ್ಲಿ ಬದಲಾಗಿತ್ತು. ಎಲ್ಲಿ ಅಂತ್ಯಕ್ರಿಯೆಯ ಚಿತೆಗಳು ಉರಿಯಬೇಕಿತ್ತೋ, ಅಲ್ಲಿ ಅದ್ದೂರಿ ಮಂಟಪ, ಹೂವಿನ ಅಲಂಕಾರ, ಮದುವೆ(Marriage) ನಡೆದೇ ಹೋಗಿದೆ.
ಕಾರ್ಬೆಟ್ ರಾಷ್ಟ್ರೀಯ ಉದ್ಯಾನವನದ ಸಮೀಪವಿರುವ ಈ ಸಂಗಮ ಸ್ಥಳವು ಅತ್ಯಂತ ರಮಣೀಯವಾಗಿದೆ. ಹತ್ತಿರದ ರೆಸಾರ್ಟ್ನಲ್ಲಿ ತಂಗಿದ್ದ ಪ್ರವಾಸಿಗರಿಗೆ ಈ ಸ್ಥಳದ ನೈಸರ್ಗಿಕ ಸೌಂದರ್ಯ ಅದೆಷ್ಟು ಇಷ್ಟವಾಯಿತೆಂದರೆ, ಅವರು ಲೌಕಿಕ ನಂಬಿಕೆಗಳನ್ನು ಗಾಳಿಗೆ ತೂರಿದರು. ರೆಸಾರ್ಟ್ ಮ್ಯಾನೇಜರ್ ರಾಕೇಶ್ ಶರ್ಮಾ ಅವರು, ಇದು ಸ್ಮಶಾನ, ಇಲ್ಲಿ ಶುಭ ಕಾರ್ಯ ಮಾಡುವುದು ಬೇಡ ಎಂದು ಎಚ್ಚರಿಸಿದ್ದರೂ ಸಹ, ಪ್ರವಾಸಿಗರು ಮಾತ್ರ ಮೊಂಡುತನದಿಂದ ಆ ಸ್ಥಳವನ್ನೇ ತಮ್ಮ ವಿವಾಹಕ್ಕೆ ಆರಿಸಿಕೊಂಡರು.
ನದಿ ದಂಡೆಯ ಸ್ಮಶಾನದಲ್ಲಿ ಚಪ್ಪರ ಹಾಕಿ, ವಿದ್ಯುತ್ ದೀಪಗಳಿಂದ ಅಲಂಕರಿಸಿ ಅದ್ದೂರಿಯಾಗಿ ಮದುವೆ ನೆರವೇರಿಸಲಾಯಿತು. ಈ ವಿವಾಹದ ವೀಡಿಯೊಗಳು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗುತ್ತಿದ್ದಂತೆಯೇ ಸ್ಥಳೀಯರ ತಾಳ್ಮೆಯ ಕಟ್ಟೆ ಒಡೆಯಿತು. ಜೀವನದ ಅಂತ್ಯವನ್ನು ಕಾಣುವ ಪವಿತ್ರ ಘಾಟ್ನಲ್ಲಿ ಇಂತಹ ಅಟ್ಟಹಾಸ ನಡೆಯುವುದು ಬೆಟ್ಟದ ಸಂಸ್ಕೃತಿಗೆ (Pahari Culture) ಎಸಗಿದ ದ್ರೋಹ ಎಂದು ಗ್ರಾಮಸ್ಥರು ಕಿಡಿಕಾರಿದ್ದಾರೆ.ಮಾಜಿ ಜಿಲ್ಲಾ ಪಂಚಾಯತ್ ಸದಸ್ಯ ನಾರಾಯಣ್ ಸಿಂಗ್ ರಾವತ್ ಸೇರಿದಂತೆ ಅನೇಕ ಗಣ್ಯರು ಈ ಕೃತ್ಯವನ್ನು ತೀವ್ರವಾಗಿ ಖಂಡಿಸಿದ್ದಾರೆ. ನದಿ ತೀರದ ಚಿತಾಗಾರಗಳಲ್ಲಿ ಯಾವುದೇ ಶುಭ ಕಾರ್ಯ ಮಾಡುವುದು ಅಶುಭ ಮತ್ತು ನಿಷಿದ್ಧ. ಇದು ಕೇವಲ ಒಂದು ಮದುವೆಯಲ್ಲ, ನಮ್ಮ ನಂಬಿಕೆಗೆ ಮಾಡಿದ ಅವಮಾನ, ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು. ಅರಣ್ಯ ಪ್ರದೇಶದ ವ್ಯಾಪ್ತಿಗೆ ಬರುವ ನದಿ ತೀರದಲ್ಲಿ ಇಷ್ಟೊಂದು ಗದ್ದಲದ ಕಾರ್ಯಕ್ರಮ ನಡೆಸಲು ಅವಕಾಶ ನೀಡಿದ್ದರ ಬಗ್ಗೆಯೂ ಪ್ರಶ್ನೆಗಳು ಎದ್ದಿವೆ.
ವಿಷಯ ಗಂಭೀರ ಸ್ವರೂಪ ಪಡೆದುಕೊಳ್ಳುತ್ತಿದ್ದಂತೆಯೇ ಆಡಳಿತ ಎಚ್ಚೆತ್ತುಕೊಂಡಿದೆ. ತಹಶೀಲ್ದಾರ್ ಅಬಿದ್ ಅಲಿ ಅವರು ಪ್ರತಿಕ್ರಿಯಿಸಿ, ಯಾವುದೇ ಸಾರ್ವಜನಿಕ ಸ್ಥಳ ಅಥವಾ ಸ್ಮಶಾನದಲ್ಲಿ ಅನುಮತಿಯಿಲ್ಲದೆ ಖಾಸಗಿ ಕಾರ್ಯಕ್ರಮ ನಡೆಸುವುದು ಕಾನೂನುಬಾಹಿರ. ವೈರಲ್ ವೀಡಿಯೊ ಆಧರಿಸಿ ತನಿಖೆ ನಡೆಸುತ್ತೇವೆ ಮತ್ತು ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುತ್ತೇವೆ ಎಂದು ತಿಳಿಸಿದ್ದಾರೆ.
