ತಡರಾತ್ರಿ ಪ್ರಣಯ ಸಲ್ಲಾಪಕ್ಕೆ ಇಳಿದಿದ್ದ ಜೋಡಿಗೆ ಜನರಿಂದ ತರಾಟೆ

ಉಡುಪಿ: ಮಣಿಪಾಲದಲ್ಲಿ ಯುವಜೋಡಿಯೊಂದು ಸಾರ್ವಜನಿಕವಾಗಿ ಅಸಭ್ಯವಾಗಿ ವರ್ತಿಸುವ ಮೂಲಕ ಸ್ಥಳೀಯರ ಕೆಂಗಣ್ಣಿಗೆ ಗುರಿಯಾಗಿದೆ. ತಡರಾತ್ರಿ ನಡೆದ ಈ ಹೈಡ್ರಾಮಾದ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗುತ್ತಿದ್ದು, ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಗುಣಮಟ್ಟದ ಶಿಕ್ಷಣ ಪಡೆಯಲು ದೇಶದ ವಿವಿಧ ಮೂಲೆಗಳಿಂದ ವಿದ್ಯಾರ್ಥಿಗಳು ಮಣಿಪಾಲಕ್ಕೆ ಆಗಮಿಸುತ್ತಾರೆ. ಆದರೆ, ಇಲ್ಲಿನ ಹೈಟೆಕ್ ವ್ಯವಸ್ಥೆ ಮತ್ತು ಪಶ್ಚಿಮಾತ್ಯ ಸಂಸ್ಕೃತಿಯ ಪ್ರಭಾವದಿಂದ ಕೆಲವು ಯುವಕ-ಯುವತಿಯರು ಸಾರ್ವಜನಿಕ ಸ್ಥಳ ಎಂಬ ಅರಿವಿಲ್ಲದೆ ವಿದೇಶಿ ಪ್ರೇಮಿಗಳಂತೆ ವರ್ತಿಸುತ್ತಿದ್ದಾರೆ. ಸಾರ್ವಜನಿಕ ರಸ್ತೆಯಲ್ಲೇ ಪ್ರಣಯ ಸಲ್ಲಾಪಕ್ಕೆ ಇಳಿದಿದ್ದ ಈ ಜೋಡಿಯನ್ನು ಕಂಡ ಸ್ಥಳೀಯರು ತಕ್ಷಣವೇ ತರಾಟೆಗೆ ತೆಗೆದುಕೊಂಡಿದ್ದಾರೆ.
ಹೊಸ ವರ್ಷ ಅಥವಾ ವ್ಯಾಲೆಂಟೈನ್ಸ್ ಡೇ ದಿನಗಳಲ್ಲಿ ಇಂತಹ ದೃಶ್ಯಗಳು ಸಾಮಾನ್ಯವಾಗಿ ಬಿಟ್ಟಿವೆ ಎಂದು ಆಕ್ರೋಶ ವ್ಯಕ್ತಪಡಿಸಿರುವ ಉಡುಪಿ ಜನ, ಮಣಿಪಾಲದ ಘನತೆಗೆ ಧಕ್ಕೆ ತರುವಂತಹ ಈ ರೀತಿಯ ಅಸಭ್ಯ ವರ್ತನೆಗಳು ಕೂಡಲೇ ನಿಲ್ಲಬೇಕು ಎಂದು ಆಗ್ರಹಿಸಿದ್ದಾರೆ. ಸ್ಥಳೀಯರು ಪ್ರಶ್ನಿಸಿದಾಗ ಜೋಡಿ ಅಸಹಜವಾಗಿ ವರ್ತಿಸಿದ್ದು, ಈ ವೇಳೆ ಮಾತಿನ ಚಕಮಕಿಯೂ ನಡೆದಿದೆ ಎನ್ನಲಾಗಿದೆ. ಯುವಜೋಡಿಯ ವಿಕೃತಿಯನ್ನು ಸ್ಥಳೀಯರು ಮೊಬೈಲ್‌ಗಳಲ್ಲಿ ಸೆರೆಹಿಡಿದಿದ್ದು, ಸದ್ಯ ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಪೊಲೀಸರು ಇಂತಹ ಘಟನೆಗಳ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು ಎಂಬ ಒತ್ತಾಯ ಕೇಳಿಬಂದಿದೆ.
