Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

ಸುಶಾಂತ್ ಮ್ಯಾನೇಜರ್ ದಿಶಾ ಸಾಲಿಯನ್ ಸಾವು: 5 ವರ್ಷಗಳ ನಂತರ ಹೊಸ ಟ್ವಿಸ್ಟ್

Spread the love

ಮುಂಬೈ: ದಿವಂಗತ ನಟ ಸುಶಾಂತ್ ಸಿಂಗ್ ರಜಪೂತ್ ಅವರ ಮಾಜಿ ಮ್ಯಾನೇಜರ್, ಕರಾವಳಿ ಮೂಲದ ದಿಶಾ ಸಾಲಿಯಾನ್‌ ಸಾವಿನ ಪ್ರಕರಣವೀಗ 5 ವರ್ಷಗಳ ನಂತರ ಮುನ್ನಲೆಗೆ ಬಂದಿದೆ. ದಿಶಾ ಸಾಲಿಯನ್ ಅವರ ತಂದೆ ಸತೀಶ್ ಸಾಲಿಯನ್ ಅವರು ಮರು ತನಿಖೆಗೆ ಕೋರಿ ಮುಂಬೈ ಹೈಕೋರ್ಟ್ ಮೊರೆ ಹೋಗಿದ್ದು, ರಾಜಕೀಯ ವಲಯದಲ್ಲಿ ಸಂಚಲನ ಮೂಡಿಸಿದೆ. ನಿಗೂಢವಾಗಿ ಉಳಿದಿರುವ ಮಗಳ ಸಾವಿನ ಬಗ್ಗೆ ಮರು ತನಿಖೆಗೆ ಆದೇಶ ನೀಡುವಂತೆ ಕೋರ್ಟ್​ನಲ್ಲಿ ಅರ್ಜಿ ಸಲ್ಲಿಸಿರುವ ಸತೀಶ್ ಸಾಲಿಯನ್, ರಾಷ್ಟ್ರೀಯ ತನಿಖಾ ಸಂಸ್ಥೆಯ ಮೂಲಕ ಈ ವಿಷಯದ ಬಗ್ಗೆ ಸಮಗ್ರ ತನಿಖೆ ನಡೆಸಬೇಕೆಂದು ಒತ್ತಾಯಿಸಿದ್ದಾರೆ.

ಜೂನ್ 8, 2020 ರಂದು ನನ್ನ ಪುತ್ರಿ ಮೃತಪಟ್ಟಿದ್ದು, ಆಕೆಯದ್ದು ಆತ್ಮಹತ್ಯೆ ಅಲ್ಲ. ಆಕೆಯನ್ನು ಕಟ್ಟಡದಿಂದ ಎಸೆದು ಕೊಲ್ಲಲಾಗಿದೆ. ರಾಜಕೀಯ ಪ್ರಭಾವದಿಂದಾಗಿ ಈ ಪ್ರಕರಣದಲ್ಲಿ ಆರೋಪಿಗಳನ್ನು ಉಳಿಸುವ ಪ್ರಯತ್ನ ನಡೆದಿದೆ ಎಂದು ಮಹಾರಾಷ್ಟ್ರದ ಮಾಜಿ ಸಚಿವರೊಬ್ಬರು ಸೇರಿದಂತೆ ಇತರರ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ.

ನನ್ನ ಪುತ್ರಿಯ ಸಾವಿನ ಪ್ರಕರಣವನ್ನು ಹತ್ತಿಕ್ಕುವ ಪ್ರಯತ್ನ ನಡೆದಿದೆ. ಮಲಾಡ್‌ನಲ್ಲಿರುವ ಗ್ಯಾಲಕ್ಸಿ ರೆಸಿಡೆನ್ಸಿ ಕಟ್ಟಡದಿಂದ ಬಿದ್ದು ದಿಶಾ ಸಾಲಿಯನ್ ಮೃತಪಟ್ಟಿರುವುದಾಗಿ ಪೊಲೀಸರು ವರದಿ ನೀಡಿದ್ದಾರೆ. ಗ್ಯಾಲಕ್ಸಿ ರೆಸಿಡೆನ್ಸಿ ಕಟ್ಟಡದಲ್ಲಿ ಅಂದು ರಾತ್ರಿ ನಡೆದ ಪಾರ್ಟಿಯಲ್ಲಿ ಅತ್ಯಾಚಾರ ನಡೆಸಿ ನನ್ನ ಮಗಳನ್ನು ಕೊಲೆ ಮಾಡಿರುವ ಮಹಿತಿ ಇದೆ. ಬಳಿಕ ಸಾಕ್ಷ್ಯಗಳನ್ನು ನಾಶಮಾಡಲು ಆಕೆಯ ಆತ್ಮಹತ್ಯೆಯನ್ನು ನಕಲಿಯಾಗಿ ಮಾಡಲಾಯಿತು. ಅಂದು ನಡೆದ ಪಾರ್ಟಿಯಲ್ಲಿ ರಾಜಕೀಯ ಪ್ರಭಾವಿ ವ್ಯಕ್ತಿ ಸೇರಿದಂತೆ ಅವರ ಅಂಗರಕ್ಷಕರು ಹಾಗೂ ಸಿನಿಮಾ ನಟರು ಹಾಜರಿದ್ದರು. ಪಾರ್ಟಿ ಬಳಿಕ ದಿಶಾ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿ ಕೊಲೆ ಮಾಡಿರುವ ಅನುಮಾನ ಇದೆ. ಘಟನೆ ಬಳಿಕ ರಾಜಕೀಯ ಪ್ರಭಾವಿ ವ್ಯಕ್ತಿಯು ಹಿರಿಯ ಪೊಲೀಸ್ ಅಧಿಕಾರಿಗಳಿಗೆ ಕರೆ ಮಾಡಿ ಪ್ರಕರಣವನ್ನು ಹತ್ತಿಕ್ಕುವ ಕೆಲಸ ಮಾಡಿಸಿದ್ದಾರೆ ಎಂಬ ಮಾಹಿತಿ ಇದೆ.
ಪ್ರತ್ಯಕ್ಷದರ್ಶಿಗಳ ಮೇಲೆ ಒತ್ತಡ ಆರೋಪ: ಪ್ರತ್ಯಕ್ಷದರ್ಶಿಗಳ ಮೇಲೆ ಒತ್ತಡ ಹೇರಲಾಗಿದೆ. ಬಿಜೆಪಿ ಶಾಸಕ ನಿತೇಶ್ ರಾಣೆ ಸೇರಿದಂತೆ ಹಲವರು ಪ್ರಕರಣದ ಸತ್ಯಾಸತ್ಯತೆ ತಿಳಿದು ಖಂಡಿಸಿದ್ದಾರೆ. ಆದರೆ, ಮುಂಬೈ ಪೊಲೀಸರು ಪ್ರಕರಣವನ್ನು ತನಿಖೆ ಮಾಡುವ ಬದಲು ನಿಗ್ರಹಿಸಲು ಪ್ರಯತ್ನಿಸಿದ್ದಾರೆ ಎಂಬ ಮಾಹಿತಿ ಇದೆ. ಪ್ರಕರಣದಲ್ಲಿ, ತನಿಖೆಯ ಹೆಸರಿನಲ್ಲಿ ಪ್ರಭಾವಿ ವ್ಯಕ್ತಿಗಳನ್ನು ಉಳಿಸಲು ನಾಟಕ ಆಡಲಾಗಿದೆ. ಈ ಪ್ರಕರಣದ ನಿಜವಾದ ಆರೋಪಿಗಳು ಬೆಳಕಿಗೆ ಬಂದಿಲ್ಲ. ಈ ಪ್ರಕರಣದಲ್ಲಿ ಸತ್ಯಾಂಶ ಇನ್ನೂ ಹೊರಬಂದಿಲ್ಲ. ಇದು ಆಕಸ್ಮಿಕ ಅಥವಾ ಆತ್ಮಹತ್ಯೆಯಲ್ಲ. ಬದಲಿಗೆ, ಆಕೆಯನ್ನು ಕೊಲೆ ಮಾಡಿರುವ ಅನುಮಾನ ಇದೆ. ಪ್ರಕರಣದ ತನಿಖೆ ನಡೆಸುತ್ತಿದ್ದ ಪೊಲೀಸರು ಆಕೆಯದ್ದು ಆಕಸ್ಮಿಕ ಸಾವು ಅಂತ ಒಪ್ಪಿಕೊಳ್ಳುವಂತೆ ಒತ್ತಡ ಹೇರಿವೆ. ಆದರೆ, ಈ ಬಗ್ಗೆ ಸಾಂದರ್ಭಿಕ ಸಾಕ್ಷ್ಯದಲ್ಲಿ ಅಂತಹ ಯಾವುದೇ ವಿಷಯಗಳು ಸಿಕ್ಕಿಲ್ಲ. ಹಾಗಾಗಿ ನ್ಯಾಯಾಲಯವು ಈ ಪ್ರಕರಣದಲ್ಲಿ ಮಧ್ಯಪ್ರವೇಶಸಬೇಕು. ಮಧ್ಯಪ್ರವೇಶಸಿಸದಿದ್ದರೆ ನಮಗೆ ನ್ಯಾಯ ಸಿಗುವುದಿಲ್ಲ. ಹಾಗಾಗಿ ರಾಜಕೀಯ ಪ್ರಭಾವಿ ವ್ಯಕ್ತಿಯ ವಿರುದ್ಧ ದೂರು ದಾಖಲಿಸಲು ಹಾಗೂ ತನಿಖೆಯನ್ನು ಸಿಬಿಐಗೆ ವರ್ಗಾಯಿಸಲು ಆದೇಶಿಸುವಂತೆ ಕೋರಿ ಬಾಂಬೆ ಹೈಕೋರ್ಟ್‌ನಲ್ಲಿ ಸತೀಶ್ ಸಾಲಿಯನ್ ಪರ ವಕೀಲ ನೀಲೇಶ್ ಓಜಾ ಅವರು ಗುರುವಾರ ಅರ್ಜಿ ಸಲ್ಲಿಸಿದ್ದಾರೆ ಎಂದು ತಿಳಿದುಬಂದಿದೆ. 5 ವರ್ಷಗಳ ಹಿಂದಿನ ಪ್ರಕರಣವೊಂದು ಮತ್ತೆ ರಾಜಕೀಯ ವಲಯದಲ್ಲಿ ಸಂಚಲನ ಮೂಡಿಸದ್ದರಿಂದ ಎಲ್ಲರ ಚಿತ್ತ ಹೈಕೋರ್ಟ್ ಮೇಲೆ ಇದೆ.
ಮಹಡಿಯಿಂದ ಬಿದ್ದು ಸಾವು ಎಂಬ ಉಲ್ಲೇಖ: ದಿಶಾಳ ಸಾವು 14ನೇ ಮಹಡಿಯಿಂದ ಬಿದ್ದು ಸಂಭವಿಸಿದೆ ಅಂತ ವರದಿಲ್ಲಿ ಉಲ್ಲೇಖಿಸಲಾಗಿದೆ. ಆದರೆ, ಸಾಂದರ್ಭಿಕ ಸಾಕ್ಷ್ಯಗಳಲ್ಲಿ ಅಂತಹ ಯಾವುದೇ ಪುರಾವೆಗಳು ಲಭ್ಯವಾಗಿಲ್ಲ. ಆಕೆಯ ತಲೆಯ ಮೇಲೆ ಯಾವುದೇ ಗಾಯದ ಗುರುತು ಸಹ ಆಗಿರಲ್ಲ. ಮೂಳೆಗಳಲ್ಲಿ ಯಾವುದೇ ಮುರಿತ ಕಂಡು ಬಂದಿಲ್ಲ. ಅಲ್ಲದೇ, ಅವರು ಬಿದ್ದ ಸ್ಥಳದಲ್ಲಿ ಯಾವುದೇ ರಕ್ತದ ಕಲೆ ಕೂಡ ಇರಲಿಲ್ಲ. ಅಂದಿನ ಸಿಸಿಟಿವಿ ದೃಶ್ಯಾವಳಿಗಳು ನಿಗೂಢವಾಗಿ ಕಣ್ಮರೆಯಾಗಿವೆ. ಈ ಪ್ರಕರಣದ ಆರೋಪಿಗಳ ಮೊಬೈಲ್ ಲೊಕೇಶನ್​ ಘಟನೆಯ ಸ್ಥಳದಲ್ಲಿದೆ ಎಂಬ ಅಂಶವನ್ನು ತನಿಖಾ ಸಂಸ್ಥೆಗಳು ನಿರ್ಲಕ್ಷಿಸಿವೆ. ಡಿಜಿಟಲ್ ಫೋರೆನ್ಸಿಕ್ ಸಾಕ್ಷ್ಯವಾಗಿ ಪ್ರಸ್ತುತಪಡಿಸಬಹುದಾದ ಫೋನ್ ಕರೆ ದಾಖಲೆಗಳನ್ನು ಉದ್ದೇಶಪೂರ್ವಕವಾಗಿ ನಾಶಪಡಿಸಲಾಗಿದೆ ಎಂದು ಅರ್ಜಿಯಲ್ಲಿ ಸತೀಶ್ ಸಾಲಿಯನ್ ಪರ ವಕೀಲರು ಉಲ್ಲೇಖಿಸಿದ್ದಾರೆ.

ಸಚಿವ ನಿತೇಶ್​ ರಾಣೆ ಹೇಳಿದ್ದು ಹೀಗೆ : ದಿಶಾ ಸಾಲಿಯನ್ ಸಾವಿಗೆ ಬಗ್ಗೆ ಆಗಾಗ ಅನುಮಾನ ವ್ಯಕ್ತಪಡಿಸುತ್ತಿದ್ದ ಸಚಿವ ನಿತೇಶ್ ರಾಣೆ ಕೂಡ ಇಂದಿನ ಅರ್ಜಿ ಬಗ್ಗೆ ಪ್ರತಿಕ್ರಿಯಿಸಿದ್ದಾರೆ. ನಾನು ಮೊದಲ ದಿನಗಳಿಂದಲೇ ನನ್ನ ನಿಲುವನ್ನು ಸ್ಪಷ್ಟವಾಗಿ ಹೇಳುತ್ತಾ ಬಂದಿದ್ದೇನೆ. ದಿಶಾ ಅವರ ತಂದೆ ಹೇಳಿದ ಎಲ್ಲಾ ಹೆಸರುಗಳನ್ನು ನಾನು ತೆಗೆದುಕೊಂಡಿದ್ದೇನೆ. ಅಲ್ಲಿನ ಕಾವಲುಗಾರನಿಗೆ ಏನಾಯಿತು, ಮರಣೋತ್ತರ ಪರೀಕ್ಷಾ ವರದಿ ಏನಾಯಿತು ಎಂಬ ಬಗ್ಗೆ ಹಲವರನ್ನು ಪ್ರಶ್ನಿಸಿದ್ದೇನೆ. ದಿಶಾ ತಂದೆ ಸತೀಶ್ ಅವರು ಅರ್ಜಿಯಲ್ಲಿ ಮಾಜಿ ಸಚಿವ ಆದಿತ್ಯ ಠಾಕ್ರೆಯ ಹೆಸರನ್ನು ಉಲ್ಲೇಖಿಸಿದ್ದು, ಈಗ ಸತ್ಯ ಬಹಿರಂಗಗೊಳ್ಳಲಿದೆ. ಅಂದು ಆದಿತ್ಯ ಠಾಕ್ರೆಯನ್ನು ರಕ್ಷಿಸಿದವರು ಈಗ ಏನು ಹೇಳುತ್ತಾರೋ ಗೊತ್ತಿಲ್ಲ. ಈಗ ತನಿಖೆ ಹೇಗಿದೆ ಎಂದು ಅವರಿಗೆ ತಿಳಿಯುತ್ತದೆ. ಎನ್​ಸಿಬಿ ಅಧಿಕಾರಿ ಸಮೀರ್ ವಾಂಖೆಡೆ ಪ್ರಕರಣದ ತನಿಖೆ ಮಾಡಬೇಕು ಎಂದು ಒತ್ತಾಯಿಸಿದರು.
ಆದಿತ್ಯ ಠಾಕ್ರೆ ಪ್ರತಿಕ್ರಿಯೆ: ಕೋರ್ಟ್​ನಲ್ಲಿ ಅರ್ಜಿ ಸಲ್ಲಿಕೆ ಬಗ್ಗೆ ಪ್ರತಿಕ್ರಿಯೆ ನೀಡಿದ ಶಿವಸೇನೆ (ಯುಬಿಟಿ) ವಕ್ತಾರರು ಸತೀಶ್ ಸಾಲಿಯಾನ್ ಅವರ ಮನವಿಯ ಹಿಂದೆ ಪಿತೂರಿ ಇರಬಹುದೆಂದು ಹೇಳಿದ್ದಾರೆ. ಇನ್ನು ಪ್ರಕರಣಕ್ಕೆ ಸಂಬಂಧಿಸಿದಂತೆ ತಮ್ಮ ಪ್ರತಿಷ್ಠೆಗೆ ಧಕ್ಕೆ ತರುವ ಪ್ರಯತ್ನಗಳು ನಡೆಯುತ್ತಿವೆ ಎಂದು ಶಿವಸೇನೆ (ಯುಬಿಟಿ) ನಾಯಕ ಆದಿತ್ಯ ಠಾಕ್ರೆ ಕೂಡ ಹೇಳಿದ್ದಾರೆ. “ಕಳೆದ ಐದು ವರ್ಷಗಳಿಂದ ನನ್ನ ಪ್ರತಿಷ್ಠೆಗೆ ಕಳಂಕ ತರುವ ಪ್ರಯತ್ನಗಳು ನಡೆಯುತ್ತಿವೆ. ನಾವು ನ್ಯಾಯಾಲಯದಲ್ಲಿ ನಮ್ಮ ಪರವಾಗಿ ವಾದ ಮಂಡಿಸುತ್ತೇವೆ. ನ್ಯಾಯಾಲಯದಲ್ಲಿ ನಮ್ಮ ಉತ್ತರಗಳನ್ನು (ಆರೋಪಗಳಿಗೆ) ನೀಡುತ್ತೇವೆ” ಎಂದು ಮಹಾರಾಷ್ಟ್ರದ ಮಾಜಿ ಸಚಿವ ಠಾಕ್ರೆ ಸುದ್ದಿಗಾರರಿಗೆ ತಿಳಿಸಿದ್ದಾರೆ.


Spread the love
Share:

administrator

Leave a Reply

Your email address will not be published. Required fields are marked *