ಸಾಗರ: ಮನೆಯಂಗಳದಲ್ಲಿ ಆಟವಾಡುತ್ತಿದ್ದ 2 ವರ್ಷದ ಮಗು ಹಾವಿನ ಕಡಿತಕ್ಕೆ ಬಲಿ; ಹೆತ್ತವರ ಆಕ್ರಂದನ

ಸಾಗರ : ಶಿವಮೊಗ್ಗ ಜಿಲ್ಲೆಯ ಸಾಗರ ಪಟ್ಟಣದ ಎಸ್.ಎಸ್. ನಗರದಲ್ಲಿ ಮನೆಯ ಮುಂದೆ ಆಟವಾಡುತ್ತಿದ್ದ ಎರಡು ವರ್ಷದ ಮಗು ಹಾವಿನ ಕಡಿತಕ್ಕೆ ಬಲಿಯಾಗಿರುವ ಮನಕಲಕುವ ಘಟನೆ ನಡೆದಿದೆ. ಅಕ್ಷತಾ ಹಾಗೂ ಗಣೇಶ್ ದಂಪತಿಯ ಪುತ್ರ ಭವಿನ್ (2) ಮೃತಪಟ್ಟ ಬಾಲಕ.

ಮಗುವಿನ ತಾಯಿ ಅಕ್ಷತಾ ಸಾಗರದಲ್ಲಿರುವ ತಮ್ಮ ತವರು ಮನೆಗೆ ಬಂದಿದ್ದರು. ಮನೆಯ ಅಂಗಳದಲ್ಲಿ ಮಗು ಆಟವಾಡುತ್ತಿದ್ದಾಗ ವಿಷಪೂರಿತ ಹಾವು ಕಚ್ಚಿದೆ. ಮಗು ಜೋರಾಗಿ ಅಳತೊಡಗಿದ್ದನ್ನು ಗಮನಿಸಿದ ಪೋಷಕರು ಸ್ಥಳಕ್ಕೆ ಓಡಿ ಬಂದಾಗ ಹಾವಿನ ಕಡಿತದ ಗುರುತುಗಳು ಪತ್ತೆಯಾಗಿವೆ.
ಕೂಡಲೇ ಮಗುವನ್ನು ಸಾಗರ ಉಪವಿಭಾಗೀಯ ಆಸ್ಪತ್ರೆಗೆ ದಾಖಲಿಸಲಾಯಿತು. ಮಗುವಿನ ಸ್ಥಿತಿ ಗಂಭೀರವಾಗಿದ್ದರಿಂದ ಹೆಚ್ಚಿನ ಚಿಕಿತ್ಸೆಗಾಗಿ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ರವಾನಿಸಲಾಯಿತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಬಾಲಕ ಭವಿನ್ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾನೆ. ಈ ಕುರಿತು ಸಾಗರ ಟೌನ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದ್ದು, ಮಗುವನ್ನು ಕಳೆದುಕೊಂಡ ಕುಟುಂಬದ ಆಕ್ರಂದನ ಮುಗಿಲು ಮುಟ್ಟಿದೆ.