ಮಂಗಳೂರು ಉತ್ತರದಲ್ಲಿ ರಿಯಲ್ ಎಸ್ಟೇಟ್ ಮಾಫಿಯಾಗಳ ಹಾವಳಿಯಿಂದ ಸುಸ್ತಾದ ದುರ್ಗಾನಗರದ ಜನ

ಮಂಗಳೂರು :ಮಂಗಳೂರು ಉತ್ತರ ಕ್ಷೇತ್ರದ ದುರ್ಗಾನಗರ ವಾರ್ಡ್ ನಂಬರ್ 8ರಲ್ಲಿ ಕಳೆದ ಹಲವಾರು ವರ್ಷಗಳಿಂದ ಕೃತಕ ನೆರೆ ಸೃಷ್ಟಿಯಾಗುತ್ತಿದ್ದು. ದುರ್ಗಾನಗರದ ಮಳೆ ನೀರು ಹರಿದು ಹೋಗುವ ಚರಂಡಿಯನ್ನು ರಿಯಲ್ ಎಸ್ಟೇಟ್ ಉದ್ಯಮಿಗಳು ಅವೈಜ್ಞಾನಿಕವಾಗಿ ಮಣ್ಣು ತುಂಬಿಸುತ್ತಿರುವುದೇ ಈ ಸಮಸ್ಯೆಗೆ ಕಾರಣ ಎಂದು ಸ್ಥಳೀಯ ನಿವಾಸಿಗಳು ಆರೋಪಿಸಿದ್ದಾರೆ. ಈ ಬಗ್ಗೆ ಕ್ಷೇತ್ರದ ಶಾಸಕರು ಮತ್ತು ವಾರ್ಡಿನ ಕಾರ್ಪೊರೇಟರ್ಗಳು ವಹಿಸಿರುವ ದಿವ್ಯ ಮೌನವು ಸಾರ್ವಜನಿಕರಲ್ಲಿ ಹಲವು ಅನುಮಾನಗಳನ್ನು ಹುಟ್ಟುಹಾಕುತ್ತಿದೆ.

ಈ ನೆರೆಯಿಂದ ಈಗಾಗಲೇ ಸಾಕಷ್ಟು ಕಷ್ಟ-ನಷ್ಟಗಳನ್ನು ಅನುಭವಿಸುತ್ತಿರುವ ನಾಗರಿಕರ ಧ್ವನಿಯಾಗಿ ದುರ್ಗಾನಗರ ರೆಸಿಡೆಂಟ್ಸ್ ಅಸೋಸಿಯೇಷನ್ ಶ್ರಮಿಸುತ್ತಿದ್ದು, ಸಂಬಂಧಪಟ್ಟ ಇಲಾಖೆಗಳು, ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಉಸ್ತುವಾರಿಗಳ ಗಮನಕ್ಕೆ ಈ ಸಮಸ್ಯೆಯನ್ನು ತಂದಿದ್ದು. ಮಳೆಗಾಲವು ತೀರಾ ಹತ್ತಿರವಿರುವುದರಿಂದ ತಕ್ಷಣವೇ ಈ ಸಮಸ್ಯೆಯನ್ನು ಪರಿಹರಿಸಿ, ನಿವಾಸಿಗಳಿಗೆ ನೆಮ್ಮದಿಯ ಜೀವನ ನಡೆಸಲು ಅವಕಾಶ ಮಾಡಿಕೊಡಬೇಕೆಂದು ವಿನಂತಿಸಲಾಗಿದೆ. ಇದಕ್ಕೆ ಪೂರಕವಾಗಿ ಜಿಲ್ಲಾಡಳಿತವು ಸಕಾರಾತ್ಮಕವಾಗಿ ಸ್ಪಂದಿಸಿದ್ದು, ಶೀಘ್ರದಲ್ಲಿಯೇ ಶಾಶ್ವತ ಪರಿಹಾರ ಸಿಗುತ್ತದೆಯೇ ಎಂದು ಕಾದು ನೋಡಬೇಕಾಗಿದೆ.