Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

“ಕ್ಷೇತ್ರ ಪುನರ್ ವಿಂಗಡಣೆ: ದಕ್ಷಿಣ ರಾಜ್ಯಗಳಿಗೆ ಅನ್ಯಾಯ; ಕರ್ನಾಟಕದ ಧ್ವನಿ ಅಡಗಿಸುವ ಯತ್ನಕ್ಕೆ ಸಿಎಂ ಸಿದ್ದರಾಮಯ್ಯ ವಿರೋಧ”

Spread the love

ಬೆಂಗಳೂರು: ಕ್ಷೇತ್ರಗಳ ಪುನ‌ರ್ ವಿಂಗಡಣೆಯಲ್ಲಿ ಕರ್ನಾಟಕ ಹಾಗೂ ದಕ್ಷಿಣ ರಾಜ್ಯಗಳಿಗೆ ಅನ್ಯಾಯವಾಗಲಿದ್ದು, ಬಿಜೆಪಿ ಅಡಳಿತವಿರುವ ರಾಜ್ಯಗಳಿಗೆ ಸಿಂಹಪಾಲು ದೊರೆಯಲಿದೆ. ಆದರೆ, ಕರ್ನಾಟಕದ ಧ್ವನಿಯನ್ನು ದುರ್ಬಲಗೊಳಿಸುವ ಯಾವುರ್ದೇ ಪ್ರಯತ್ನವನ್ನು ನಾವು ವಿರೋಧಿಸುತ್ತೇವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.
ರವಿವಾರ ಎಕ್ಸ್ ನಲ್ಲಿ ಪೋಸ್ಟ್ ಹಾಕಿರುವ ಅವರು, ಲೋಕಸಭೆಯ ಒಟ್ಟು ಸ್ಥಾನಗಳನ್ನು 816ಕ್ಕೆ ವಿಸ್ತರಿಸಿದರೂ, ದಕ್ಷಿಣ ರಾಜ್ಯಗಳ ಒಟ್ಟು ಪಾಲು ಸುಮಾರು ಶೇ.24ಕ್ಕೆ ಸಮಾನವಾಗಿಯೇ ಉಳಿಯುತ್ತದೆ. ಇದು ಈಗಾಗಲೇ ಕಡಿಮೆ ಪ್ರಮಾಣವಾಗಿದೆ. ಜನಸಂಖ ನಿಯಂತ್ರಣ ಮತ್ತು ಉತ್ತಮ ಆಡಳಿತದಲ್ಲಿ ಸಾಧನೆ ಮಾಡಿದ ರಾಜ್ಯಗಳಿಗೆ ಶಿಕ್ಷೆ ವಿಧಿಸಿದಂತಾಗುತ್ತಿದೆ ಎಂದು ಆಕ್ಷೇಪಿಸಿದ್ದಾರೆ.
ರಾಷ್ಟ್ರದ ಅಭಿವೃದ್ಧಿಗೆ ಪ್ರಮುಖ ಚಾಲಕವಾಗಿರುವ ಕರ್ನಾಟಕ ರಾಜ್ಯವನ್ನು ಉದ್ದೇಶಪೂರ್ವಕವಾಗಿ ಹಿಂದೆ ಸರಿಸಲು ಪ್ರಯತ್ನಿಸಲಾಗುತ್ತಿದೆ. ನಮ್ಮ ಪಾಲು ಹೆಚ್ಚದಿದ್ದರೆ ಮತ್ತು ದೊಡ್ಡ ರಾಜ್ಯಗಳ ಸಂಖ್ಯಾತ್ಮಕ ಪ್ರಭುತ್ವ ಹೆಚ್ಚಿದರೆ, ಈ ಪ್ರಕ್ರಿಯೆಯಿಂದ ಕರ್ನಾಟಕಕ್ಕೆ ಏನು ಲಾಭ. ಇದರಿಂದ ಅಸಮತೋಲನ ಹೆಚ್ಚಾಗುತ್ತಿದೆ. ಇಂದಿಗೆ ಉತ್ತರ ಪ್ರದೇಶಕ್ಕೆ ಕರ್ನಾಟಕಕ್ಕಿಂತ 52 ಸ್ಥಾನಗಳು ಹೆಚ್ಚು ಇದ್ದರೆ, ಇದು 78ಕ್ಕೆ ಏರಲಿದೆ. ಮಹಾರಾಷ್ಟ್ರದ ಮುನ್ನಡೆ 20ರಿಂದ 30 ಸ್ಥಾನಗಳಿಗೆ ಏರಲಿದೆ.
ಇದು ಕೇವಲ ವಿಸ್ತರಣೆ ಅಲ್ಲ ಇದು ಅಧಿಕಾರದ ಏಕಾಗ್ರತೆ. ಇದು ಸಹಕಾರಿ ಫೆಡರಲಿಸಂ ಅಲ್ಲ ಇದು ಫೆಡರಲಿಸಂ ಮೇಲೆ ಮತ್ತೊಂದು ಸ್ಪಷ್ಟ ದಾಳಿ. ಕರ್ನಾಟಕದಂತಹ ರಾಜ್ಯಗಳ ಧ್ವನಿಯನ್ನು ಕುಗ್ಗಿಸಲು ರೂಪಿಸಿದ ಕ್ರಮವಾಗಿದೆ. ದಕ್ಷಿಣ ಭಾರತದ ಜನರ ವಿಶ್ವಾಸ ಗೆಲ್ಲಲು ವಿಫಲವಾದ ನಂತರ, ಮೋದಿ ಸರಕಾರವು ಪ್ರತಿನಿಧಿತ್ವದ ರಚನೆಯನ್ನು ಬದಲಾಯಿಸುವ ಮೂಲಕ ನಮ್ಮಧ್ವನಿ ದುರ್ಬಲಗೊಳಿಸಲು ಪ್ರಯತ್ನಿಸುತ್ತಿದೆ ಎಂದು ಸಿದ್ದರಾಮಯ್ಯ ಟೀಕಿಸಿದ್ದಾರೆ.
ಇಂತಹ ಮೂಲಭೂತ ಬದಲಾವಣೆಗಳನ್ನು ಸಮಾಲೋಚನೆ ಅಥವಾ ಸಾರ್ವಜನಿಕ ಚರ್ಚೆ ಇಲ್ಲದೇ ನಡೆಸಲಾಗುತ್ತಿದೆ. ಆರ್ಥಿಕ ಮತ್ತು ಜಾಗತಿಕ ಸವಾಲುಗಳ ನಡುವೆಯೂ ಕೇಂದ್ರ ಸರಕಾರ ರಾಷ್ಟ್ರೀಯ ಆದ್ಯತೆಗಳಿಗಿಂತ ರಾಜಕೀಯ ಲೆಕ್ಕಾಚಾರಕ್ಕೆ ಒತ್ತು ನೀಡುತ್ತಿದೆ. ಮೋದಿ ಅವರು ಕೊನೆಗೂ ಪ್ರಸ್ತಾಪಿತ ಕ್ಷೇತ್ರ ಮರುವಿಂಗಡಣೆ ಕುರಿತು ಮಾತನಾಡಿರುವುದನ್ನು ಸ್ವಾಗತಿಸುತ್ತೇನೆ. ಆದರೆ ದಕ್ಷಿಣ ರಾಜ್ಯಗಳಿಗೆ ಭರವಸೆ ನೀಡುವ ಈ ಆಕಸ್ಮಿಕ ಚಿಂತನೆ ರಾಜ್ಯಕಾರಣದ ದೂರದೃಷ್ಟಿಗಿಂತಲೂ ಚುನಾವಣಾ ರಾಜಕೀಯದ ಲೆಕ್ಕಾಚಾರಕ್ಕೆ ಅನುಗುಣವಾಗಿ, ವಿಶೇಷವಾಗಿ ಕೇರಳ-ತಮಿಳುನಾಡು ಮೊದಲಾದ ರಾಜ್ಯಗಳಲ್ಲಿ ರಾಜಕೀಯ ಲಾಭಕ್ಕಾಗಿ ಸಮಯೋಚಿತವಾಗಿ ಮಾಡಿರುವ ಸಂದೇಶದಂತಿದೆ ಎಂದು ಅವರು ದೂರಿದ್ದಾರೆ.
ದಕ್ಷಿಣ ರಾಜ್ಯಗಳ ಲೋಕಸಭಾ ಸ್ಥಾನಗಳ ಸಂಖ್ಯೆ ಹೆಚ್ಚಬೇಕೇ ಬೇಡವೇ ಎಂಬುದೇ ಪ್ರಶ್ನೆಯಾಗಿಲ್ಲ. ಅದು ಹೇಗೆ ಹೆಚ್ಚುತ್ತದೆ ಮತ್ತು ಯಾರಿಗೆ ಅಸಮಾನ ಪ್ರಮಾಣದಲ್ಲಿ ಲಾಭವಾಗುತ್ತದೆ ಎಂಬುದೇ ಮುಖ್ಯ ಚಿಂತನೆ. ಪ್ರಸ್ತಾಪಿತ ವಿಸ್ತರಣೆಯಡಿ, ಎಲ್ಲ ರಾಜ್ಯಗಳಿಗೂ ಸ್ಥಾನಗಳು ಹೆಚ್ಚಾದರೂ, ಅದರ ಪ್ರಮಾಣ ಮತ್ತು ವೇಗವು ಸ್ಪಷ್ಟವಾಗಿ ಬಿಜೆಪಿ ಪ್ರಭುತ್ವವಿರುವ ರಾಜ್ಯಗಳಿಗೆ ಹೆಚ್ಚು ಅನುಕೂಲವಾಗುತ್ತದೆ. ಈ ಅಂಕಿ-ಅಂಶಗಳು ಸ್ಪಷ್ಟವಾಗಿ ಹೇಳುತ್ತವೆ. ಐದು ದಕ್ಷಿಣ ರಾಜ್ಯಗಳು ಒಟ್ಟಾಗಿ ಕೇವಲ 63-66 ಹೆಚ್ಚುವರಿ ಸ್ಥಾನಗಳನ್ನು ಪಡೆಯುತ್ತವೆ. ಆದರೆ ಈ ಎಳು ಬಿಜೆಪಿ ಆಡಳಿತವಿರುವ ರಾಜ್ಯಗಳು ಸುಮಾರು 128-131 ಸ್ಥಾನಗಳನ್ನು ಪಡೆಯುತ್ತವೆ ಇದು ಸುಮಾರು ದ್ವಿಗುಣವಾಗಿದೆ ಎಂದು ಅವರು ವಿವರಿಸಿದ್ದಾರೆ.


Spread the love
Share:

administrator

Leave a Reply

Your email address will not be published. Required fields are marked *