ತಡಿಯಂಡಮೋಲ್ ಚಾರಣದ ವೇಳೆ ದಾರಿ ತಪ್ಪಿದ್ದ ಯುವತಿ ಸಾವು ಗೆದ್ದು ಬಂದ ಸುಖಾಂತ್ಯ

ಕೊಡಗು : ದಟ್ಟಾರಣ್ಯ ಎಂದೇ ಹೆಸರಾದ ಪುಷ್ಪಗಿರಿ ಬೆಟ್ಟ ಶ್ರೇಣಿಯಲ್ಲಿ ಟ್ರೆಕ್ಕಿಂಗ್‌ಗೆ ಹೋಗಿ ನಾಪತ್ತೆಯಾಗಿದ್ದ ಶರಣ್ಯಾ ಅವರು ಬರೋಬ್ಬರಿ 3 ದಿನಗಳ ಕಾಲ ಹೋರಾಡಿ, ಅಂತಿಮವಾಗಿ ಸುರಕ್ಷಿತವಾಗಿ ಪತ್ತೆಯಾಗಿದ್ದಾರೆ. ಚಾರಣದ ವೇಳೆ ಆಕಸ್ಮಿಕವಾಗಿ ದಾರಿ ತಪ್ಪಿದ ಶರಣ್ಯಾ ಅವರು ದಟ್ಟವಾದ ಕಾಡಿನೊಳಗೆ ಸಿಲುಕಿಕೊಂಡಿದ್ದರು. ಅರಣ್ಯದ ಒಳಭಾಗದಲ್ಲಿ ಮೊಬೈಲ್ ನೆಟ್‌ವರ್ಕ್ ಇಲ್ಲದ ಕಾರಣ ಯಾರಿಗೂ ಮಾಹಿತಿ ನೀಡಲಾಗದೆ ಹಾಗೂ ದಿಕ್ಕು ತೋಚದೆ ಅವರು ಕಾಡಿನಲ್ಲೇ ಉಳಿಯಬೇಕಾದ ಅನಿವಾರ್ಯತೆ ಎದುರಾಗಿತ್ತು.

ಆಹಾರ ಮತ್ತು ಕುಡಿಯುವ ನೀರಿನ ಅಭಾವದ ನಡುವೆಯೂ, ವನ್ಯಮೃಗಗಳ ಭೀತಿ ಇರುವ ಅರಣ್ಯದಲ್ಲಿ 3 ದಿನಗಳ ಕಾಲ ಧೈರ್ಯ ಗುಂದದೆ ಕಾಲ ಕಳೆದಿದ್ದಾರೆ. ಸ್ಥಳೀಯ ಮಲೆಕುಡಿಯ ಸಮುದಾಯದ ಜನರು ಹಾಗೂ ಅರಣ್ಯ ಇಲಾಖೆಯ ಅಧಿಕಾರಿಗಳು ನಡೆಸಿದ ಜಂಟಿ ಕಾರ್ಯಾಚರಣೆಯ ವೇಳೆ ಶರಣ್ಯಾ ಅವರು ಕಾಡಿನ ಒಂದು ಭಾಗದಲ್ಲಿ ಪತ್ತೆಯಾಗಿದ್ದಾರೆ. ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿದ ತಂಡವು ಅವರನ್ನು ಕಾಡಿನಿಂದ ಹೊರತಂದಿದೆ.
ಯಾವುದೇ ಆಹಾರವಿಲ್ಲದೆ, ಕಗ್ಗತ್ತಲ ರಾತ್ರಿಗಳಲ್ಲಿ ವನ್ಯಮೃಗಗಳ ಭಯದ ನಡುವೆಯೂ ಶರಣ್ಯಾ ತೋರಿದ ಅಪ್ರತಿಮ ಧೈರ್ಯಕ್ಕೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಸದ್ಯ ಪೊಲೀಸರು ಅವರನ್ನು ವಶಕ್ಕೆ ಪಡೆದಿದ್ದು, ದೀರ್ಘಕಾಲದ ಬಳಿಕ ಹಸಿವು ಮತ್ತು ಆಯಾಸದಿಂದ ಬಳಲಿರುವ ಅವರಿಗೆ ಪ್ರಾಥಮಿಕ ಚಿಕಿತ್ಸೆ ಹಾಗೂ ಆರೋಗ್ಯ ತಪಾಸಣೆ ನಡೆಸಲಾಗುತ್ತಿದೆ. ತಪಾಸಣೆಯ ನಂತರ ಶರಣ್ಯಾ ಅವರನ್ನು ಅವರ ಕುಟುಂಬಸ್ಥರಿಗೆ ಹಸ್ತಾಂತರಿಸುವ ಪ್ರಕ್ರಿಯೆ ನಡೆಯಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.