ತಮಿಳುನಾಡು ಚುನಾವಣೆ: ಸ್ಪರ್ಧೆಯಿಂದ ಹಿಂದೆ ಸರಿದ ಅಣ್ಣಾಮಲೈ; ಸ್ವಯಂ ನಿರ್ಧಾರವೆಂದು ಸ್ಪಷ್ಟನೆ

ಚೆನ್ನೈ: ಮುಂಬರುವ ತಮಿಳುನಾಡು ವಿಧಾನಸಭಾ ಚುನಾವಣೆಗಾಗಿ ಪ್ರಕಟವಾಗಿರುವ ಬಿಜೆಪಿಯ ಅಭ್ಯರ್ಥಿಗಳ ಪಟ್ಟಿಯಿಂದ ತಮ್ಮ ಹೆಸರು ಕಾಣೆಯಾಗಿರುವ ಕುರಿತು ಮೌನ ಮುರಿದಿರುವ ತಮಿಳುನಾಡಿನ ಮಾಜಿ ಬಿಜೆಪಿ ಮುಖ್ಯಸ್ಥ ಕೆ.ಅಣ್ಣಾಮಲೈ, ಚುನಾವಣಾ ಕಣದಿಂದ ಹೊರಗುಳಿಯುವ ನಿರ್ಧಾರ ಸಂಪೂರ್ಣವಾಗಿ ನನ್ನದೇ ಆಗಿದೆ ಎಂದು ಸ್ಪಷ್ಟಪಡಿಸಿದ್ದಾರೆ.
ಕೊಯಂಬತ್ತೂರಿನಿಂದ ಆಗಮಿಸಿದ ಬಳಿಕ ಚೆನ್ನೈ ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಕೆ.ಅಣ್ಣಾಮಲೈ, “ನಾನು ಮುಂಚಿತವಾಗಿಯೇ ಚುನಾವಣಾ ಸ್ಪರ್ಧೆಯಿಂದ ಹೊರಗುಳಿಯುವ ಬಗ್ಗೆ ಪಕ್ಷದ ನಾಯಕತ್ವಕ್ಕೆ ಅಧಿಕೃತ ಮಾಹಿತಿ ನೀಡಿದ್ದೆ. ನಾನು ಯಾವುದೇ ಕ್ಷೇತ್ರದಿಂದ ಸ್ಪರ್ಧಿಸುವುದಿಲ್ಲ ಎಂದು ನಾನು ಈಗಾಗಲೇ ಕೋರ್ ಸಮಿತಿಗೆ ತಿಳಿಸಿದ್ದೇನೆ. ಹೀಗಾಗಿ, ನನಗೆ ಟಿಕೆಟ್ ನಿರಾಕರಿಸಲಾಗಿಲ್ಲ. ಸತ್ಯವೆಂದರೆ, ನನಗೆ ಸ್ಪರ್ಧಿಸುವ ಬಯಕೆ ಇರಲಿಲ್ಲ” ಎಂದು ಹೇಳಿದ್ದಾರೆ.

ತಮಗೆ ಟಿಕೆಟ್ ನಿರಾಕರಣೆಯಾಗಿರುವ ಕುರಿತು ಉದ್ಭವಿಸಿರುವ ಊಹಾಪೋಹಗಳ ಕುರಿತು ಪ್ರತಿಕ್ರಿಯಿಸಿದ ಅವರು, ನಾನೇ ಚುನಾವಣಾ ಕಣಕ್ಕಿಳಿಯಲು ನಿರಾಕರಿಸಿದ ಬಳಿಕ, ಪಕ್ಷದ ನಾಯಕತ್ವವು ನನಗೆ ಟಿಕೆಟ್ ನಿರಾಕರಿಸಲು ಹೇಗೆ ಸಾಧ್ಯ?” ಎಂದು ಪ್ರಶ್ನಿ ಸಿದ್ದಾರೆ. ಈ ವಿಷಯ ಮಾಧ್ಯಮಗಳ ಚರ್ಚೆಯ ವಿಷಯವಾಗಿ ಬದಲಾಗಿರುವುದರಿಂದ ನಾನು ಈ ಸ್ಪಷ್ಟಿಕರಣ ನೀಡುತ್ತಿದ್ದೇನೆ ಎಂದೂ ಅವರು ಹೇಳಿದ್ದಾರೆ.
“ನನ್ನ ನಿರ್ಧಾರವನ್ನು ಗೌರವಿಸಿದ ಹಾಗೂ ಎಸ್ಟಿಎ ಮೈತ್ರಿಕೂಟದ ಅಭ್ಯರ್ಥಿಗಳ ಪರ ಪ್ರಚಾರ ನಡೆಸಲು ಅವಕಾಶ ನೀಡಿದ ಕೇಂದ್ರ ನಾಯಕತ್ವಕ್ಕೆ ಧನ್ಯವಾದ ಸಲ್ಲಿಸುತ್ತೇನೆ.” ಎಂದು ಅವರು ಘೋಷಿಸಿದ್ದಾರೆ.