PoK ಶೀಘ್ರದಲ್ಲೇ ಭಾರತದೊಂದಿಗೆ ವಿಲೀನ: ಶ್ರೀನಗರದಲ್ಲಿ ನಿಂತು ಅಖಿಲ ಭಾರತ ಇಮಾಮ್ ಸಂಘಟನೆಯ ಮುಖ್ಯಸ್ಥರ ಭವಿಷ್ಯ

ಶ್ರೀನಗರ: ಪಾಕಿಸ್ತಾನ ಆಕ್ರಮಿತ ಕಾಶ್ಮೀರ (ಪಿಒಕೆ) ಶೀಘ್ರದಲ್ಲೇ ಭಾರತದೊಂದಿಗೆ ವಿಲೀನಗೊಳ್ಳಲಿದೆ ಎಂದು ಅಖಿಲ ಭಾರತ ಇಮಾಮ್ ಸಂಘಟನೆಯ ಮುಖ್ಯ ಇಮಾಮ್ ಉಮರ್ ಅಹ್ಮದ್ ಇಲ್ಯಾಸಿ ಶುಕ್ರವಾರ ಹೇಳಿದ್ದಾರೆ.
“ಕಾಶ್ಮೀರದಲ್ಲಿ ನಿಂತುಕೊಂಡು ನಮ್ಮನೆರೆಯ ದೇಶಕ್ಕೆ ನಾನು ಒಂದು ಮಾತು ಹೇಳಲು ಬಯಸುತ್ತೇನೆ. ಭಾರತದ ಅವಿಭಾಜ್ಯ ಅಂಗವಾಗಿರುವ ಪಿಒಕೆ ಖಂಡಿತವಾಗಿ ಭಾರತದೊಂದಿಗೆ ವಿಲೀನಗೊಳ್ಳಲಿದೆ. ಏಕೆಂದರೆ ಪಿಒಕೆ ಜನರು ಜನಾಭಿಪ್ರಾಯ ಸಂಗ್ರಹಿಸಲು ಬಯಸಿದ್ದಾರೆ” ಎಂದರು.
“ದೇವರು ಬಯಸಿದರೆ, ಅವರ ಘರ್ ವಾಪಸಿ ಶೀಘ್ರದಲ್ಲಿ ನಡೆಯಲಿದೆ. ಅಲ್ಲಿನ ಜನರು ಇದನ್ನು ಬಯಸುತ್ತಾರೆ. ಅವರು ಕಾಶ್ಮೀರದ ಅಭಿವೃದ್ಧಿಯನ್ನು ನೋಡಿ ಸಂತೋಷಪಡುತ್ತಾರೆ. ಕಾಶ್ಮೀರ ಇಂದು ಹೇಗೆ ಪ್ರಗತಿ ಸಾಧಿಸುತ್ತಿದೆ ಎಂಬುದನ್ನು ನೋಡಿದರೆ, ಪಿಒಕೆ ಶೀಘ್ರದಲ್ಲೇ ಭಾರತದೊಂದಿಗೆ ವಿಲೀನಗೊಳ್ಳಲಿದೆ’ ಎಂದು ಅವರು ಹೇಳಿದರು.
370ನೇ ವಿಧಿ ರದ್ದತಿಯ ಬಳಿಕ ಕಾಶ್ಮೀರದಲ್ಲಿ ಉಂಟಾದ ಪರಿವರ್ತನೆಯನ್ನು ನೋಡಿ ತನಗೆ ತುಂಬಾ ಸಂತೋಷವಾಗಿದೆ ಎಂದು ಅವರು ತಿಳಿಸಿದ್ದಾರೆ.
