ರಾಮಾಯಣ ಟೀಸರ್ ಔಟ್: ಶ್ರೀರಾಮನಾಗಿ ರಣಬೀರ್ ಕಪೂರ್ ಮಿಂಚು; ರಾವಣನ ಅವತಾರದಲ್ಲಿ ಕಾಣಿಸಿಕೊಂಡ ಯಶ್

ನಿತೀಶ್ ತಿವಾರಿ ಅವರ ನಿರ್ದೇಶನದ ಬಹು ನಿರೀಕ್ಷಿತ ಪೌರಾಣಿಕ ಚಿತ್ರ ‘ರಾಮಾಯಣ’ದ ಟೀಸರ್ ಬಿಡುಗಡೆಯಾಗಿದ್ದು, ನಟ ರಣಬೀರ್ ಕಪೂರ್ ಅವರನ್ನು ರಾಮನಾಗಿ ವಿವಿಧ ದೃಶ್ಯಗಳಲ್ಲಿ ತೋರಿಸಲಾಗಿದೆ. ಸಾಕಷ್ಟು ನಿರೀಕ್ಷೆ ಮತ್ತು ಪ್ರಚಾರದ ನಡುವೆ ಹನುಮ ಜಯಂತಿಯಂದು ಟೀಸರ್ ಬಿಡುಗಡೆಯಾಗಿದೆ.
ಟೀಸರ್ ಕೊನೆಯಲ್ಲಿ ರಾವಣದ ಪಾತ್ರದಾರಿ ‘ಯಶ್’ ಅವರ ಪಾತ್ರ ಪರಿಚಯವನ್ನೂ ನೀಡಲಾಗಿದೆ. ಆದರೆ ಯಶ್ ಅವರ ಬೆನ್ನು ಮಾತ್ರ ಟೀಸರ್ನಲ್ಲಿ ಕಾಣಿಸುತ್ತಿದ್ದು, ನಡೆದು ಸಾಗುತ್ತಿರುವ ಹಿಂಬದಿಯ ದೃಶ್ಯವನ್ನು ತೋರಿಸಲಾಗಿದೆ.

ನಮಿತ್ ಮಲ್ಲೋತ್ರಾ ನಿರ್ಮಾಣದ ‘ರಾಮಾಯಣ’ ಸಿನಿಮಾವನ್ನು ನಿತೀಶ್ ತಿವಾರಿ ನಿರ್ದೇಶಿಸಿದ್ದಾರೆ. ಸಿನಿಮಾ ವಿಶ್ವಾದ್ಯಂತ ಮುಂಬರುವ 2026ರ ದೀಪಾವಳಿಗೆ ಬಿಡುಗಡೆಯಾಗಲಿದೆ.
ಈಗ ಬಿಡುಗಡೆಯಾಗಿರುವ ಟೀಸರ್ನಲ್ಲಿ ರಾಮನ ಪಾತ್ರವನ್ನು ಮಾತ್ರ ಪರಿಚಯಿಸಲಾಗಿದೆ. ಸೀತೆಯ ಪಾತ್ರ ನಿರ್ವಹಿಸಿರುವ ಸಾಯಿ ಪಲ್ಲವಿಯನ್ನು ದೂರದಿಂದ ಮಾತ್ರ ತೋರಿಸಲಾಗಿದೆ. ಆದರೆ ಟೀಸರ್ ನ ಕೊನೆಯಲ್ಲಿ ಕಂಡು ಬಂದ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ಚರ್ಚೆಗೆ ಕಾರಣವಾಗಿದೆ.
ಕಟ್ಟುಮಸ್ತಾದ ರಾಜನಂತೆ ವೈಭೋಪೇತವಾಗಿ ಅಲಂಕರಿಸಿಕೊಂಡು ಗಾಂಭೀರ್ಯದಿಂದ ನಡೆದು ಸಾಗುವ ವ್ಯಕ್ತಿಯ ಹಿಂಭಾಗವನ್ನು ತೋರಿಸಲಾಗಿದೆ. ಆತ ನಡೆದು ಸಾಗುತ್ತಿರುವು ಎದುರು ನಿಂತ ಪುಷ್ಪಕ ವಿಮಾನವಾಗಿರಬಹುದಾದ ದೃಶ್ಯವನ್ನೂ ತೋರಿಸಲಾಗಿದೆ. ಇದು ರಾವಣನಾಗಿ ನಟಿಸಿದ ಕನ್ನಡದ ನಟ ಯಶ್ ಲುಕ್ ಎಂದು ಸಿನಿಪ್ರೇಮಿಗಳ ನಡುವೆ ಚರ್ಚೆಯಾಗುತ್ತಿದೆ.
ಸಿನಿಮಾದಲ್ಲಿ ರಾಕಿಂಗ್ ಸ್ಟಾರ್ ಯಶ್ ರಾವಣನ ಪಾತ್ರ, ಸಾಯಿ ಪಲ್ಲವಿ ಸೀತೆ, ಸನ್ನಿ ಡಿಯೋಲ್ ಹನುಮಂತ ಮತ್ತು ರವಿ ದುಬೆ ಲಕ್ಷ್ಮಣನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಕಾಜಲ್ ಅಗರ್ವಾಲ್ ಮತ್ತು ರಕುಲ್ ಪ್ರೀತ್ ಸಿಂಗ್ ಅವರು ಮಂಡೋದರಿ ಮತ್ತು ಶೂರ್ಪಣಕಾ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಅರುಣ್ ಗೋವಿಲ್, ಕುನಾಲ್ ಕಪೂರ್, ಆದಿನಾಥ್ ಕೊಠಾರೆ, ಶೀಬಾ ಚಡ್ಡಾ ಮತ್ತು ಇಂದಿರಾ ಕೃಷ್ಣನ್ ಮೊದಲಾದವರು ನಟಿಸಿದ್ದಾರೆ. 2026ರ ದೀಪಾವಳಿಗೆ ಸಿನಿಮಾದ ಭಾಗ 1 ಮತ್ತು 2027ರ ದೀಪಾವಳಿಗೆ ಭಾಗ 2 ಬಿಡುಗಡೆಯಾಗಲಿದೆ.