ಇಂಡೋನೇಷ್ಯಾದಲ್ಲಿ 7.4 ತೀವ್ರತೆಯ ಭೀಕರ ಭೂಕಂಪ: ಕರಾವಳಿ ಪ್ರದೇಶಗಳಲ್ಲಿ ಸುನಾಮಿ ಭೀತಿ

ಜಕಾರ್ತಾ: ಪೂರ್ವ ಇಂಡೋನೇಷ್ಯಾದ ಕಡಲಾಚೆಯಲ್ಲಿ ಗುರುವಾರ ಮುಂಜಾನೆ 7.4 ತೀವ್ರತೆಯ ಭೂಕಂಪ ಸಂಭವಿಸಿದೆ. ಇದರ ಪರಿಣಾಮವಾಗಿ ಕರಾವಳಿ ಪ್ರದೇಶಗಳಿಗೆ ಸುನಾಮಿ ಎಚ್ಚರಿಕೆ ನೀಡಲಾಗಿದೆ.
ಯುನೈಟೆಡ್ ಸ್ಟೇಟ್ಸ್ ಭೂವೈಜ್ಞಾನಿಕ ಸಮೀಕ್ಷೆ (USGS) ಮಾಹಿತಿ ಪ್ರಕಾರ, ಸ್ಥಳೀಯ ಸಮಯ ಬೆಳಿಗ್ಗೆ 6.48ಕ್ಕೆ ಮೊಲುಕ್ಕಾ ಸಮುದ್ರದಲ್ಲಿ ಸುಮಾರು 35 ಕಿಲೋಮೀಟರ್ ಆಳದಲ್ಲಿ ಭೂಕಂಪ ಉಂಟಾಗಿದೆ. ಟೆರ್ನೇಟ್ ದ್ವೀಪದ ಸಮೀಪದಲ್ಲೇ ಇದರ ಕೇಂದ್ರಬಿಂದು ಇದೆ.
ಭೂಕಂಪದ ಕೇಂದ್ರದಿಂದ 1,000 ಕಿಲೋಮೀಟರ್ ವ್ಯಾಪ್ತಿಯೊಳಗೆ ಅಪಾಯಕಾರಿ ಸುನಾಮಿ ಅಲೆಗಳು ಸಂಭವಿಸುವ ಸಾಧ್ಯತೆ ಇದೆ ಎಂದು ಅಮೆರಿಕದ ಹವಾಯಿ ಮೂಲದ ಮೇಲ್ವಿಚಾರಣಾ ಸಂಸ್ಥೆಗಳು ಇಂಡೋನೇಷ್ಯಾ, ಫಿಲಿಪೈನ್ಸ್ ಹಾಗೂ ಮಲೇಷ್ಯಾ ದೇಶಗಳ ಕರಾವಳಿ ಪ್ರದೇಶಗಳಿಗೆ ಮುನ್ನೆಚ್ಚರಿಕೆ ನೀಡಿದೆ.
ಭಾರೀ ಭೂಕಂಪಕ್ಕೆ ಎಚ್ಚರಗೊಂಡು ನೋಡಿದಾಗ ಭಯಭೀತರಾದ ಜನರು ಮನೆಗಳಿಂದ ಹೊರಗೆ ಧಾವಿಸಿರುವುದು ಕಂಡುಬಂತು ಎಂದು ಉತ್ತರ ಸುಲವೇಸಿ ಪ್ರಾಂತ್ಯದ ಮನಾಡೊ ನಗರದಲ್ಲಿದ್ದ ಎಎಫ್ಟಿ ಪತ್ರಕರ್ತ ವಿವರಿಸಿದ್ದಾರೆ.
“ನನಗೆ ಎಚ್ಚರವಾಗಿ ಮನೆಯಿಂದ ಹೊರ ನಡೆದೆ. ಜನರು ತಕ್ಷಣವೇ ಹೊರಕ್ಕೆ ಧಾವಿಸುತ್ತಿದ್ದರು. ಶಾಲೆಯಿಂದಲೂ ವಿದ್ಯಾರ್ಥಿಗಳು ಹೊರಗೆ ಓಡಿಬಂದರು” ಎಂದು ಹೇಳಿದ್ದಾರೆ. ಕಂಪನ ಸುಧೀರ್ಘ ಕಾಲ ಇದ್ದರೂ, ಹೆಚ್ಚಿನ ಹಾನಿ ಸಂಭವಿಸಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ಸ್ಥಳೀಯ ಆಡಳಿತ ಹಾಗೂ ತುರ್ತು ಸೇವೆಗಳು ಪರಿಸ್ಥಿತಿಯನ್ನು ನಿಗಾ ವಹಿಸುತ್ತಿದ್ದು, ಕರಾವಳಿ ಪ್ರದೇಶದ ಜನರಿಗೆ ಎಚ್ಚರಿಕೆಯಿಂದ ಇರಲು ಸೂಚಿಸಲಾಗಿದೆ.
