ವಿಚ್ಛೇದನ ಸಿಕ್ಕಿದ್ದಕ್ಕೆ 9 ಕಿಮೀ ದೀಡ ನಮಸ್ಕಾರ: ವಿಚಿತ್ರ ಹರಕೆ ತೀರಿಸಿದ ಉತ್ತರ ಪ್ರದೇಶದ ಯುವಕ!

ಲಕ್ನೋ: ಸಾಮಾನ್ಯವಾಗಿ ದಾಂಪತ್ಯ ಜೀವನದಲ್ಲಿ ವಿಚ್ಛೇದನ ಸಂಭವಿಸಿದರೆ ಅದು ದುಃಖದ ಸಂಗತಿ ಎಂದು ಪರಿಗಣಿಸಲಾಗುತ್ತದೆ. ಆದ್ರೆ, ಇತ್ತೀಚಿನ ದಿನಗಳಲ್ಲಿ ಕೆಲವರು ‘ಡಿವೋರ್ಸ್ ಪಾರ್ಟಿ’ ನೀಡಿ ಸಂಭ್ರಮಿಸುವುದನ್ನೂ ನಾವು ನೋಡಿದ್ದೇವೆ. ಅದರಂತೆ ಉತ್ತರ ಪ್ರದೇಶದ ಬಸ್ತಿ ಜಿಲ್ಲೆಯ 25 ವರ್ಷದ ಯುವಕನೋರ್ವ ತನಗೆ ಪತ್ನಿಯಿಂದ ಕೋರ್ಟಿನಲ್ಲಿ ವಿಚ್ಛೇದನ ಸಿಕ್ಕಿದ್ದಕ್ಕೆ ದೇವರಿಗೆ ಧನ್ಯವಾದ ಸಲ್ಲಿಸಲು ಬರೋಬ್ಬರಿ 9 ಕಿಲೋಮೀಟರ್‌ಗಳಷ್ಟು ದೂರ ದೀಡ ನಮಸ್ಕಾರ ಹಾಕುವ ಮೂಲಕ ವಿಶಿಷ್ಟವಾಗಿ ಹರಕೆ ತೀರಿಸಿದ್ದಾನೆ. ಈ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗಿದೆ.
ಬಸ್ತಿ ಜಿಲ್ಲೆಯ ನರ್ಖೋರಿಯಾ ಗ್ರಾಮದ ಜೋಗೇಶ್ ಎಂಬ ಯುವಕ ಈ ವಿಚಿತ್ರ ಸಾಹಸ ಮಾಡಿದವರು. ನವರಾತ್ರಿಯ ಶುಭ ಸಂದರ್ಭದಲ್ಲಿ ಅವರು ತಮ್ಮ ಗ್ರಾಮದಿಂದ ಸ್ಥಳೀಯ ‘ಬೈದಾ ಸಮಯ ಮಾತಾ’ ದೇವಸ್ಥಾನದವರೆಗೆ ನೆಲದ ಮೇಲೆ ಮಲಗಿ ಸಾಷ್ಟಾಂಗ ನಮಸ್ಕಾರ ಮಾಡುತ್ತಾ ಸಾಗಿದ್ದಾರೆ. ಬೆಳಿಗ್ಗೆ ಆರಂಭವಾದ ಈ ಕಠಿಣ ಯಾತ್ರೆಯು ಸುಮಾರು 12 ಗಂಟೆಗಳ ಕಾಲ ನಡೆದಿದ್ದು, ಇಡೀ ಹಾದಿಯುದ್ದಕ್ಕೂ ಜೋಗೇಶ್ ಅವರು ಉಪವಾಸವಿದ್ದು ‘ಜೈ ಶ್ರೀರಾಮ್’ ಮತ್ತು ‘ಜೈ ಬಜರಂಗಬಲಿ’ ಎಂದು ಘೋಷಣೆ ಕೂಗುತ್ತಾ ದೇವಸ್ಥಾನ ತಲುಪಿದ್ದಾರೆ.ಪ್ರಕರಣದ ಹಿನ್ನೆಲೆ
ಜೋಗೇಶ್ ಅವರಿಗೆ 2022 ರಲ್ಲಿ ಮದುವೆಯಾಗಿತ್ತು. ಆದರೆ ಮದುವೆಯಾದ ಮೊದಲ ದಿನದಿಂದಲೇ ದಂಪತಿಗಳ ನಡುವೆ ತೀವ್ರ ಗಲಾಟೆಗಳು ಶುರುವಾಗಿದ್ದವು. ಇದರಿಂದ ದಾಂಪತ್ಯ ಜೀವನ ನರಕಸದೃಶವಾದಾಗ ಜೋಗೇಶ್ ನ್ಯಾಯಾಲಯದ ಮೊರೆ ಹೋಗಿದ್ದರು. ಅಲ್ಲದೇ ನನಗೆ ಈ ಕಿರಿಕಿರಿ ತುಂಬಿದ ದಾಂಪತ್ಯದಿಂದ ಮುಕ್ತಿ ಸಿಕ್ಕರೆ ದೇವಸ್ಥಾನಕ್ಕೆ ದೀಡ ನಮಸ್ಕಾರ ಮಾಡುತ್ತೇನೆ” ಎಂದು ಅವರು ದೇವರಿಗೆ ಹರಕೆ ಹೊತ್ತಿದ್ದರು. 2026 ಜನವರಿಯಲ್ಲಿ ವಿಚ್ಛೇದನ ಪ್ರಕ್ರಿಯೆ ಕಾನೂನುಬದ್ಧವಾಗಿ ಪೂರ್ಣಗೊಂಡ ಹಿನ್ನೆಲೆಯಲ್ಲಿ ಜೋಗೇಶ್ ತಮ್ಮ ಹರಕೆಯನ್ನು ತೀರಿಸಿದ್ದಾರೆ.
ಈ ಯಾತ್ರೆಗಾಗಿ ಜೋಗೇಶ್ ಮುಂಚಿತವಾಗಿಯೇ ಉಪವಿಭಾಗಾಧಿಕಾರಿಗಳಿಂದ (SDM) ಅನುಮತಿ ಪಡೆದಿದ್ದರು. ಯಾತ್ರೆಯ ಸಮಯದಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಮತ್ತು ಸಂಚಾರಕ್ಕೆ ಅಡ್ಡಿಯಾಗದಂತೆ ಪೊಲೀಸರು ಭದ್ರತೆ ನೀಡಿದ್ದರು. ಜೋಗೇಶ್ ಅವರ ಪೋಷಕರು ಮತ್ತು ಕುಟುಂಬದ ಸದಸ್ಯರು ಕೂಡ ಅವರ ಜೊತೆಗಿದ್ದರು. ದೇವಸ್ಥಾನ ತಲುಪಿದ ನಂತರ ಅವರು ತೆಂಗಿನಕಾಯಿ ಒಡೆದು ವಿಶೇಷ ಪೂಜೆ ಸಲ್ಲಿಸಿ ತಮ್ಮ ಉಪವಾಸವನ್ನು ಅಂತ್ಯಗೊಳಿಸಿದರು.
