ಅಮೆರಿಕ: ಗಾಲ್ಫ್ ದಂತಕಥೆ ಟೈಗರ್ ವುಡ್ಸ್ ಬಂಧನ; ಪಾನಮತ್ತರಾಗಿ ಕಾರು ಚಲಾಯಿಸಿದ ಆರೋಪ

ಫ್ಲೋರಿಡಾ (ಅಮೆರಿಕ): ಪಿಜಿಎ ವೃತ್ತಿಪರ ಗಾಲ್ಫ್ ಗೆ ಮರಳಿದ ಕೆಲವೇ ದಿನಗಳ ಅಂತರದಲ್ಲಿ ಗಾಲ್ಫ್ ದಂತಕಥೆ ಟೈಗರ್ ವುಡ್ಸ್ ಪಾನಮತ್ತರಾಗಿ ಕಾರು ಚಲಾಯಿಸಿದ ಶಂಕೆಯ ಮೇಲೆ ಬಂಧನಕ್ಕೀಡಾಗಿದ್ದಾರೆ. ಫ್ಲೋರಿಡಾದ ತಮ್ಮ ಮನೆಯ ಬಳಿ ಕಾರು ಪಲ್ಟಿಯಾಗಿ ಸಂಭವಿಸಿದ ಅಪಘಾತದಲ್ಲಿ ಅವರು ಪಾರಾಗಿದ್ದರು.
ಪೊಲೀಸರ ಪ್ರಕಾರ, ಟೈಗರ್ ವುಡ್ ತಮ್ಮ ಬಂಧನದ ಬಳಿಕ ಅಸ್ವಸ್ಥತೆಗೊಂಡವರಂತೆ ಕಂಡು ಬಂದಿದ್ದಾರೆ. ಅವರನ್ನು ಫ್ಲೋರಿಡಾದಲ್ಲಿರುವ ಮಾರ್ಟಿನ್ ಕೌಂಟಿ ಜೈಲಿಗೆ ಕರೆದೊಯ್ಯಲಾಗಿದೆ. ಮದ್ಯಪಾನದ ಸಾಧ್ಯತೆಯನ್ನು ಪೊಲೀಸರು ತಳ್ಳಿ ಹಾಕಿದ್ದಾರೆ. ಆದರೆ, ಟೈಗರ್ ವುಡ್ಸ್ ಮೂತ್ರ ಪರೀಕ್ಷೆಗೆ ನಿರಾಕರಿಸಿದ್ದಾರೆ.

ಟೈಗರ್ ವುಡ್ಸ್ ವಿರುದ್ಧ ಪಾನಮತ್ತರಾಗಿ ವಾಹನ ಚಲಾಯಿಸಿದ ಆರೋಪ, ಸ್ವತ್ತಿಗೆ ಹಾನಿ ಮಾಡಿದ ಆರೋಪ ಹಾಗೂ ಕಾನೂನುಬದ್ಧ ಪರೀಕ್ಷೆಗೆ ಒಳಗಾಗಲು ನಿರಾಕರಿಸಿದ ಆರೋಪವನ್ನು ಹೊರಿಸಲಾಗಿದೆ.
ಟೈಗರ್ ವುಡ್ಸ್ ಅವರು ಅತಿಯಾದ ವೇಗದಲ್ಲಿ ಕಾರನ್ನು ಚಲಾಯಿಸುತ್ತಿದ್ದರು. ಇದರಿಂದ ಕಾರು ಉರುಳಿ ಬಿದ್ದಿದೆ. ಘಟನೆಯಲ್ಲಿ ಯಾರಿಗೂ ಕೂಡಾ ಗಾಯಗಳಾಗಿಲ್ಲ ಎಂದು ಮಾರ್ಟಿನ್ ಕೌಂಟಿ ಶೆರಿಫ್ ಜಾನ್ ಬುಡೆನ್ಸಿಯೆಕ್ ಹೇಳಿದ್ದಾರೆ.