ಪೆಟ್ರೋಲ್, ಡೀಸೆಲ್ ಮೇಲಿನ ಅಬಕಾರಿ ಸುಂಕ ಭಾರಿ ಇಳಿಕೆ: ಕೇಂದ್ರ ಸರ್ಕಾರದಿಂದ ಜನತೆಗೆ ದೊಡ್ಡ ರಿಲೀಫ್

ಹೊಸದಿಲ್ಲಿ: ಮಧ್ಯಪ್ರಾಚ್ಯದಲ್ಲಿ ಉದ್ವಿಗ್ನತೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಇಂಧನದ ಮೇಲಿನ ಅಬಕಾರಿ ಸುಂಕವನ್ನು ಗಣನೀಯವಾಗಿ ಇಳಿಸಿದೆ. ಪೆಟ್ರೋಲ್ ಮೇಲಿನ ವಿಶೇಷ ಹೆಚ್ಚುವರಿ ಅಬಕಾರಿ ಸುಂಕವನ್ನು ಲೀಟರ್ ಗೆ 13 ರೂ.ನಿಂದ 3 ರೂ.ಗೆ ಕಡಿತಗೊಳಿಸಲಾಗಿದ್ದು, ಡೀಸೆಲ್ ಮೇಲಿನ ಅಬಕಾರಿ ಸುಂಕವನ್ನು ಲೀಟರ್ ಗೆ 10 ರೂ.ನಿಂದ ಸಂಪೂರ್ಣವಾಗಿ (0 ರೂ.) ತೆಗೆದುಹಾಕಲಾಗಿದೆ.
ಗುರುವಾರ ಹೊರಡಿಸಿದ ಆದೇಶದಲ್ಲಿ ಈ ಮಾಹಿತಿ ನೀಡಲಾಗಿದೆ. ಎಪ್ರಿಲ್ 2025ರಲ್ಲಿ ನಡೆದ ಹಿಂದಿನ ಪರಿಷ್ಕರಣೆಯ ನಂತರ ಪೆಟ್ರೋಲ್‌ಗೆ 13 ರೂ. ಹಾಗೂ ಡೀಸೆಲ್‌ಗೆ 10 ರೂ. ಅಬಕಾರಿ ಸುಂಕ ವಿಧಿಸಲಾಗುತ್ತಿತ್ತು.
ಮಧ್ಯಪ್ರಾಚ್ಯದಲ್ಲಿ ಇರಾನ್ ಹಾರ್ಮುಝ್ ಜಲಸಂಧಿಯ ಮೇಲಿನ ನಿಯಂತ್ರಣವನ್ನು ಬಿಗಿಗೊಳಿಸುತ್ತಿರುವುದು ಜಾಗತಿಕ ತೈಲ ಸಾಗಣೆಗೆ ಅಡಚಣೆ ಉಂಟುಮಾಡಿದೆ. ಇದರಿಂದ ಪೂರೈಕೆ ಸರಪಳಿಯಲ್ಲಿ ವ್ಯತ್ಯಯ ಉಂಟಾಗಿ, ತೈಲ ಬೆಲೆಗಳ ಮೇಲೆ ಒತ್ತಡ ಹೆಚ್ಚಾಗಿದೆ. ಈ ಹಿನ್ನೆಲೆ ಗ್ರಾಹಕರ ಮೇಲಿನ ಭಾರ ಕಡಿಮೆ ಮಾಡಲು ಸರ್ಕಾರ ಈ ಕ್ರಮ ಕೈಗೊಂಡಿದೆ.
ಇದೇ ವೇಳೆ, ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆಗಳಲ್ಲಿ ಸ್ವಲ್ಪ ಇಳಿಕೆ ಕಂಡುಬಂದಿದೆ. ಇರಾನ್ ಜೊತೆಗಿನ ಮಾತುಕತೆಗಳು “ತುಂಬಾ ಚೆನ್ನಾಗಿ ನಡೆಯುತ್ತಿವೆ” ಎಂದು ಅಮೆರಿಕ ತಿಳಿಸಿ, ತನ್ನ ಗಡುವನ್ನು 10 ದಿನಗಳವರೆಗೆ ವಿಸ್ತರಿಸಿದೆ. ಇದರ ಪರಿಣಾಮವಾಗಿ ಶುಕ್ರವಾರ ಆರಂಭಿಕ ವಹಿವಾಟಿನಲ್ಲಿ ತೈಲದ ಬೆಲೆಗಳು ಸುಮಾರು 2% ರಷ್ಟು ಇಳಿಕೆಯಾಗಿವೆ.
ಬ್ರೆಂಟ್ ಕಚ್ಚಾ ತೈಲವು ಪ್ರತಿ ಬ್ಯಾರೆಲ್ ಗೆ 108 ಡಾಲರ್ ನಿಂದ 105.75 ಡಾಲರ್ ಗೆ ಇಳಿದು 2.08% ಕುಸಿತ ಕಂಡಿದೆ. ವೆಸ್ಟ್ ಟೆಕ್ಸಾಸ್ ಇಂಟರ್ಮೀಡಿಯೇಟ್ (WTI) ಕೂಡ ಬೆಳಿಗ್ಗೆ 7:50 IST ವೇಳೆಗೆ 1.94% ಇಳಿದು 92.67 ಡಾಲರ್ ಗೆ ತಲುಪಿದೆ. ಇದಕ್ಕೂ ಮುನ್ನ ಬ್ರೆಂಟ್ ಬೆಲೆ 4.8% ಏರಿಕೆ ಕಂಡು 101.89 ಡಾಲರ್ ಗೆ ತಲುಪಿತ್ತು. ಸಂಘರ್ಷಕ್ಕೂ ಮುನ್ನದ ಸುಮಾರು 70 ಡಾಲರ್ ಮಟ್ಟಕ್ಕಿಂತ ಬೆಲೆಗಳು ಇನ್ನೂ ಹೆಚ್ಚಿನ ಮಟ್ಟದಲ್ಲಿವೆ. ಯುಎಸ್ ಮಾನದಂಡವೂ 4.6% ಏರಿಕೆ ಕಂಡು 94.48 ಡಾಲರ್ ಗೆ ತಲುಪಿತ್ತು.
ಇನ್ನೊಂದೆಡೆ, ದೇಶದ ಅತಿದೊಡ್ಡ ಖಾಸಗಿ ಇಂಧನ ಚಿಲ್ಲರೆ ಉದ್ಯಮ ನಯಾರಾ ಎನರ್ಜಿ, ಹೆಚ್ಚುತ್ತಿರುವ ಇನ್ ಪುಟ್ ವೆಚ್ಚಗಳ ಹಿನ್ನೆಲೆ ಪೆಟ್ರೋಲ್ ಬೆಲೆಯನ್ನು ಲೀಟರ್ ಗೆ 5 ರೂ. ಹಾಗೂ ಡೀಸೆಲ್ ಬೆಲೆಯನ್ನು ಲೀಟರ್ ಗೆ 3 ರೂ. ಹೆಚ್ಚಿಸಿದೆ. ದೇಶದ ಒಟ್ಟು 1,02,075 ಪೆಟ್ರೋಲ್ ಪಂಪ್ ಗಳಲ್ಲಿ 6,967 ಪಂಪ್ ಗಳನ್ನು ನಿರ್ವಹಿಸುತ್ತಿರುವ ಕಂಪೆನಿ, ಹೆಚ್ಚಿದ ವೆಚ್ಚದ ಒಂದು ಭಾಗವನ್ನು ಗ್ರಾಹಕರಿಗೆ ವರ್ಗಾಯಿಸಿದೆ ಎಂದು ಪಿಟಿಐಗೆ ಮೂಲಗಳು ತಿಳಿಸಿವೆ.
