Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

ಮಹಾರಾಷ್ಟ್ರ ಸಚಿವ ನರಹರಿ ಜಿರ್ವಾಲ್ ಖಾಸಗಿ ವಿಡಿಯೋ ವೈರಲ್: ವಜಾಕ್ಕೆ ವಿಪಕ್ಷಗಳ ಪಟ್ಟು

Spread the love

ಮುಂಬೈ: ಮಹಾರಾಷ್ಟ್ರದ ಆಹಾರ ಮತ್ತು ಔಷಧಿ ಆಡಳಿತ (ಎಫ್‌ಡಿಎ) ಸಚಿವ ನರಹರಿ ಜಿರ್ವಾಲ್ ಅವರು ಟ್ರಾನ್ಸ್ ಜೆಂಡರ್ ವ್ಯಕ್ತಿಯೊಂದಿಗಿರುವ ಖಾಸಗಿ ವೀಡಿಯೊ ವೈರಲ್ ಆದ ಹಿನ್ನೆಲೆಯಲ್ಲಿ ಹೊಸ ವಿವಾದಕ್ಕೆ ಗುರಿಯಾಗಿದ್ದಾರೆ.
ಗುರುವಾರ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ವೀಡಿಯೊದಲ್ಲಿ ಜಿರ್ವಾಲ್ ಮಲಗಿರುವ ದೃಶ್ಯ ಕಾಣಿಸಿಕೊಂಡಿದ್ದು, ಟ್ರಾನ್ಸ್‌ಜೆಂಡರ್ ವ್ಯಕ್ತಿ ಅವರ ಪಕ್ಕದಲ್ಲಿ ಕುಳಿತಿರುವುದು ಹಾಗೂ ಮತ್ತೊಂದು ದೃಶ್ಯದಲ್ಲಿ ಹಾಸಿಗೆಯ ಮೇಲೆ ಅವರೊಂದಿಗೆ ಮಲಗಿರುವುದು ಗೋಚರಿಸುತ್ತದೆ.
ವೀಡಿಯೊದಲ್ಲಿ ಕಾಣಿಸಿಕೊಂಡ ವ್ಯಕ್ತಿಯನ್ನು ಪವನ್ ಯಾದವ್ ಎಂದು ಗುರುತಿಸಲಾಗಿದ್ದು, ಅವರ ಸಹೋದರ ಎಂದು ಹೇಳಿಕೊಂಡಿರುವ ರವಿ ಯಾದವ್ ಟಿವಿ ವಾಹಿನಿಗೆ ನೀಡಿದ ಪ್ರತಿಕ್ರಿಯೆಯಲ್ಲಿ “ಆಕೆ ಪ್ರಭಾವಿ ವ್ಯಕ್ತಿಗಳೊಂದಿಗೆ ವೀಡಿಯೊಗಳನ್ನು ರೆಕಾರ್ಡ್ ಮಾಡಿ, ಫೋಟೋಗಳನ್ನು ತೆಗೆದು ಬಳಿಕ ಬ್ಲಾಕ್‌ಮೇಲ್ ಮೂಲಕ ಹಣ ಸುಲಿಗೆ ಮಾಡುತ್ತಾಳೆ. ಎಂಎಲ್‌ಸಿ ಸ್ಥಾನ ಅಥವಾ ಟ್ರಾನ್ಸ್ ಜೆಂಡರ್ ಮಂಡಳಿಯಲ್ಲಿ ಸ್ಥಾನ ಪಡೆಯಲು ಯತ್ನಿಸಿದ್ದಳು. ನನ್ನನ್ನೂ ಬ್ಲಾಕ್‌ಮೇಲ್ ಮಾಡಿದ್ದಾಳೆ” ಎಂದು ಆರೋಪಿಸಿದ್ದಾರೆ.

ಈ ಘಟನೆಗೆ ಸಂಬಂಧಿಸಿ ಜಿರ್ವಾಲ್ ಅವರನ್ನು ತಕ್ಷಣ ವಜಾಗೊಳಿಸಬೇಕು ಎಂದು ಕಾಂಗ್ರೆಸ್ ಹಾಗೂ ಸಾಮಾಜಿಕ ಕಾರ್ಯಕರ್ತೆ ಅಂಜಲಿ ದಮಾನಿಯಾ ಒತ್ತಾಯಿಸಿದ್ದಾರೆ.
ಇದಕ್ಕೆ ಪ್ರತಿಕ್ರಿಯಿಸಿದ ಎನ್‌ಸಿಪಿ ನಾಯಕ ಅಮೋಲ್ ಮಿಟ್ಕರಿ, “ಸುಮಾರು 8 ತಿಂಗಳ ಹಿಂದಿನ ಈ ವೀಡಿಯೊ ವಿಧಾನಸಭಾ ಅಧಿವೇಶನದ ನಂತರವೇ ಏಕೆ ಹೊರಬಂದಿದೆ? ಅತ್ಯಾಚಾರ ಆರೋಪ ಎದುರಿಸುತ್ತಿರುವ ಜ್ಯೋತಿಷಿ ಅಶೋಕ್ ಖರತ್ ಪ್ರಕರಣದಲ್ಲಿ ಎಸ್‌ಐಟಿ ಪ್ರಭಾವಿ ವ್ಯಕ್ತಿಗಳನ್ನು ಬಹಿರಂಗಪಡಿಸುವ ಸಾಧ್ಯತೆ ಇದೆ. ಆ ಪ್ರಕರಣದಿಂದ ಗಮನ ಬೇರೆಡೆಗೆ ತಿರುಗಿಸಲು ಇದು ಪೂರ್ವಯೋಜಿತ ಪಿತೂರಿ” ಎಂದು ಹೇಳಿದ್ದಾರೆ.

ಬುಡಕಟ್ಟು ಪ್ರಾಬಲ್ಯದ ದಿಂಡೋರಿ ಕ್ಷೇತ್ರವನ್ನು ಪ್ರತಿನಿಧಿಸುವ ಜಿರ್ವಾಲ್ ಅವರದ್ದು ಇದು ಎರಡನೇ ವಿವಾದವಾಗಿದೆ. ಎರಡು ತಿಂಗಳ ಹಿಂದೆ ಭ್ರಷ್ಟಾಚಾರ ನಿಗ್ರಹ ದಳವು ಅವರ ಕಚೇರಿಯಲ್ಲಿ ನಡೆಸಿದ ದಾಳಿಯಲ್ಲಿ ಒಬ್ಬ ಗುಮಾಸ್ತ 35,000 ರೂ. ಲಂಚ ಸ್ವೀಕರಿಸುತ್ತಿರುವುದು ಪತ್ತೆಯಾಗಿತ್ತು. ಆ ಸಂದರ್ಭದಲ್ಲಿಯೂ ವಿರೋಧ ಪಕ್ಷಗಳು ಅವರ ರಾಜೀನಾಮೆಗೆ ಒತ್ತಾಯಿಸಿದ್ದವು.
ಅಜಿತ್ ಪವಾ‌ರ್ ಅವರ ನಿಧನದ ನಂತರ ಎನ್‌ಸಿಪಿ ನಾಯಕತ್ವದ ವಿಚಾರದಲ್ಲೂ ಜಿರ್ವಾಲ್‌ ಹೇಳಿಕೆಗಳು ಚರ್ಚೆಗೆ ಗ್ರಾಸವಾಗಿದ್ದವು. ಸುನೇತ್ರಾ ಪವಾರ್‌ ಅವರನ್ನು ಪಕ್ಷದ ಮುಖ್ಯಸ್ಥೆಯಾಗಿಸಲು ಬೆಂಬಲ ವ್ಯಕ್ತಪಡಿಸಿದವರಲ್ಲಿ ಜಿರ್ವಾಲ್ ಕೂಡ ಒಬ್ಬರು.

ರಾಜ್ಯ ಕಾಂಗ್ರೆಸ್‌ ಅಧ್ಯಕ್ಷ ಹರ್ಷವರ್ಧನ್ ಸಕ್ಸಾಲ್, “ಇಂತಹ ಮಂತ್ರಿಗಳನ್ನು ಹೊಂದಿರುವ ಸರ್ಕಾರವನ್ನು ವಜಾಗೊಳಿಸಬೇಕು. ಇದು ನಾಚಿಕೆಗೇಡಿನ ಸಂಗತಿ” ಎಂದು ಟೀಕಿಸಿದ್ದಾರೆ. ಅಂಜಲಿ ದಮಾನಿಯಾ, “ಈ ಸಚಿವರು ಈಗಾಗಲೇ ಲಂಚ ಪ್ರಕರಣದಲ್ಲಿ ಸಿಲುಕಿದ್ದರು. ಇಂತಹ ನಾಯಕತ್ವವನ್ನು ಪಕ್ಷ ಒಪ್ಪಿಕೊಳ್ಳಬಹುದೇ? ಅವರನ್ನು ತಕ್ಷಣವೇ ವಜಾಗೊಳಿಸಬೇಕು” ಎಂದು ಹೇಳಿದ್ದಾರೆ.
ಇದರ ನಡುವೆ, ಎನ್‌ಸಿಪಿಯೊಳಗೆಯೇ ಒತ್ತಡ ಹೆಚ್ಚಾಗಿದೆ. ಜ್ಯೋತಿಷಿ ಅಶೋಕ್ ಖರತ್ ಪ್ರಕರಣದ ಹಿನ್ನೆಲೆಯಲ್ಲಿ ಎನ್‌ಸಿಪಿ ಮಹಿಳಾ ವಿಭಾಗದ ರಾಜ್ಯ ಮುಖ್ಯಸ್ಥೆ ರೂಪಾಲಿ ಚಕಂಕರ್ ಅವರನ್ನು ಸ್ಥಾನದಿಂದ ತೆಗೆದುಹಾಕುವಂತೆ ನಾಸಿಕ್, ಅಹಲ್ಯಾನಗರ ಸೇರಿದಂತೆ ವಿವಿಧ ಘಟಕಗಳ ಪದಾಧಿಕಾರಿಗಳು ಸುನೇತ್ರಾ ಪವಾರ್ ಅವರಿಗೆ ಪತ್ರ ಬರೆದಿದ್ದಾರೆ.
“ಖರತ್ ಪ್ರಕರಣಕ್ಕೆ ಚಕಂಕರ್ ಅವರ ಹೆಸರು ತಳುಕು ಹಾಕಿದ ನಂತರ ಎನ್‌ಸಿಪಿಯ ಪ್ರತಿಷ್ಠೆಗೆ ಧಕ್ಕೆಯಾಗಿದೆ” ಎಂದು ನಾಸಿಕ್ ಮಹಿಳಾ ವಿಭಾಗದ ಮುಖ್ಯಸ್ಥೆ ಪ್ರೇರಣಾ ಬಲ್ಕವಾಡೆ ತಿಳಿಸಿದ್ದಾರೆ.


Spread the love
Share:

administrator

Leave a Reply

Your email address will not be published. Required fields are marked *