Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

ಅಕ್ಷರ ಸಂತ ಹರೇಕಳ ಹಾಜಬ್ಬ ಅವರಿಗೆ ಮಂಗಳೂರು ವಿವಿ ಗೌರವ ಡಾಕ್ಟರೇಟ್ ಘೋಷಣೆ

Spread the love

ಮಂಗಳೂರು: ಅಕ್ಷರ ಸಂತ ಬಿರುದಾಂಕಿತ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಹರೇಕಳ ಹಾಜಬ್ಬರಿಗೆ ಮಂಗಳೂರು ವಿಶ್ವವಿದ್ಯಾನಿಲಯದ ಗೌರವ ಡಾಕ್ಟರೇಟ್ ಘೋಷಣೆಯಾಗಿದೆ.
ಹರೇಕಳದ ಪಂಜಿಮಾಡಿ ಎಂಬಲ್ಲಿ ಕುಟ್ಟಿಮಾಕ ಮತ್ತು ಬೀಪಾತುಮ್ಮ ದಂಪತಿಯ ಆರು ಮಂದಿ ಮಕ್ಕಳಲ್ಲಿ ಮೂರನೆಯ ಪುತ್ರನಾಗಿ 1955ರಲ್ಲಿ ಜನಿಸಿದ ಹಾಜಬ್ಬ ಕೇಂದ್ರ ಸರಕಾರ ನಾಲ್ಕನೇ ಅತ್ಯುನ್ನತ ಪದಶ್ರೀ ಪ್ರಶಸ್ತಿಗೆ ಭಾಜನರಾಗುವ ಮೂಲಕ ದೇಶ-ವಿದೇಶಗಳಲ್ಲಿ ಮನೆ ಮಾತಾಗಿದ್ದರು. ಯಾವುದೇ ಪ್ರಚಾರದ ಹಂಗಿಲ್ಲದೆ ಗುರಿ ಮುಟ್ಟುವ ಛಲದೊಂದಿಗೆ ಮುನ್ನುಗ್ಗಿದುದರ ಪರಿಣಾಮ ಹಾಜಬ್ಬ ಇಂದು ಮತ್ತಷ್ಟು ಎತ್ತರಕ್ಕೇರಿದ್ದಾರೆ. ಹರೇಕಳ ಗ್ರಾಮವನ್ನೂ ಎತ್ತರಕ್ಕೇರಿಸಿದ್ದಾರೆ.

ಬಡತನದಿಂದಾಗಿ ಶಾಲೆಗೆ ಹೋಗಲು ಸಾಧ್ಯವಾಗದ ಹಾಜಬ್ಬ ಮನೆಯಲ್ಲೇ ಬೀಡಿ ಕಟ್ಟಿ ತಂದೆ-ತಾಯಿಗೆ ಸಹಾಯ ಮಾಡತೊಡಗಿದ್ದರು. 1974ರ ಭೀಕರ ನೆರೆ ಹಾವಳಿಗೆ ಪಂಜಿಮಾಡಿಯಲ್ಲಿದ್ದ ಕುಟ್ಟಿಮಾಕರ ಗುಡಿಸಲು ಕೊಚ್ಚಿಹೋಗಿತ್ತು. ಅನಿವಾರ್ಯವಾಗಿ ಈ ಕುಟುಂಬವು ಹರೇಕಳದ ನ್ಯೂಪಡ್ಡುವಿಗೆ ಸ್ಥಳಾಂತರಗೊಂಡು ಸಣ್ಣ ಮನೆ ನಿರ್ಮಿಸಿ ಬದುಕು ಸಾಗಿಸತೊಡಗಿತು. ಅಲ್ಲೂ ಹಾಜಬ್ಬ ಬೀಡಿ ಕಟ್ಟತೊಡಗಿದರು. 1978ರಲ್ಲಿ ಮಂಗಳೂರಿಗೆ ತೆರಳಿ ಬುಟ್ಟಿಯಲ್ಲಿ ಕಿತ್ತಳೆ, ಮೂಸಂಬಿ ಮಾರಾಟ ಮಾಡತೊಡಗಿದರು. ಹಾಗೇ ನ್ಯೂಪಡ್ಡುವಿನಲ್ಲಿ ಪತ್ನಿ ಒಬ್ಬ ಪುತ್ರ, ಇಬ್ಬರು ಪುತ್ರಿಯರ ಜೊತೆ ಸಂಸಾರ ಸಾಗಿಸಲು ಆರಂಭಿಸಿದ ಹಾಜಬ್ಬ ಮಸೀದಿಯ ಗುರುಗಳಿಗೆ ಮನೆ ಮನೆಯಿಂದ ಊಟ-ಚಹಾ-ತಿಂಡಿಯನ್ನೂ ಕೊಂಡೊಯ್ದು ತುಸು ಸಂಪಾದಿಸತೊಡಗಿದರು.

ಹಾಜಬ್ಬರಿಗೆ ಅಕ್ಷರ ಜ್ಞಾನವಿರಲಿಲ್ಲ. ಹಾಗಂತ ಅವರು ಧೃತಿಗೆಡಲಿಲ್ಲ. ಪ್ರಾಮಾಣಿಕತೆಯು ಹಾಜಬ್ಬರ ಧನಾತ್ಮಕ ಗುಣವಾಗಿತ್ತು. ಹಾಗಾಗಿ ನ್ಯೂಪಡ್ಡುವಿನ ತ್ವಾಹಾ ಜುಮಾ ಮಸೀದಿಯ ಕೋಶಾಧಿಕಾರಿಯಾಗಿ ಸೇವೆ ಸಲ್ಲಿಸುವ ಅವಕಾಶ ಸಿಕ್ಕಿತು ಎನ್ನಬಹುದು.
ಅಂದಿನ ಶಾಸಕ ಯು.ಟಿ.ಫರೀದ್, ಜಿಲ್ಲಾ ಪಂಚಾಯತ್, ಶಿಕ್ಷಣ ಇಲಾಖೆಯ ಅಧಿಕಾರಿಗಳ ಸಹಕಾರದಿಂದ 1999-2000ನೆ ಶೈಕ್ಷಣಿಕ ವರ್ಷದಲ್ಲಿ ನ್ಯೂಪಡ್ಡುವಿನ ಸರಕಾರಿ ಶಾಲೆಯ ತರಗತಿ ಆರಂಭಿಸಲು ಅನುಮತಿ ಪಡೆದುಕೊಂಡರು. ಆ ಬಳಿಕ ನಡೆದುದೆಲ್ಲವೂ ಇತಿಹಾಸ. ಶಿಕ್ಷಣ ಕ್ಷೇತ್ರದಲ್ಲಿ ಮಾಡಿದ ಅದ್ವಿತೀಯ ಸಾಧನೆಗಾಗಿ ಹಾಜಬ್ಬ ನೂರಾರು ಪ್ರಶಸ್ತಿಗಳಿಗೆ ಭಾಜನರಾಗುತ್ತಾ ದೇಶ-ವಿದೇಶಗಳಲ್ಲಿ ಸುದ್ದಿಯಾದರು.

1999ರಲ್ಲಿ ರವುಲತುಲ್ ಉಲೂಂ ಮದ್ರಸದ ಕಟ್ಟಡದಲ್ಲೇ 28 ಮಕ್ಕಳೊಂದಿಗೆ 1ನೇ ತರಗತಿ ಆರಂಭಿಸಲಾಯಿತು. ಮುಂದಿನ ವರ್ಷ ಎರಡನೇ ತರಗತಿಯನ್ನು ಮದ್ರಸದ ಕಟ್ಟಡದಲ್ಲೇ ಮುಂದುವರಿಸಿದರೂ ಆರ್ಥಿಕ ಸಮಸ್ಯೆ ಎದುರಾಯಿತು. ಅವಿರತ ಪ್ರಯತ್ನದ ಮೂಲಕ ಶಾಸಕರ ಅನುದಾನದ ಜೊತೆಗೆ ದಾನಿಗಳ ನೆರವು ಪಡೆದು ನ್ಯೂಪಡ್ಡುವಿನಲ್ಲಿ ಸಣ್ಣ ಜಾಗ ಖರೀದಿಸಿ ಸ್ವಂತ ಕಟ್ಟಡ ನಿರ್ಮಿಸಿದರು.

ಹಾಜಬ್ಬರಿಗೆ ಪ್ರಥಮ ಬಾರಿಗೆ 2004ರ ದಕ್ಷಿಣ ಕನ್ನಡ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಲಭಿಸಿತ್ತು. 2004ರಲ್ಲಿ ಅವರು ಕನ್ನಡ ಪ್ರಭಪತ್ರಿಕೆಯ ‘ವರ್ಷದ ವ್ಯಕ್ತಿ’ ಪ್ರಶಸ್ತಿಗೆ ಭಾಜನರಾದರು. ಆ ಬಳಿಕವಂತೂ ಹರೇಕಳ ಹಾಜಬ್ಬ ಮನೆಮಾತಾದರು. ದೇಶ ವಿದೇಶದ ನಾನಾ ಪ್ರಶಸ್ತಿಗಳು ಹಾಜಬ್ಬರನ್ನು ಅರಸಿಕೊಂಡು ಬಂತು. ನೂರಾರು ಮಂದಿ ಹಾಜಬ್ಬರ ಸೇವೆಗೆ ನಾನಾ ರೀತಿಯ ಸಹಾಯ ಮಾಡಿದರು. ಈಗಲೂ ಮಾಡುತ್ತಿದ್ದಾರೆ. ಅನೇಕ ಕಡೆ ಸನ್ಮಾನ, ಸಮ್ಮೇಳನಗಳ ಉದ್ಘಾಟನೆಯ ಭಾಗ್ಯವೂ ಹಾಜಬ್ಬರಿಗೆ ಲಭಿಸಿದೆ.

ಹೀಗೆ ಹಂತ ಹಂತವಾಗಿ ಅನೇಕ ಪ್ರಶಸ್ತಿ, ಬಿರುದು, ಸನ್ಮಾನಕ್ಕೆ ಭಾಜನರಾದ ಹರೇಕಳ ಹಾಜಬ್ಬರಿಗೆ ದೇಶದ ಅತ್ಯುನ್ನತ ನಾಗರಿಕ ಪ್ರಶಸ್ತಿ ದೊರಕಿಸಿಕೊಡಲು ದಕ್ಷಿಣ ಕನ್ನಡ ಜಿಲ್ಲಾಧಿಕಾರಿಯಾಗಿದ್ದ ಎ.ಬಿ.ಇಬ್ರಾಹೀಂ ಶ್ರಮಿಸಿದ್ದರು. ಅದಕ್ಕಾಗಿ ದಕ್ಷಿಣ ಕನ್ನಡ ಜಿಲ್ಲಾ ವಾರ್ತಾಧಿಕಾರಿಯಾಗಿದ್ದ ಬಿ.ಎ. ಖಾದರ್ ಶಾ, ಪತ್ರಕರ್ತರಾದ ಗುರುವಪ್ಪ ಬಾಳೆಪುಣಿ ಮತ್ತು ಹಂಝ ಮಲಾ‌ರ್ ಅವರನ್ನು ಒಳಗೊಂಡ ಸಮಿತಿಯೊಂದನ್ನು ರಚಿಸಿದರು. ಈ ಸಮಿತಿಯಿಂದ ದಕ್ಷಿಣ ಕನ್ನಡ ಜಿಲ್ಲಾಡಳಿತಕ್ಕೆ ವರದಿಯೊಂದನ್ನು ತರಿಸಿಕೊಂಡು ರಾಜ್ಯ ಸರಕಾರದ ಮೂಲಕ ಕೇಂದ್ರ ಸರಕಾರಕ್ಕೆ ಕಳುಹಿಸಿಕೊಟ್ಟಿದ್ದರು. ಐದಾರು ವರ್ಷದ ಬಳಿಕ ಅಂದರೆ 2020ನೇ ಸಾಲಿನ ದೇಶದ ಅತ್ಯುನ್ನತ ನಾಲ್ಕನೆಯ ನಾಗರಿಕ ಪ್ರಶಸ್ತಿಯಾದ ಪದ್ಮಶ್ರೀ ಹರೇಕಳ ಹಾಜಬ್ಬರಿಗೆ ಒಲಿದು ಬಂತು. ಆ ಮೂಲಕ ಹರೇಕಳ ಎಂಬ ಕುಗ್ರಾಮದ ಹೆಸರನ್ನು ಹಾಜಬ್ಬರು ಜಾಗತಿಕ ಮಟ್ಟದಲ್ಲಿ ಗುರುತಿಸುವಂತೆ ಮಾಡಿದರು.
ಸೌಮ್ಯ ಸ್ವಭಾವದ ಹಾಜಬ್ಬರಿಗೆ ನ್ಯೂಪಡುವಿನ ಸರಕಾರಿ ಶಾಲೆಯು ಸರ್ವಸ್ವವಾಗಿದೆ. ಈ ಶಾಲೆಗೆ ತನ್ನ ಶ್ರಮವೆಲ್ಲವನ್ನೂ ಸುರಿದಿರುವ ಹಾಜಬ್ಬ ಸುಮಾರು 70 ಲಕ್ಷ ರೂಪಾಯಿಯಷ್ಟು ದೇಣಿಗೆ – ಅನುದಾನವನ್ನು ವಿವಿಧ ಮೂಲಗಳಿಂದ ಒದಗಿಸುವಲ್ಲಿ ಯಶಸ್ವಿಯಾಗಿದ್ದಾರೆ. ತನಗೆ ದೊರೆತ ಪ್ರಶಸ್ತಿಗಳ ನಗದು ಮೊತ್ತವನ್ನು ಕೂಡ ಶಾಲೆಯ ಅಭಿವೃದ್ಧಿಗೆ ವ್ಯಯಿಸಿ ಸಮಾಜಕ್ಕೆ ಮಾದರಿಯಾಗಿದ್ದಾರೆ. ಶಾಲೆಗೆ ಒಂದು ಎಕರೆ ಮೂವತ್ತ ಮೂರೂವರೆ ಸೆಂಟ್ಸ್ ಜಮೀನು ಪಹಣಿ ಮಾಡಿಸಿದ್ದಾರೆ.
ಪ್ರಾಥಮಿಕ ಶಾಲಾ ತರಗತಿಯ ಬಳಿಕ 2007-08ರಲ್ಲಿ ಶಾಸಕ ಯು.ಟಿ.ಖಾದರ್ ರ ಸಹಕಾರದಿಂದ ಪ್ರೌಢಶಾಲೆಯನ್ನು ಆರಂಭಿಸಿದರು. ಪ್ರೌಢಶಾಲೆ ಆರಂಭಿಸಿ ಮೂರು ವರ್ಷವಾಗುತ್ತಲೇ ಪಿಯು ಕಾಲೇಜು ತರಗತಿ ಆರಂಭಿಸಲು ಪ್ರಯತ್ನಪಟ್ಟರು. ಆರಂಭದಲ್ಲಿ ಅದಕ್ಕೆ ಯಶಸ್ಸು ಸಿಗಲಿಲ್ಲ. ಆದರೆ ಪದ್ಮಶ್ರೀ ಲಭಿಸುತ್ತಲೇ ಜನಪ್ರತಿನಿಧಿಗಳ ಸಹಕಾರದಿಂದ ಕಾಲೇಜು ತರಗತಿ ಆರಂಭಿಸುವ ಬಗ್ಗೆ ಸರಕಾರದಿಂದ ಅನುಮತಿ ಪಡೆದು ಕಾಲೇಜು ಕಟ್ಟಡ ನಿರ್ಮಿಸಲು ಗ್ರಾಮಚಾವಡಿ ಬಳಿ ಸರಕಾರಿ ಜಮೀನನ್ನೂ ಮಂಜೂರು ಮಾಡಿಸಿಕೊಂಡರು. ಹಾಗೇ ಪ್ರೌಢಶಾಲೆಯ ಕಟ್ಟಡದಲ್ಲೇ ಪಿಯು ತರಗತಿ ಆರಂಭಿಸಿದ್ದಾರೆ.

ಪ್ರಶಸ್ತಿ, ಗೌರವ
ಹರೇಕಳ ಹಾಜಬ್ಬರಿಗೆ ದಕ್ಷಿಣ ಕನ್ನಡ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ, ಕನ್ನಡಪ್ರಭ ವರ್ಷದ ವ್ಯಕ್ತಿ ಪ್ರಶಸ್ತಿ ಲಭಿಸಿದ ಬಳಿಕ ಸಿಎನ್ಎನ್ ಐಬಿಎನ್ ರಿಯಲ್ ಹೀರೊ, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ಚಿತ್ರದುರ್ಗದ ಮುರುಘ ಮಠದ ಪ್ರಶಸ್ತಿ, ಕೊಪ್ಪಳ ಗವಿಸಿದ್ದೇಶ್ವರ ಮಠದ ಪ್ರಶಸ್ತಿ, ಮೈಸೂರು ರಮಾಬಾಯಿ ಚಾರಿಟೇಬಲ್ ಫೌಂಡೇಶನ್ನ ಪ್ರಶಸ್ತಿ, ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡಮಿಯ ಗೌರವ ಪ್ರಶಸ್ತಿ, ತುಳುನಾಡ ತುಡರ್, ಶೇಖ್ ಅಹ್ಮದ್ ಸರ್ ಹಿಂದಿ, ಅಬುಧಾಬಿಯ ಬ್ಯಾರೀಸ್ ವೆಲ್ವೇರ್ ಅಸೋಸಿಯೇಶನ್ ನ ದಶಮಾನೋತ್ಸವದ ಪ್ರಶಸ್ತಿ, ಬಹರೈನ್ ಕನ್ನಡ ಸಂಘದ ವಸಂತೋತ್ಸವ, ಆಳ್ವಾಸ್, ಮೂಲತ್ವ ಪ್ರಶಸ್ತಿ, ಬೆಂಗಳೂರಿನ ಬ್ಯಾರೀಸ್ ವೆಲ್ವೇರ್ ಅಸೋಸಿಯೇಶನ್, ಡಾ.ಪುಟ್ಟರಾಜ ಗವಾಯಿ ಗುರುವಂದನಾ ಪ್ರಶಸ್ತಿ, ಯೆನೆಪೊಯ ಎಕ್ಸಲೆಂಟ್ ಅವಾರ್ಡ್, ಪದಶ್ರೀ ಹೀಗೆ ಹಲವಾರು ಪ್ರಶಸ್ತಿಗಳಲ್ಲದೆ ಅಕ್ಷರ ಸಂತ, ಅಕ್ಕರೆಯ ಅವಧೂತ ಸಹಿತ ಹಲವಾರು ಬಿರುದುಗಳೂ ಲಭಿಸಿವೆ.
ಮಂಗಳೂರು ವಿಶ್ವವಿದ್ಯಾನಿಲಯದ 44ನೇ ವಾರ್ಷಿಕ ಘಟಿಕೋತ್ಸವ ಮಾ.28ರಂದು ನಡೆಯಲಿದ್ದುಈ ವೇಳೆ ಪದಶ್ರೀ ಪುರಸ್ಕೃತ ಹರೇಕಳ ಹಾಜಬ್ಬ ಇತ್ತೀಚೆಗೆ ನಿಧನರಾದ ಯಕ್ಷಗಾನ ರಂಗದ ದಶಾವತಾರಿ, ತೆಂಕುತಿಟ್ಟಿನ ಹಿರಿಯ ಕಲಾವಿದ ಸೂರಿಕುಮೇರು ಗೋವಿಂದ ಭಟ್ ಹಾಗೂ ದೈವ ನರ್ತಕ ರವೀಶ್ ಪಡುಮಲೆಯವರಿಗೆ ಗೌರವ ಡಾಕ್ಟರೇಟ್ ಲಭಿಸಲಿದೆ.


Spread the love
Share:

administrator

Leave a Reply

Your email address will not be published. Required fields are marked *