ಇರಾನ್ ವಿರುದ್ಧ ಅಮೆರಿಕ-ಇಸ್ರೇಲ್ ನಡೆಸುತ್ತಿರುವ ಸಂಘರ್ಷಕ್ಕೆ ಸೌದಿ ಅರೇಬಿಯಾ ಮತ್ತು ಯುಎಇ ಸಾಥ್?

ಗಲ್ಫ್ ಭೂಭಾಗದ ಮೇಲೆ ಪದೇ ಪದೇ ದಾಳಿ ಮತ್ತು ಹಾರ್ಮುಜ್ ಜಲಸಂಧಿಯ ಮೇಲಿನ ತನ್ನ ನಿಯಂತ್ರಣವನ್ನು ಇರಾನ್ ಇನ್ನಷ್ಟು ಬಿಗಿಗೊಳಿಸಬಹುದು ಎಂಬ ಆತಂಕದಿಂದ ಇರಾನ್ ವಿರುದ್ಧದ ಅಮೆರಿಕ-ಇಸ್ರೇಲ್ ಯುದ್ಧದಲ್ಲಿ ಸೇರುವ ಕುರಿತು ನಿರ್ಧಾರವನ್ನು ತೆಗೆದುಕೊಳ್ಳಲು ಸೌದಿ ಅರೇಬಿಯಾ ಮತ್ತು ಯುನೈಟೆಡ್ ಅರಬ್ ಎಮಿರೇಟ್ಸ್ ಸಜ್ಜಾಗುತ್ತಿದೆ ಎಂದು Wall Street Journal ವರದಿಯನ್ನು ಉಲ್ಲೇಖಿಸಿ India Today ವರದಿ ಮಾಡಿದೆ.
ಮಧ್ಯಪ್ರಾಚ್ಯ ಸಂಘರ್ಷ ಆರಂಭದ ಬಳಿಕ ಕಳೆದ ಕೆಲವು ವಾರಗಳಿಂದ ತಟಸ್ಥ ನಿಲುವು ತೆಗೆದುಕೊಂಡಿದ್ದ ಯುಎಇ, ಸೌದಿ ಅರೇಬಿಯಾ, ಬಹರೈನ್ ಮತ್ತು ಖತರ್ ಸಹಿತ ಗಲ್ಫ್ ರಾಷ್ಟ್ರಗಳು ಟೆಹ್ರಾನ್ ಹಿಂಜರಿಯದೆ ಇರುವುದರಿಂದ ತಮ್ಮ ನಿಲುವನ್ನು ಮರುಪರಿಶೀಲಿಸುತ್ತಿವೆ. ಇವುಗಳಲ್ಲಿ ನೇರ ಸೈನಿಕ ಕ್ರಮ ಅಥವಾ ಆರ್ಥಿಕ ಒತ್ತಡ ಹೇರುವ ಬಗ್ಗೆ ಮೌಲ್ಯಮಾಪನ ನಡೆಯುತ್ತಿದೆ ಎಂದು The Wall Street Journal ವರದಿಯು ತಿಳಿಸಿದೆ.

ಅಮೆರಿಕ ಮತ್ತು ಇಸ್ರೇಲ್ ಕ್ರಮವಾಗಿ ‘ಆಪರೇಷನ್ ಎಪಿಕ್ ಪ್ಯೂರಿ’ ಮತ್ತು ‘ಆಪರೇಷನ್ ರೋರಿಂಗ್ ಲಯನ್ ಅನ್ನು ಪ್ರಾರಂಭಿಸಿದಾಗ, ಇರಾನ್ ಪರಮಾಣು ಗುರಿಯನ್ನು ಅಥವಾ ಕ್ಷಿಪಣಿ ಯೋಜನೆಯನ್ನು ನಿಯಂತ್ರಿಸಬಹುದೇ ಎಂಬ ಬಗ್ಗೆ ಗಲ್ಫ್ ರಾಷ್ಟ್ರಗಳು ಅನುಮಾನ ವ್ಯಕ್ತಪಡಿಸಿದವು.
ಮಿಲಿಟರಿ ದಾಳಿಗಳು ಇರಾನ್‌ನ “ಅಸ್ಥಿರಗೊಳಿಸುವ ಚಟುವಟಿಕೆಗಳನ್ನು ಕೊನೆಗೊಳಿಸುವ ಅಪೇಕ್ಷಿತ ಪರಿಣಾಮವನ್ನು ಬೀರುತ್ತವೆ ಎಂಬ ಗಂಭೀರ ಸಂದೇಹವೂ ಇತ್ತು ಎಂದು ಗಲ್ಸ್ ರಾಜತಾಂತ್ರಿಕರೋರ್ವರು The Times of Israel ತಿಳಿಸಿದ್ದಾರೆ. ಅವರ ಅಭಿಪ್ರಾಯದಲ್ಲಿ, ರಾಜತಾಂತ್ರಿಕ ಮಾರ್ಗವೇ ಹೆಚ್ಚು ಸುರಕ್ಷಿತ ಮತ್ತು ಸಮಸ್ಯೆಯಿಂದ ಹೊರಬರುವ ಉತ್ತಮ ದಾರಿ ಎಂದು ಅವರು ನಂಬಿದ್ದರು.
ಆದರೆ ಇಸ್ರೇಲ್ ಮತ್ತು ಅಮೆರಿಕದ ಜಂಟಿ ದಾಳಿಗೆ ಪ್ರತಿಯಾಗಿ ಇರಾನ್ ನಡೆಸಿದ ದಾಳಿಯು ಲೆಕ್ಕಾಚಾರವನ್ನು ಬದಲಾಯಿಸಿತು. ಖತರ್‌ನ ರಾಸ್ ಲಫಾನ್ ಅನಿಲ ಕೇಂದ್ರದ ಮೇಲಿನ ದಾಳಿಯೂ ಸೇರಿದಂತೆ, ಗಲ್ಸ್‌ನಾದ್ಯಂತ ಇಂಧನ ಮೂಲಸೌಕರ್ಯ ಮತ್ತು ನಗರಗಳನ್ನು ಗುರಿಯಾಗಿಸಿಕೊಂಡು ನಡೆಸಲಾದ ಕ್ಷಿಪಣಿ ಮತ್ತು ಡೋನ್ ದಾಳಿಗಳು ಸರಕಾರವನ್ನು ಬೆಚ್ಚಿಬೀಳಿಸಿವೆ ಮತ್ತು ಆರ್ಥಿಕತೆಯ ಪ್ರಮುಖ ಕ್ಷೇತ್ರಗಳಾದ ತೈಲ, ಅನಿಲ ಮತ್ತು ಪ್ರವಾಸೋದ್ಯಮಕ್ಕೆ ಕೂಡ ದೊಡ್ಡ ಹೊಡೆತ ನೀಡಿವೆ.
ಇಂತಹ ದಾಳಿಗಳು ಗಲ್ಫ್ ರಾಷ್ಟ್ರಗಳನ್ನು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮೇಲೆ ಕದನ ವಿರಾಮಕ್ಕೆ ಒತ್ತಡ ಹೇರುವಂತೆ ಮಾಡುತ್ತದೆ ಎಂದು ಇರಾನ್ ನಿರೀಕ್ಷಿಸಿದಂತೆ ಕಾಣುತ್ತದೆ. ಆದರೆ ಗಲ್ಫ್ ರಾಷ್ಟ್ರಗಳನ್ನು ಇನ್ನಷ್ಟು ಕಠಿಣ ನಿಲುವು ತೆಗೆದುಕೊಳ್ಳುವಂತೆ ಮಾಡಿವೆ ಎಂದು ವರದಿಯು ಉಲ್ಲೇಖಿಸಿದೆ.
ಇರಾನ್ ಹಾರ್ಮುಝ್ ಜಲಸಂಧಿಯನ್ನು ನಿರ್ಬಂಧಿಸಿದೆ. ಇದರಿಂದ ವಿಶ್ವದ ಅತ್ಯಂತ ನಿರ್ಣಾಯಕ ಇಂಧನ ಕಾರಿಡಾರ್ ಗೆ ಅಡ್ಡಿಯಾಗಿದೆ. ಈ ಜಲಮಾರ್ಗದಲ್ಲಿ ಸಂಚರಿಸುವ ಹಡಗುಗಳಿಂದ ಸಂಚಾರ ಶುಲ್ಕ ವಿಧಿಸುವ ಯೋಚನೆಯನ್ನು ಕೂಡ ಇರಾನ್. ಮುಂದಿಟ್ಟಿದ್ದು, ಈ ಸಮುದ್ರ ಮಾರ್ಗದ ಮೇಲೆ ತನ್ನ ಏಕಾಧಿಕಾರವಿದೆ ಎಂಬ ಸಂದೇಶ ನೀಡಿದಂತಾಗಿದೆ.
ಈ ಮೊದಲು ತನ್ನ ಭೂಪ್ರದೇಶವನ್ನು ಇರಾನ್ ವಿರುದ್ಧದ ದಾಳಿಗೆ ಬಳಸಲು ಅನುಮತಿ ನೀಡುವುದರಿಂದ ಹಿಂಜರಿದಿದ್ದ ಸೌದಿ ಅರೇಬಿಯಾ, ಕಿಂಗ್ ಫಹದ್ ಏರ್ ಬೇಸ್ ಅನ್ನು ಬಳಸಲು ಅಮೆರಿಕದ ಸೈನ್ಯಕ್ಕೆ ಇದೀಗ ಅನುಮತಿಸಿದೆ ಎಂದು ವರದಿಯು ಉಲ್ಲೇಖಿಸಿದೆ.
ಇದಲ್ಲದೆ ಯುನೈಟೆಡ್ ಅರಬ್ ಎಮಿರೇಟ್ಸ್ ತನ್ನ ಹಣಕಾಸು ವ್ಯವಸ್ಥೆಯಲ್ಲಿ ಇರುವ ಇರಾನ್‌ನ ಕೋಟ್ಯಂತರ ಡಾಲರ್ ಮೌಲ್ಯದ ಆಸ್ತಿಗಳನ್ನು ಸ್ಥಗಿತಗೊಳಿಸುವ ಬಗ್ಗೆ ಚರ್ಚಿಸುತ್ತಿದೆ ಎಂದು The Wall Street Journal ವರದಿ ಮಾಡಿದೆ. ಈ ಕ್ರಮಕ್ಕೆ ಮುಂದಾದರೆ ಯುದ್ಧದ ಒತ್ತಡವನ್ನು ಎದುರಿಸುತ್ತಿರುವ ಟೆಹ್ರಾನ್ ಗೆ ದೊಡ್ಡ ಹೊಡೆತ ಬೀಳಲಿದೆ.
ಈ ಸಂಘರ್ಷದ ಅಂತ್ಯದಲ್ಲಿ ಇರಾನ್‌ನ ಸೈನಿಕ ಸಾಮರ್ಥ್ಯವನ್ನು ಸಾಕಷ್ಟು ಮಟ್ಟಿಗೆ ದುರ್ಬಲಗೊಳಿಸುವುದನ್ನು ಖಚಿತಪಡಿಸಬೇಕು. ಇರಾನ್ ಶಕ್ತಿಯನ್ನು ಕಡಿಮೆ ಮಾಡದೇ ಯುದ್ಧ ಕೊನೆಗೊಂಡರೆ, ಅದು ಭವಿಷ್ಯದಲ್ಲಿ ದೊಡ್ಡ ಅಪಾಯವಾಗುತ್ತದೆ ಎಂದು ಗಲ್ಫ್ ದೇಶಗಳು ಎಚ್ಚರಿಸಿವೆ ಎಂದು ವರದಿಯಾಗಿದೆ.
ಗಲ್ಫ್ ದೇಶಗಳ ನಾಯಕರು ಅಮೆರಿಕದ ಅಧಿಕಾರಿಗಳೊಂದಿಗೆ ನಿರಂತರ ಸಂಪರ್ಕದಲ್ಲಿದ್ದರೂ, ಅಮೆರಿಕದ ತಂತ್ರಯೋಜನೆ ಮೇಲೆ ಅವರ ಪ್ರಭಾವ ಸೀಮಿತವಾಗಿಯೇ ಉಳಿದಿದೆ. ಆಂತರಿಕ ಮೂಲಗಳ ಪ್ರಕಾರ, ಈ ಬೆಳವಣಿಗೆ ಪ್ರಾದೇಶಿಕ ಶಕ್ತಿಗಳು ಭವಿಷ್ಯದಲ್ಲಿ ಕೇವಲ ವಾಷಿಂಗ್ಟನ್ ಮೇಲೆ ಅವಲಂಬಿಸದೇ, ತಮ್ಮ ಭದ್ರತಾ ಭಾಗೀದಾರಿಕೆಯನ್ನು ವೈವಿಧ್ಯಗೊಳಿಸುವ ದಿಕ್ಕಿನಲ್ಲಿ ಯೋಚಿಸುವ ಸಾಧ್ಯತೆಯೂ ಇದೆ ಎಂದು ವರದಿಯು ಉಲ್ಲೇಖಿಸಿದೆ.
“ಈ ಯುದ್ಧವು ಅಂತ್ಯಗೊಳ್ಳುವಾಗ ಇರಾನ್ ತನ್ನ ನೆರೆ ರಾಷ್ಟ್ರಗಳಿಗೆ ಹಾನಿ ಮಾಡುವ ಸಾಮರ್ಥ್ಯವನ್ನು ಕಳೆದುಕೊಂಡಿರಬೇಕು,” ಎಂದು ಗಲ್ಫ್ ಪ್ರದೇಶದ ಅಧಿಕಾರಿಯೋರ್ವರು ಹೇಳಿದ್ದಾರೆ ಎಂದು ವರದಿಯು ಉಲ್ಲೇಖಿಸಿದೆ.