ತೈಲ ಬೆಲೆ ಏರಿಕೆಗೆ ಬ್ರೇಕ್: ಇರಾನ್ ತೈಲ ಮಾರಾಟಕ್ಕೆ ಅಮೆರಿಕದಿಂದ ತಾತ್ಕಾಲಿಕ ಅನುಮತಿ

ವಾಷಿಂಗ್ಟನ್ : ಜಾಗತಿಕ ಕಚ್ಚಾ ತೈಲ ಬೆಲೆ ಏರಿಕೆಯಾಗುತ್ತಿರುವ ಹಿನ್ನೆಲೆ ಸಮುದ್ರದಲ್ಲಿ ಸಿಲುಕಿಕೊಂಡಿರುವ ಇರಾನ್‌ನ ತೈಲಗಳ ಮಾರಾಟದ ಮೇಲಿನ ನಿರ್ಬಂಧಗಳನ್ನು ತಾತ್ಕಾಲಿಕವಾಗಿ ತೆರವುಗೊಳಿಸಿರುವುದಾಗಿ ಅಮೆರಿಕ ಘೋಷಿಸಿದೆ.
ಜಾಗತಿಕ ತೈಲ ಮಾರುಕಟ್ಟೆಯನ್ನು ಸ್ಥಿರಗೊಳಿಸುವುದು ಹಾಗೂ ಬೆಲೆ ಏರಿಕೆಯನ್ನು ನಿಯಂತ್ರಿಸುವ ಉದ್ದೇಶದಿಂದ ಈ ಕ್ರಮವನ್ನು ಕೈಗೊಳ್ಳಲಾಗಿದೆ ಎಂದು ಹೇಳಿದೆ.
ಈ ತಾತ್ಕಾಲಿಕ ಕ್ರಮ ಜಾಗತಿಕ ಮಾರುಕಟ್ಟೆಗಳಿಗೆ 140 ಮಿಲಿಯನ್ ಬ್ಯಾರೆಲ್ ಇರಾನಿನ ತೈಲವನ್ನು ಲಭ್ಯವಾಗುವಂತೆ ಮಾಡುತ್ತದೆ ಎಂದು ಅಮೆರಿಕದ ಖಜಾನೆ ಕಾರ್ಯದರ್ಶಿ ಸ್ಕಾಟ್ ಬೆಸೆಂಟ್ ಹೇಳಿದ್ದಾರೆ.
“ಈ ತಾತ್ಕಾಲಿಕ ಮತ್ತು ಅಲ್ಪಾವಧಿಯ ಅನುಮತಿ ಈಗಾಗಲೇ ಸಾಗಣೆಯಲ್ಲಿರುವ ತೈಲಕ್ಕೆ ಮಾತ್ರ ಸೀಮಿತವಾಗಿದೆ. ಹೊಸ ಖರೀದಿ ಅಥವಾ ಉತ್ಪಾದನೆಗೆ ಅವಕಾಶ ನೀಡುವುದಿಲ್ಲ ಎಂದು ಸ್ಕಾಟ್ ಬೆಸೆಂಟ್ ಎಕ್ಸ್ ನಲ್ಲಿನ ಪೋಸ್ಟ್ ನಲ್ಲಿ ತಿಳಿಸಿದ್ದಾರೆ.
ಯುದ್ಧ ಆರಂಭಕ್ಕೂ ಮುನ್ನ ಬ್ಯಾರೆಲ್‌ಗೆ ಸುಮಾರು 70 ಅಮೆರಿಕನ್ ಡಾಲರ್ ಇದ್ದ ಬ್ರೆಂಟ್ ಕಚ್ಚಾ ತೈಲದ ಬೆಲೆ, ಈ ವಾರ 119.50 ಡಾಲರ್‌ವರೆಗೆ ಏರಿಕೆಯಾಗಿದ್ದು ಜಾಗತಿಕ ತೈಲ ಮಾರುಕಟ್ಟೆಯಲ್ಲಿ ಅಸ್ಥಿರತೆಯನ್ನುಂಟುಮಾಡಿದೆ.
