ತೆಂಕುತಿಟ್ಟು ಯಕ್ಷಗಾನದ ಧೀಮಂತ ಕಲಾವಿದ ಸೂರಿಕುಮೇರು ಗೋವಿಂದ ಭಟ್ಟ ಇನ್ನಿಲ್ಲ

ಶಿವಮೊಗ್ಗ : ತೆಂಕುತಿಟ್ಟು ಯಕ್ಷಗಾನದ ಅಗ್ರಗಣ್ಯ ಕಲಾವಿದ ಸೂರಿಕುಮೇರು ಗೋವಿಂದ ಭಟ್ಟ (88) ಶುಕ್ರವಾರ ರಾತ್ರಿ ಶಿವಮೊಗ್ಗದ ತೀರ್ಥಹಳ್ಳಿಯ ಹೆದ್ದೂರಿನಲ್ಲಿ ನಿಧನರಾದರು.
ಅವರಿಗೆ ಮೂವರು ಪುತ್ರರು ಇದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯ ವಿಟ್ಲದ ಕನಿಲದಲ್ಲಿ ಜನಿಸಿದ ಗೋವಿಂದ ಭಟ್ಟರು ನಂತರ ಕಲ್ಲಡ್ಕ ಸಮೀಪದ ಸೂರಿಕುಮೇರುವಿನಲ್ಲಿ ವಾಸವಾಗಿದ್ದರು. ಈಚೆಗೆ ಕೆಲವು ವರ್ಷಗಳಿಂದ ತೀರ್ಥಹಳ್ಳಿಯಲ್ಲಿದ್ದರು.
ಪುತ್ರರಾದ ಪ್ರಸನ್ನ ಕುಮಾರ್ ಮತ್ತು ಶ್ಯಾಂ ಪ್ರಸಾದ್ ತೀರ್ಥಹಳ್ಳಿಯಲ್ಲಿದ್ದು ಸೂರ್ಯ ಭಟ್ಟ ಸೂರಿಕುಮೇರುವಿನಲ್ಲಿ ನೆಲೆಸಿದ್ದಾರೆ.

7ನೇ ತರಗತಿ ವರೆಗೆ ಓದಿದ್ದ ಗೋವಿಂದ ಭಟ್ಟರು 1951ರಲ್ಲಿ ಮೇಳಕ್ಕೆ ಸೇರಿ ಕುರಿಯ ವಿಠಲ ಶಾಸ್ತ್ರಿ, ಪರಮಶಿವನ್, ಮಾಧವ ಮೆನನ್, ರಾಜನ್ ಅಯ್ಯರ್ ಅವರಲ್ಲಿ ನಾಟ್ಯ ಕಲಿತು ಧರ್ಮಸ್ಥಳ, ಮುಲ್ಕಿ ಕೂಡ್ಲು, ಸುರತ್ಕಲ್ ಮತ್ತು ಇರಾ ಸೋಮನಾಥೇಶ್ವರ ಮೇಳಗಳಲ್ಲಿ ತಿರುಗಾಟ ನಡೆಸಿರುತ್ತಾರೆ. ಕೌರವ, ರಕ್ತಬೀಜ, ಇಂದ್ರಜಿತು ಮಾಗಧ, ಕರ್ಣ, ಅತಿಕಾಯ ನರಕಾಸುರ, ತಾಂಟ್ರಾಕ್ಷ ಕನಕಕಶಿಪು, ದೇವೇಂದ್ರ ಅರ್ಜುನ ಹನುಮಂತ, ಭೀಷ್ಮ ಬಾಹುಬಲಿ, ವಿಶ್ವಾಮಿತ್ರ ಅವರಿಗೆ ಹೆಸರು ತಂದು ಕೊಟ್ಟ ಪಾತ್ರಗಳು.
ಕೇಂದ್ರ ಸಂಗೀತ ನಾಟಕ ಅಕಾಡೆಮಿ ಪುರಸ್ಕಾರ, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ಕನ್ನಡ ಸಾಹಿತ್ಯ ಪರಿಷತ್ತು ಪುರಸ್ಕಾರ, ಕರ್ನಾಟಕ ಜಾನಪದ ಅಕಾಡೆಮಿ ಸಾಧನಾ ಪ್ರಶಸ್ತಿಗೆ ಅವರು ಪಾತ್ರರಾಗಿದ್ದಾರೆ.