ಕಿರುಕುಳಕ್ಕೆ ಬೇಸತ್ತು ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ಆತ್ಮಹ*ತ್ಯೆ; ಸಾವಿಗೂ ಮುನ್ನ ವೀಡಿಯೋ ರೆಕಾರ್ಡ್

ಪಾವಗಡ: ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕರಾದ ಮಲ್ಲಿಕಾರ್ಜುನಯ್ಯ (60) ಅವರು ಶುಕ್ರವಾರ ರಾತ್ರಿ ಪಟ್ಟಣದ ಕಚೇರಿಯಲ್ಲೇ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ.
ಪಟ್ಟಣದ ಸಮಾಜ ಕಲ್ಯಾಣ ಇಲಾಖೆಯ ಕಚೇರಿ ಕೊಠಡಿಯಲ್ಲಿ ನೇಣು ಬಿಗಿದುಕೊಂಡು ಅವರು ಆತ್ಮಹತ್ಯೆ ಮಾಡಿದ್ದಾರೆ. ಆತ್ಮಹತ್ಯೆಗೆ ಮುನ್ನ ಅವರು ವಿಡಿಯೊವನ್ನು ದಾಖಲಿಸಿ ಸಹೋದ್ಯೋಗಿಗಳಿಗೆ ಕಳುಹಿಸಿದ್ದಾಗಿ ತಿಳಿದು ಬಂದಿದೆ.
ಮಲ್ಲಿಕಾರ್ಜುನಯ್ಯ ಅವರು ಇದೇ ತಿಂಗಳಲ್ಲಿ ನಿವೃತ್ತಿಯಾಗಬೇಕಿದ್ದವರು. ಆದರೆ, ಮೇಲಾಧಿಕಾರಿಗಳ ಕಿರುಕುಳವೇ ಈ ಕಾರಣ ಎಂದು ಅವರ ಕುಟುಂಬದವರು ಗಂಭೀರ ಆರೋಪ ಮಾಡಿದ್ದಾರೆ.

ಸಾವಿಗೂ ಮುನ್ನ ತಮ್ಮ ಮೇಲಿನ ಒತ್ತಡ ಮತ್ತು ಕಿರುಕುಳದ ಬಗ್ಗೆ ವಿಡಿಯೊದಲ್ಲಿ ವಿವರಿಸಿರುವುದಾಗಿ ಹೇಳಲಾಗಿದ್ದು, ನಂತರ ಪಟ್ಟಣದ ಆಪ್ ಬಂಡೆ ಪ್ರದೇಶದಲ್ಲಿರುವ ಕಚೇರಿಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ.
ಘಟನೆ ತಿಳಿದ ತಕ್ಷಣ ಪಟ್ಟಣದ ಸಿಪಿಐ ಕೆ. ಸುರೇಶ್ ಹಾಗೂ ಪೊಲೀಸ್ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣದ ತನಿಖೆ ಮುಂದುವರೆದಿದೆ.
ಆತ್ಮಹತ್ಯೆಯ ಯೋಚನೆ ಬಂದಾಗ ಅದನ್ನು ನಿಗ್ರಹಿಸಲು ರಾಜ್ಯ ಸರಕಾರದ ಅರೋಗ್ಯ ಇಲಾಖೆಯ ಹೆಲ್ಸ್ ಲೈನ್ 104 ಸಹಾಯ ಮಾಡುತ್ತದೆ. ಅದರ ಜೊತೆಗೆ Tele-MANAS ನ 14416 ಅನ್ನೂ ಸಂಪರ್ಕಿಸಬಹುದು.