ಖತರ್ ಇಂಧನ ಕೇಂದ್ರಗಳ ಮೇಲೆ ಇರಾನ್ ದಾಳಿ ಎಲ್‌ಎನ್‌ಜಿ ಉತ್ಪಾದನೆಗೆ ಭಾರಿ ಪೆಟ್ಟು

ದೋಹಾ: ಇರಾನ್ ನಡೆಸಿದ ದಾಳಿಗಳ ಪರಿಣಾಮವಾಗಿ ಖತರ್ ನ ದ್ರವೀಕೃತ ನೈಸರ್ಗಿಕ ಅನಿಲ (LNG) ಉತ್ಪಾದನಾ ಸಾಮರ್ಥ್ಯದ ಸುಮಾರು 17 ಪ್ರತಿಶತವನ್ನು ಒದಗಿಸುವ ಪ್ರಮುಖ ಸೌಲಭ್ಯಗಳು ಗಂಭೀರವಾಗಿ ಹಾನಿಗೊಳಗಾಗಿವೆ ಎಂದು ಖತರ್ ಎನರ್ಜಿ ಸಂಸ್ಥೆಯ ಸಿಇಒ ಸಾದ್ ಅಲ್-ಕಾಬಿ ತಿಳಿಸಿದ್ದಾರೆ. ಹಾನಿಗೊಳಗಾದ ಮೂಲಸೌಕರ್ಯವನ್ನು ಸಂಪೂರ್ಣವಾಗಿ ಮರುಸ್ಥಾಪಿಸಲು ಕನಿಷ್ಠ ಮೂರುರಿಂದ ಐದು ವರ್ಷಗಳು ಬೇಕಾಗುತ್ತದೆ ಎಂದು ಅವರು ಹೇಳಿದ್ದಾರೆ.
ರಮಝಾನ್ ತಿಂಗಳಲ್ಲಿ ಸಹೋದರ ಮುಸ್ಲಿಂ ದೇಶದಿಂದ ಈ ರೀತಿಯ ದಾಳಿ ನಡೆಯುತ್ತದೆ ಎಂದು ಕನಸಿನಲ್ಲಿಯೂ ನಿರೀಕ್ಷಿಸಿರಲಿಲ್ಲ ಎಂದು ಅಲ್-ಕಾಬಿ ವಿಷಾದ ವ್ಯಕ್ತಪಡಿಸಿದ್ದಾರೆ ಎಂದು ರಾಯಿಟರ್ಸ್ ಗೆ ನೀಡಿದ ಸಂದರ್ಶನದಲ್ಲಿ ಅವರು ಪ್ರತಿಕ್ರಿಯಿಸಿದ್ದಾರೆ.
ಸರ್ಕಾರಿ ಸ್ವಾಮ್ಯದ ಖತರ್ ಎನರ್ಜಿ, ಇಟಲಿ, ಬೆಲ್ಲಿಯಂ, ದಕ್ಷಿಣ ಕೊರಿಯಾ ಮತ್ತು ಚೀನಾಕ್ಕೆ LNG ಪೂರೈಕೆಗೆ ಮಾಡಿಕೊಂಡಿರುವ ದೀರ್ಘಾವಧಿಯ ಒಪ್ಪಂದಗಳ ಮೇಲೆ ‘ಬಲವಂತದ ನಿರ್ಬಂಧ’ ಘೋಷಿಸುವ ಪರಿಸ್ಥಿತಿ ಎದುರಾಗಬಹುದು ಎಂದು ಅಲ್-ಕಾಬಿ ತಿಳಿಸಿದ್ದಾರೆ.
“ಇವು ದೀರ್ಘಾವಧಿಯ ಒಪ್ಪಂದಗಳು. ಈ ಹಿನ್ನೆಲೆಯಲ್ಲಿ ನಾವು ಬಲವಂತದ ನಿರ್ಬಂಧವನ್ನು ಘೋಷಿಸಬೇಕಾಗಬಹುದು. ನಾವು ಈಗಾಗಲೇ ಅಲ್ಪಾವಧಿಗೆ ಅದನ್ನು ಘೋಷಿಸಿದ್ದೇವೆ. ಈಗ ಅವಧಿ ಹೇಗಿರುತ್ತದೆ ಎಂಬುದು ಮುಂದಿನ ಬೆಳವಣಿಗೆಗಳ ಮೇಲೆ ಅವಲಂಬಿತ.” ಎಂದು ಅವರು ಹೇಳಿದ್ದಾರೆ.
ಹಾನಿಗೊಳಗಾದ LNG ಮೂಲಸೌಕರ್ಯವನ್ನು ನಿರ್ಮಿಸಲು ಸುಮಾರು 26 ಬಿಲಿಯನ್ ಡಾಲರ್ ವೆಚ್ಚವಾಗಿತ್ತು ಎಂದು ಅಲ್-ಕಾಬಿ ತಿಳಿಸಿದ್ದಾರೆ.
