ಡಿ.ಜೆ. ಹಳ್ಳಿಯಲ್ಲಿ ಅಪ್ರಾಪ್ತೆಯ ಭೀಕರ ಕೊ*ಲೆ; ಮದುವೆಯಾಗಬೇಕಿದ್ದವನಿಂದಲೇ ಕತ್ತು ಸೀಳಿ ಹ*ತ್ಯೆ

ಬೆಂಗಳೂರು: ಡಿಜೆ ಹಳ್ಳಿಯಲ್ಲಿ ನಡೆದ ಅಪ್ರಾಪ್ತೆ ಕೊಲೆ ಪ್ರಕರಣವು ಅತ್ಯಂತ ಭೀಕರವಾಗಿದ್ದು, ಆರೋಪಿ ಶಬೀಲ್ ಎಂಬಾತನ ಕೃತ್ಯದಿಂದ ಇಡೀ ನಗರವೇ ಬೆಚ್ಚಿಬಿದ್ದಿದೆ. ಕೋಲಾರ ಮೂಲದ ಅಪ್ರಾಪ್ತೆಯೊಂದಿಗೆ ಕಳೆದ ಜೂನ್ ತಿಂಗಳಲ್ಲಿ ಶಬೀಲ್ನ ನಿಶ್ಚಿತಾರ್ಥ ನಡೆದಿತ್ತು. ಇತ್ತೀಚೆಗೆ ರಂಜಾನ್ ಹಬ್ಬದ ಹಿನ್ನೆಲೆಯಲ್ಲಿ ಬಾಲಕಿ ಬೆಂಗಳೂರಿನ ತನ್ನ ಸಂಬಂಧಿಕರ ಮನೆಗೆ ಬಂದಿದ್ದ ಸಂದರ್ಭದಲ್ಲಿ, ಆರೋಪಿಯು ಆಕೆಯನ್ನು ಡಿಜೆ ಹಳ್ಳಿಯ ಪಾಳುಬಿದ್ದ ಮನೆಯೊಂದಕ್ಕೆ ಕರೆಸಿಕೊಂಡಿದ್ದಾನೆ.

ಅನುಮಾನದ ಹಿನ್ನೆಲೆಯಲ್ಲಿ ಈ ಕೃತ್ಯ ಎಸಗಿರುವ ಶಬೀಲ್, ಮೊದಲು ಬಾಲಕಿಯ ಎದೆಯ ಭಾಗಕ್ಕೆ ಚಾಕುವಿನಿಂದ ಇರಿದು, ನಂತರ ಅತ್ಯಂತ ಕ್ರೂರವಾಗಿ ಕತ್ತು ಸೀಳಿ ಹತ್ಯೆ ಮಾಡಿದ್ದಾನೆ. ಬಾಲಕಿಯು ಸಂಜೆಯಾದರೂ ಮನೆಗೆ ಮರಳದಿದ್ದಾಗ ಪೋಷಕರು ಹುಡುಕಾಟ ನಡೆಸಿದ್ದು, ಅಂತಿಮವಾಗಿ ಪಾಳುಬಿದ್ದ ಮನೆಯಲ್ಲಿ ಆಕೆಯ ಶವ ಪತ್ತೆಯಾಗಿದೆ. ಸದ್ಯ ಆರೋಪಿ ಶಬೀಲ್ ತಲೆಮರೆಸಿಕೊಂಡಿದ್ದು, ಡಿಜೆ ಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಪೊಲೀಸರು ಆತನಿಗಾಗಿ ತೀವ್ರ ಶೋಧ ನಡೆಸುತ್ತಿದ್ದಾರೆ.