ಹಣ ಡಬಲ್ ಮಾಡುವ ಆಮಿಷ; ಮಹಾರಾಷ್ಟ್ರದ ಇಬ್ಬರು ಪೊಲೀಸರು ಸೇರಿ ಏಳು ಮಂದಿ ಬಂಧನ

ಬೆಳಗಾವಿ : ಸಾರ್ವಜನಿಕರಿಗೆ ಹಣವನ್ನು ಡಬಲ್ ಅಥವಾ ನಾಲ್ಕು ಪಟ್ಟು ಮಾಡಿಕೊಡುವುದಾಗಿ ಆಮಿಷವೊಡ್ಡಿ ವಂಚಿಸುತ್ತಿದ್ದ ಅಂತರ್ರಾಜ್ಯ ವಂಚಕರ ಜಾಲವನ್ನು ಪೊಲೀಸರು ಭೇದಿಸಿದ್ದು, ಈ ಪ್ರಕರಣದಲ್ಲಿ ಮಹಾರಾಷ್ಟ್ರದ ಇಬ್ಬರು ಪೊಲೀಸ್ ಸಿಬ್ಬಂದಿ ಸೇರಿ ಒಟ್ಟು ಏಳು ಮಂದಿಯನ್ನು ಬಂಧಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ಅಧೀಕ್ಷಕ (ಎಸ್ಪಿ) ಕೆ.ರಾಮರಾಜನ್ ತಿಳಿಸಿದ್ದಾರೆ.
ಗೋಕಾಕ ತಾಲೂಕಿನ ಶ್ರೀನಗರದಲ್ಲಿರುವ ಮನೆಯೊಂದರಲ್ಲಿ ಹಣವನ್ನು ನಾಲ್ಕು ಪಟ್ಟು ಮಾಡಿಕೊಡುವುದಾಗಿ ನಂಬಿಸಿ ಸಾರ್ವಜನಿಕರಿಗೆ ವಂಚನೆ ನಡೆಸುತ್ತಿದ್ದ ಜಾಲದ ಮೇಲೆ ಗೋಕಾಕ ನಗರ ಪೊಲೀಸ್ ಠಾಣೆಯ ಪೊಲೀಸರು ದಾಳಿ ನಡೆಸಿ ಆರೋಪಿಗಳನ್ನು ಬಂಧಿಸಿದರು.

ಬಂಧಿತರನ್ನು ಪರಶುರಾಮ ಭೀಮಶಿ ಬಡಕರಿ, ಇಮ್ರಾನ್ ಬಾಬಾಜಾನ್ ಜುನೇದಿ, ಜಯಶ್ರೀ ಬಾಬು ಕಾಂಬಳೆ, ಮನೀಷಾ ರಾಜು ಗಾಯಕವಾಡ (ಮಾರ್ಗರೆಟ್ ಡೇವಿಡ್ ಗಾಯಕವಾಡ), ಉಜ್ವಲಾ ತುಳಸಿರಾಮ ಬಿಲಾನೆ, ಹಾಗೂ ಮಹಾರಾಷ್ಟ್ರ ಪೊಲೀಸ್ ಇಲಾಖೆಯ ಸಿಬ್ಬಂದಿಯಾದ ಅನಂತ ಪ್ರಕಾಶ ನರವಾಡೆ ಮತ್ತು ದಿಲ್ದಾರ್ ರಬ್ಬಾನಿ ಶೇಖ ಎಂದು ಗುರುತಿಸಲಾಗಿದೆ.
ವಂಚಕರು ಬಿಳಿ ಕಾಗದದ ಹಾಳೆಗಳಿಗೆ ಕಪ್ಪು ಬಣ್ಣ ಹಚ್ಚಿ, ಅದನ್ನು ವಿಶೇಷ ರಾಸಾಯನಿಕ ಬಳಸಿ ಅಸಲಿ ನೋಟುಗಳಾಗಿ ಪರಿವರ್ತಿಸಬಹುದು ಎಂದು ನಂಬಿಸಿ ಸಾರ್ವಜನಿಕರಿಂದ ಹಣ ಪಡೆದು ವಂಚಿಸುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಈ ಅಂತರರಾಜ್ಯ ವಂಚನೆ ಜಾಲದಲ್ಲಿ ಭಾಗಿಯಾಗಿದ್ದ ಆರೋಪಿಗಳ ವಿರುದ್ಧ ಗೋಕಾಕ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದ್ದು, ಎಲ್ಲ ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಎಸ್ಪಿ ಮಾಹಿತಿ ನೀಡಿದರು.