ಒಡಿಶಾ: ಕಟಕ್ ಆಸ್ಪತ್ರೆಯಲ್ಲಿ ಭೀಕರ ಅಗ್ನಿ ಅವಘಡ; ಕನಿಷ್ಠ 10 ಮಂದಿ ಸಜೀವ ದಹನ

ಕಟಕ್: ಒಡಿಶಾ ರಾಜಧಾನಿಯ ಎಸ್ಪಿಬಿ ವೈದ್ಯಕೀಯ ಶಿಕ್ಷಣ ಕಾಲೇಜು ಮತ್ತು ಆಸ್ಪತ್ರೆಯ ಟ್ರಾಮಾ ಕೇರ್ ವಿಭಾಗದಲ್ಲಿ ಸೋಮವಾರ ನಸುಕಿನಲ್ಲಿ ಸಂಭವಿಸಿದ ಭೀಕರ ಅಗ್ನಿ ಆಕಸ್ಮಿಕದಲ್ಲಿ ಕನಿಷ್ಠ 10 ಮಂದಿ ಮೃತಪಟ್ಟಿದ್ದಾರೆ. ಘಟನೆಯಲ್ಲಿ ಆಸ್ಪತ್ರೆಯ 11 ಸಿಬ್ಬಂದಿ ಗಾಯಗೊಂಡಿದ್ದಾರೆ. ಹಲವಾರು ಅಗ್ನಿಶಾಮಕ ವಾಹನಗಳು ಪರಿಹಾರ ಕಾರ್ಯಾಚರಣೆಯಲ್ಲಿ ತೊಡಗಿವೆ.
ಐದು ಮಂದಿ ಗಾಯಾಳುಗಳ ಸ್ಥಿತಿ ಗಂಭೀರವಾಗಿದ್ದು, ಮುಖ್ಯಮಂತ್ರಿ ಮೋಹನ್ ಚರಣ್ ಮಾಂಝಿ ಸ್ಥಳಕ್ಕೆ ಧಾವಿಸಿದ್ದಾರೆ. ಟ್ರಾಮಾ ಕೇರ್ ಸೆಂಟರ್ ನಲ್ಲಿ ದಾಖಲಾಗಿದ್ದ 10 ಮಂದಿ ರೋಗಿಗಳು ಸುಟ್ಟು ಕರಕಲಾಗಿದ್ದಾರೆ ಎಂದು ಅಧಿಕೃತ ಮೂಲಗಳು ಹೇಳಿವೆ.
ಒಡಿಶಾದ ಮಯೂರಭಂಜ್ ಜಿಲ್ಲೆಯಲ್ಲಿ ಭಾನುವಾರ ಸಂಭವಿಸಿದ ಬೆಂಕಿ ಆಕಸ್ಮಿಕದಲ್ಲಿ 200 ಮನೆಗಳಿಗೆ ಹಾನಿಯಾಗಿದ್ದು, ಇಬ್ಬರು ಮೃತಪಟ್ಟು 17 ಮಂದಿ ಗಾಯಗೊಂಡಿದ್ದರು. ಈ ಘಟನೆಯ ಬೆನ್ನಲ್ಲೇ ಮತ್ತೊಂದು ಭೀಕರ ಅಗ್ನಿ ಆಕಸ್ಮಿಕ ಸಂಭವಿಸಿದೆ.
