ರಸ್ತೆಯಲ್ಲಿ ನಮಾಜ್ ಮಾಡಿದರೆ ಪಾಸ್‌ಪೋರ್ಟ್ ರದ್ದು: ಮೀರತ್ ಪೊಲೀಸ್ ಅಧಿಕಾರಿಯಿಂದ ಕಠಿಣ ಎಚ್ಚರಿಕೆ

ಮೀರತ್ : ಉತ್ತರ ಪ್ರದೇಶದ ಮೀರತ್‌ನಲ್ಲಿ ಶುಕ್ರವಾರ ಪೊಲೀಸ್ ಅಧಿಕಾರಿಯೊಬ್ಬರು ರಸ್ತೆಗಳಲ್ಲಿ ನಮಾಝ್ ಮಾಡದಂತೆ ಎಚ್ಚರಿಕೆ ನೀಡಿದ್ದು, ಮಾರ್ಗಸೂಚಿ ಉಲ್ಲಂಘಿಸುವವರ ಪಾಸ್‌ಪೋರ್ಟ್ ಗಳನ್ನು ರದ್ದುಗೊಳಿಸಲಾಗುವುದು ಎಂದು ಬೆದರಿಸಿರುವ ಬಗ್ಗೆ The Times of India ವರದಿ ಮಾಡಿದೆ.
“ರಸ್ತೆಗಳಲ್ಲಿ ನಮಾಝ್ ಮಾಡಬಾರದು. ನಿಯಮವನ್ನು ಉಲ್ಲಂಘಿಸಿದರೆ ಅಂತಹ ವ್ಯಕ್ತಿಗಳ ವಿರುದ್ಧ ಕ್ರಮವನ್ನು ಕೈಗೊಳ್ಳಲಾಗುವುದು ಮತ್ತು ಅವರ ಪಾಸ್‌ಪೋರ್ಟ್‌ಗಳನ್ನು ರದ್ದುಗೊಳಿಸಲಾಗುವುದು” ಎಂದು ಮೀರತ್‌ನ ಹಿರಿಯ ಪೊಲೀಸ್ ವರಿಷ್ಠಾಧಿಕಾರಿ ಅವಿನಾಶ್ ಪಾಂಡೆ ಹೇಳಿದ್ದಾರೆ.

ಮೀರತ್ ಜಿಲ್ಲೆಯಲ್ಲಿ 544 ಮಸೀದಿಗಳು ಮತ್ತು 146 ಈದ್ದಾಗಳಿವೆ ಮತ್ತು ಅವುಗಳ ನಿರ್ವಹಣಾ ಸಮಿತಿಗಳು ನಿಯಮಗಳನ್ನು ಪಾಲಿಸಲು ಒಪ್ಪಿಕೊಂಡಿವೆ ಎಂದು ಪಾಂಡೆ ಹೇಳಿದ್ದಾರೆ.
ಪಾಸ್‌ಪೋರ್ಟ್‌ಗಳನ್ನು ರದ್ದುಗೊಳಿಸುವ ಬಗ್ಗೆ ಯಾವುದೇ ನಿಬಂಧನೆ ಇಲ್ಲದಿದ್ದರೂ ನಿಯಮ ಉಲ್ಲಂಘಿಸುವವರ ಅಪರಾಧ ಹಿನ್ನೆಲೆಯ ಕುರಿತು ತನಿಖೆ ನಡೆಸಬಹುದು ಮತ್ತು ಆ ತನಿಖೆಯ ಆಧಾರದ ಮೇಲೆ ಪಾಸ್‌ಪೋರ್ಟ್ ರದ್ದುಪಡಿಸುವ ಸಾಧ್ಯತೆ ಇದೆ ಎಂದು ಪಾಂಡೆ ಹೇಳಿರುವ ಬಗ್ಗೆ The Times of India ವರದಿ ಮಾಡಿದೆ.
ಪಾಂಡೆ ಪತ್ರಿಕೆಗೆ ನೀಡಿದ ಹೇಳಿಕೆಯಲ್ಲಿ ನಾನು ಹೊಸದೇನನ್ನೂ ಹೇಳಿಲ್ಲ. ಹಿಂದಿನ ವರ್ಷದ ಆದೇಶವನ್ನು ಪುನರುಚ್ಚರಿಸಿದ್ದೇನೆ ಎಂದು ಹೇಳಿದ್ದಾರೆ.