ಮತ್ತೆ ಅಡುಗೆ ಮನೆ ಸೇರಿದ ಸೀಮೆಎಣ್ಣೆ, ಇದ್ದಿಲು: ಗ್ಯಾಸ್ ಪೂರೈಕೆ ವ್ಯತ್ಯಯದಿಂದ ಜನಸಾಮಾನ್ಯರ ಪರದಾಟ

ಹೊಸದಿಲ್ಲಿ: ಮಧ್ಯಪ್ರಾಚ್ಯ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ತೈಲ ಮತ್ತು ಅಡುಗೆ ಅನಿಲ ಕೊರತೆ ದೇಶದಲ್ಲಿ ವ್ಯಾಪಕವಾದ ಬೆನ್ನಲ್ಲೇ, ಹೋಟೆಲ್ ಗಳಿಗೆ ಸೀಮಿತ ರೀತಿಯಲ್ಲಿ ಪೂರೈಕೆ ಮಾಡುವುದಾಗಿ ಸರ್ಕಾರ ಪ್ರಕಟಿಸಿದೆ. ಜತೆಗೆ ತಾತ್ಕಾಲಿಕವಾಗಿ ಸೀಮೆ ಎಣ್ಣೆ ಮತ್ತು ಇದ್ದಿಲನ್ನು ಅಡುಗೆ ಆಯ್ಕೆಯಾಗಿ ಮರು ಪರಿಚಯಿಸಲಾಗುತ್ತಿದೆ ಎಂದು ಸ್ಪಷ್ಟಪಡಿಸಿದೆ.
ಹೋಟೆಲ್ ಮತ್ತು ರೆಸ್ಟೋರೆಂಟ್ ಉದ್ಯಮದಿಂದ ಒತ್ತಡ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ತೈಲ ಮಾರುಕಟ್ಟೆ ಕಂಪನಿಗಳ ಮೂವರು ಸದಸ್ಯರ ಸಮಿತಿ, ಹೋಟೆಲ್ ಗಳು ಸರಾಸರಿ ಮಾಸಿಕ ಬಳಕೆಯ ಶೇಕಡ 20ರಷ್ಟು ಪೂರೈಕೆಯನ್ನು ಪಡೆಯಲು ಅವಕಾಶ ನೀಡಿದೆ. ಜತೆಗೆ ಗ್ರಾಮೀಣ ಗ್ರಾಹಕರು ಒಂದು ಸಿಲಿಂಡರ್ ಬುಕ್ಕಿಂಗ್ ಮಾಡಿದ ಬಳಿಕ ಮತ್ತೊಂದು ಸಿಲಿಂಡರ್ ಬುಕ್ ಮಾಡುವ ಅವಧಿಯನ್ನು 25 ರಿಂದ 45 ದಿನಗಳಿಗೆ ಹೆಚ್ಚಿಸಿದೆ.

ರಾಜ್ಯಗಳಿಗೆ ಹಾಲಿ ವಿತರಿಸುತ್ತಿರುವ ಒಂದು ಲಕ್ಷ ಕಿಲೋಲೀಟರ್ ಗಳಿಗೆ ಹೆಚ್ಚುವರಿಯಾಗಿ ಅಡುಗೆ ಇಂಧನವಾಗಿ ಬಳಸಲು ಅನುವಾಗುವಂತೆ 48 ಸಾವಿರ ಕಿಲೋಲೀಟರ್ (ಕೆಎಲ್) ಸೀಮೆಎಣ್ಣೆಯನ್ನು ರಾಜ್ಯಗಳಿಗೆ ಹಂಚಿಕೆ ಮಾಡಿದೆ ಎಂದು ಪೆಟ್ರೋಲಿಯಂ ಸಚಿವಾಲಯ ಪ್ರಕಟಿಸಿದೆ.
ಇದನ್ನು ಬಳಸಲು ಅನುಮತಿ ನೀಡುವಂತೆ ಆಯಾ ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶಗಳ ಮಾಲಿನ್ಯ ನಿಯಂತ್ರಣ ಮಂಡಳಿಗಳಿಗೆ ಕೋರಲಾಗಿದೆ. ಜತೆಗೆ ಸ್ಥಳೀಯ ಸಂಸ್ಥೆಗಳು, ಕೈಗಾರಿಕಾ ಹಾಗೂ ವಾಣಿಜ್ಯ ತ್ಯಾಜ್ಯಗಳಿಂದ ಉತ್ಪಾದಿಸಲಾದ ಆರ್ ಡಿಎಫ್ ಪ್ಯಾಲೆಟ್ ಗಳು ಮತ್ತು ಇದ್ದಿಲನ್ನು ಒಂದು ತಿಂಗಳ ಅವಧಿಗೆ ಆತಿಥ್ಯ ಉದ್ಯಮ ಮತ್ತು ರೆಸ್ಟೋರೆಂಟ್ ಗಳಲ್ಲಿ ಬಳಸಲು ಅನುಮತಿಸಲಾಗುತ್ತಿದೆ ಎಂದು ಸ್ಪಷ್ಟಪಡಿಸಿದೆ.