ಇಬ್ಬರು ಕುಕಿಗಳ ಹ*ತ್ಯೆ; ಪ್ರತೀಕಾರವಾಗಿ ಅಪಹರಣಕ್ಕೊಳಗಾಗಿದ್ದ 21 ನಾಗಾ ಪ್ರಜೆಗಳ ಬಿಡುಗಡೆ

ಗುವಾಹತಿ: ಮಣಿಪುರದಲ್ಲಿ ಬುಧವಾರ ನಾಪತ್ತೆಯಾಗಿದ್ದ ಇಬ್ಬರು ಕುಕಿಗಳ ಮೃತದೇಹ ಗುರುವಾರ ಪತ್ತೆಯಾಗಿದೆ. ಇಬ್ಬರು ಕುಕಿಗಳ ಅಪಹರಣಕ್ಕೆ ಪ್ರತೀಕಾರವಾಗಿ ನಾಗಾ ಸಮುದಾಯಕ್ಕೆ ಸೇರಿದ್ದ 21 ಮಂದಿಯನ್ನು ಒತ್ತೆಯಾಳುಗಳಾಗಿ ಇರಿಸಿಕೊಳ್ಳಲಾಗಿತ್ತು. ಉಬ್ರುಲ್-ಇಂಫಾಲ್ ಮಾರ್ಗದಲ್ಲಿ ಸೆರೆಹಿಡಿಯಲ್ಪಟ್ಟ ಎಲ್ಲ ಒತ್ತೆಯಾಳುಗಳನ್ನು ಸುರಕ್ಷಿತವಾಗಿ ಬಿಡುಗಡೆ ಮಾಡಲಾಗಿದೆ ಎಂದು ಮುಖ್ಯಮಂತ್ರಿ ಯುಮ್ನಮ್ ಖೇಮ್ ಚಂದ್ ಬಜೆಟ್ ಅಧಿವೇಶದ ವೇಳೆ ಸದನದಲ್ಲಿ ಮಾಹಿತಿ ನೀಡಿದ್ದಾರೆ.
ಈ ಪ್ರಕರಣವನ್ನು ರಾಷ್ಟ್ರೀಯ ತನಿಖಾ ಸಂಸ್ಥೆಗೆ ಹಸ್ತಾಂತರಿಸಲಾಗಿದೆ ಎಂದು ಅವರು ವಿವರಿಸಿದರು.

ಮೃತ ಕುಕಿಗಳನ್ನು ಕಂಜಾಂಗ್ ಜಿಲ್ಲೆಯ ಥವಾಯ್ ಕುಕಿ ಗ್ರಾಮದ ತೆಂಜಿನ್ ಬಿಯಾಟ್ ಹಾಗೂ ಉಬ್ರುಲ್ ಜಿಲ್ಲೆ ಶಾಂಗ್ ಕಾಯ್ ಗ್ರಾಮದ ತಂಗ್ ಬೊಯ್ ಮಂಗ್ ಎಂದು ಗುರುತಿಸಲಾಗಿದೆ. ಇಂಫಾಲದಲ್ಲಿ ನಡೆಯುತ್ತಿರುವ 12ನೇ ವಿಧಾನಸಭೆಯ ಏಳನೇ ಅಧಿವೇಶನದಲ್ಲಿ ಗುರುವಾರ ಮುಖ್ಯಮಂತ್ರಿ ಈ ಹೇಳಿಕೆ ನೀಡಿದರು.
ನಿಲುವಳಿ ಸೂಚನೆ ಮೂಲಕ ವಿಷಯದ ಬಗ್ಗೆ ಗಮನ ಸೆಳೆದ ಕಾಂಗ್ರೆಸ್ ಶಾಸಕ ಕೆ.ಮೇಘಚಂದ್ರ ಅವರು ಮಣಿಪುರದ ಗೃಹ ಸಚಿವ ಕೆ.ಗೋವಿಂದದಾಸ್ ಅವರಿಂದ ಸ್ಪಷ್ಟನೆ ಕೋರಿ, ಥವಾಯ್ ಗ್ರಾಮದಲ್ಲಿ ಭೀಕರ ಗುಂಡಿನ ಚಕಮಕಿ ಮತ್ತು ಇಂಫಾಲ್-ಉಬ್ರುಲ್ ರಸ್ತೆಯಲ್ಲಿ 21 ಮಂದಿ ನಾಗರಿಕರ ಅಪಹರಣ ನಡೆದ ಬಳಿಕ ಪರಿಸ್ಥಿತಿ ಮತ್ತಷ್ಟು ಉಲ್ಬಣಗೊಳ್ಳದಂತೆ ಸರ್ಕಾರ ಯಾವ ಕ್ರಮಗಳನ್ನು ಕೈಗೊಂಡಿದೆ ಎಂದು ಮಾಹಿತಿ ನೀಡುವಂತೆ ಆಗ್ರಹಿಸಿದ್ದರು.
ಇದಕ್ಕೆ ಉತ್ತರಿಸಿದ ಗೋವಿಂದದಾಸ್, ಉಬ್ರುಲ್ ಜಿಲ್ಲೆ ಮಪಿಥೆಲ್ ಬೆಟ್ಟ ಪ್ರದೇಶದಲ್ಲಿ ಬುಧವಾರ ಬೆಳಿಗ್ಗೆ 6.30ರಿಂದ 9.00 ಗಂಟೆವರೆಗೆ ಎರಡು ಗುಂಪುಗಳ ನಡುವೆ ಗುಂಡಿನ ಚಕಮಕಿ ನಡೆದಿದೆ. ಅಪರಿಚಿತ ಸಶಸ್ತ್ರ ಗುಂಪುಗಳು ಇಬ್ಬರು ಕುಕಿ ಗ್ರಾಮಸ್ಥರನ್ನು ಅಪಹರಿಸಿವೆ ಎಂಬ ವರದಿಯ ಬಳಿಕ ಈ ಚಕಮಕಿ ನಡೆದಿದೆ ಎಂದು ಮಾಹಿತಿ ನೀಡಿದರು.