ಇರಾನ್ ಆತ್ಮಹ*ತ್ಯಾ ದೋಣಿ ಬಾಂಬ್ ದಾಳಿ: ಅಮೆರಿಕದ ತೈಲ ಟ್ಯಾಂಕರ್ನಲ್ಲಿದ್ದ ಭಾರತೀಯ ಪ್ರಜೆ ಸಾ*ವು

ಟೆಹರಾನ್: ಅಮೆರಿಕ ಮಾಲಕತ್ವದ ತೈಲ ಟ್ಯಾಂಕರ್ ‘ಸೇಫ್ ಸೀ ವಿಷ್ಣು’ ಮೇಲೆ ಇರಾನ್ ನಡೆಸಿದ ಆತ್ಮಹತ್ಯಾ ದೋಣಿ ಬಾಂಬ್ ದಾಳಿಯಲ್ಲಿ ಓರ್ವ ಭಾರತೀಯ ಪ್ರಜೆ ಮೃತಪಟ್ಟಿರುವ ಘಟನೆ ಇರಾಕ್ ಸಮೀಪ ನಡೆದಿದೆ ಎಂದು ವರದಿಯಾಗಿದೆ.
ಇರಾಕ್ ಸಾಗರ ವ್ಯಾಪ್ತಿಯಲ್ಲಿನ ಖೋರ್ ಅಲ್ ಝುಬೈರ್ ಬಂದರು ಬಳಿ ಬುಧವಾರ ಅಮೆರಿಕ ಮಾಲಕತ್ವದ ಹಾಗೂ ಮಾರ್ಷಲ್ ಐಲ್ಯಾಂಡ್ ಧ್ವಜ ಹೊಂದಿದ್ದ ‘ಸೇಫ್ ಸೀ ವಿಷ್ಣು’ ತೈಲ ಟ್ಯಾಂಕರ್ ಮೇಲೆ ಇರಾನ್ ನ ಆತ್ಮಹತ್ಯಾ ದೋಣಿ ದಾಳಿ ನಡೆದಿದೆ ಎಂದು ಮೂಲಗಳು ತಿಳಿಸಿವೆ.
ಭಾರತೀಯ ಪ್ರಜೆಯು ಈ ದಾಳಿಯಲ್ಲಿ ಮೃತಪಟ್ಟಿದ್ದಾರೆ ಎಂದು ವರದಿಯಾಗಿದ್ದು, ತೈಲ ಟ್ಯಾಂಕರ್ನ ಸಿಬ್ಬಂದಿ ಹಾಗೂ ಪ್ರಯಾಣಿಕರನ್ನು ರಕ್ಷಿಸಿ ಬಾಸ್ರಾಗೆ ಕರೆದೊಯ್ಯಲಾಗಿದೆ ಎಂದು ಹೇಳಲಾಗಿದೆ.
ಈ ದಾಳಿಯಲ್ಲಿ ಭಾರತೀಯ ಪ್ರಜೆಯೊಬ್ಬರು ಮೃತಪಟ್ಟಿರುವುದರಿಂದ ತೈಲ ಟ್ಯಾಂಕರ್ ಕಂಪೆನಿಯು ಆಘಾತಕ್ಕೀಡಾಗಿದೆ ಎಂದು ಹೆಸರೇಳಲು ಇಚ್ಛಿಸದ ‘ಸೇಫ್ ಸೀ’ ಸಂಸ್ಥೆಗೆ ನಿಕಟವಾಗಿರುವ ಮೂಲವೊಂದು ತಿಳಿಸಿದೆ.
ಈ ದಾಳಿಯನ್ನು ಬಲವಾಗಿ ಖಂಡಿಸಬೇಕು ಹಾಗೂ ಮಧ್ಯಪ್ರಾಚ್ಯ ಪ್ರಾಂತ್ಯದಲ್ಲಿ ಉದ್ವಿಗ್ನತೆ ಹೆಚ್ಚಳವಾಗುತ್ತಿರುವುದರಿಂದ, ಈ ಮಾರ್ಗದಲ್ಲಿ ಸಂಚರಿಸುವ ಹಡಗುಗಳ ಸಿಬ್ಬಂದಿಗಳ ಸುರಕ್ಷತೆಯನ್ನು ಖಾತರಿಗೊಳಿಸಬೇಕು ಎಂದು ‘ಸೇಫ್ ಸೀ’ ಅಧಿಕಾರಿಗಳು ಭಾರತ ಸರ್ಕಾರವನ್ನು ಆಗ್ರಹಿಸಿದ್ದಾರೆ.
