ರಸ್ತೆ ಗುಂಡಿ ಮಹಿಳೆಯ ಪಾಲಿಗೆ ವರವಾಯ್ತು! ಕೋಮಾದಲ್ಲಿದ್ದ ರೋಗಿ ಪ್ರಜ್ಞೆಗೆ ಮರಳಿದ ಅಚ್ಚರಿಯ ಘಟನೆ

ಲಕ್ಕೋ: ಕೋಮಾದಲ್ಲಿದ್ದ 50 ವರ್ಷದ ಮಹಿಳೆಯೊಬ್ಬರನ್ನು ಮನೆಗೆ ಆ್ಯಂಬುಲೆನ್ಸ್ ನಲ್ಲಿ ಕರೆದುಕೊಂಡು ಹೋಗುವಾಗ, ರಸ್ತೆ ಗುಂಡಿಗೆ ಬಿದ್ದು ಮುಂದೆ ಸಾಗುವಾಗ ಪ್ರಜ್ಞೆಗೆ ಮರಳಿರುವ ಘಟನೆ ಬರೇಲಿ-ಹರಿದ್ವಾರ ರಾಷ್ಟ್ರೀಯ ಹೆದ್ದಾರಿ ಸಂಖ್ಯೆ 74ರಲ್ಲಿ ನಡೆದಿದೆ.
ಮಿದುಳು ನಿಷ್ಕ್ರಿಯವಾಗಿದೆ ಎಂದು ವೈದ್ಯರಿಂದ ಘೋಷಿಸಲ್ಪಟ್ಟಿದ್ದ ವಿನೀತಾ ಶುಕ್ಲಾ ಎಂಬ ಮಹಿಳೆಯನ್ನು ಬದುಕುಳಿಯುವ ಯಾವುದೇ ಭರವಸೆ ಇಲ್ಲದೆ ಬರೇಲಿ ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿತ್ತು. ಫೆಬ್ರವರಿ 24ರಂದು ಆಕೆಯ ದುಃಖತಪ್ತ ಪತಿ ಕುಲ್ದೀಪ್ ಕುಮಾರ್ ಶುಕ್ಲಾ ಆಕೆಯನ್ನು ಆ್ಯಂಬುಲೆನ್ಸ್ ನಲ್ಲಿ ಮನೆಗೆ ಮರಳಿ ಕರೆದೊಯ್ಯುತ್ತಿದ್ದರು. ಈ ವೇಳೆ ಆ್ಯಂಬುಲೆನ್ಸ್ ರಸ್ತೆ ಗುಂಡಿಯಿರುವ ಹೆದ್ದಾರಿಯಲ್ಲಿ ಸಿಲುಕಿಕೊಂಡಿತು. ಇದರಿಂದ ಆ್ಯಂಬುಲೆನ್ಸ್ ಗುಂಡಿಗೆ ಬಿದ್ದು ಎದ್ದಿತು. ಈ ದಿಢೀರ್ ಬೆಳವಣಿಗೆ ಊಹಿಸಲೂ ಸಾಧ್ಯವಿಲ್ಲದ ಚಮತ್ಕಾರವನ್ನೇ ಮಾಡಿತು.

ಈ ಕುರಿತು ಪ್ರತಿಕ್ರಿಯಿಸಿರುವ ವಿನೀತಾ ಶುಕ್ಲಾರ ಪತಿ ಕುಲ್ದೀಪ್ ಕುಮಾರ್ ಶುಕ್ಯಾ “ಅಂತ್ಯಕ್ರಿಯೆಗೆ ಸಿದ್ಧತೆ ಮಾಡಿಕೊಳ್ಳುವಂತೆ ನಾನು ನನ್ನ ಕುಟುಂಬದ ಸದಸ್ಯರಿಗೆ ತಿಳಿಸಿದ್ದೆ. ಆಕೆ ಉಸಿರಾಡುತ್ತಿರಲಿಲ್ಲ. ಆದರೆ, ಇಳಿಮುಖವಾಗುತ್ತಿರುವ ಹೃದಯ ಬಡಿತ ಮಾತ್ರವಿತ್ತು” ಎಂದು ತಿಳಿಸಿದ್ದಾರೆ.
“ಆ್ಯಂಬುಲೆನ್ಸ್ ಹಫೀಝಗಂಜ್ ಬಳಿ ತಲುಪಿದಾಗ ಹೆದ್ದಾರಿಯ ದೊಡ್ಡ ರಸ್ತೆ ಗುಂಡಿಯಲ್ಲಿ ಸಿಲುಕಿಕೊಂಡಿತು. ಈ ವೇಳೆ ವಾಹನವು ತುಂಬಾ ಒರಟಾಗಿ ಚಲಿಸಿತು” ಎಂದು ಅವರು ಮಂಗಳವಾರ ಹೇಳಿದ್ದಾರೆ.
“ಅದರ ಮುಂದಿನ ಕ್ಷಣವೇ ಪವಾಡ ನಡೆಯಿತು. ನನ್ನ ಪತ್ನಿ ಮತ್ತೆ ಸಹಜವಾಗಿ ಉಸಿರಾಡಲು ಪ್ರಾರಂಭಿಸಿದಳು. ನಾನು ತಕ್ಷಣವೇ ಎಲ್ಲಾ ಅಂತ್ಯಕ್ರಿಯೆ ಸಿದ್ಧತೆಗಳನ್ನು ತಡೆಹಿಡಿಯುವಂತೆ ನನ್ನ ಕುಟುಂಬದ ಸದಸ್ಯರಿಗೆ ತಿಳಿಸಿದೆ” ಎಂದು ಅವರು ತಿಳಿಸಿದ್ದಾರೆ.
ತಕ್ಷಣವೇ ಕುಲ್ದೀಪ್ ಶುಕ್ಲಾ ತಮ್ಮ ಪತ್ನಿಯನ್ನು ಪಿಲೈಟ್ನಲ್ಲಿರುವ ನ್ಯೂರೋಸಿಟಿ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಅಲ್ಲಿ ತುರ್ತು ವೈದ್ಯಕೀಯ ನಿಗಾವಣೆಯಡಿ ಚಿಕಿತ್ಸೆ ನೀಡಿದ ನಂತರ ಸೋಮವಾರ ಆಕೆಯನ್ನು ಮನೆಗೆ ಕರೆತರಲಾಗಿದೆ.
“ಸಾವನ್ನು ಗೆದ್ದಿರುವ ಆಕೆ ಈಗ ಎಚ್ಚರವಾಗಿರುವುದಷ್ಟೇ ಅಲ್ಲ, ನಮ್ಮೊಂದಿಗೆ ಮಾತನಾಡುತ್ತಲೂ ಇದ್ದಾಳೆ” ಎಂದು ಕುಲ್ದೀಪ್ ಕುಮಾರ್ ಶುಕ್ಲಾ ಸಂತಸ ಹಂಚಿಕೊಂಡಿದ್ದಾರೆ.