ಜಮ್ಮುವಿನಲ್ಲಿ ಭೀಕರ ಘಟನೆ: ಪಾಯಿಂಟ್-ಬ್ಲಾಂಕ್ ರೇಂಜ್ನಿಂದ ಗುಂಡು ಹಾರಿಸಲು ಯತ್ನಿಸಿದ ದಾಳಿಕೋರ.

ಜಮ್ಮು: ಜಮ್ಮು ಮತ್ತು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಹಾಗೂ ನ್ಯಾಷನಲ್ ಕಾನ್ಸರೆನ್ಸ್ ಮುಖ್ಯಸ್ಥ ಫಾರೂಕ್ ಅಬ್ದುಲ್ಲಾ ಅವರ ಮೇಲೆ ಮದುವೆ ಸಮಾರಂಭದಲ್ಲಿ ವ್ಯಕ್ತಿಯೊಬ್ಬ ಬಂದೂಕು ತೋರಿಸಿ ಗುಂಡು ಹಾರಿಸಲು ಯತ್ನಿಸಿದ ಘಟನೆ ಜಮ್ಮುವಿನಲ್ಲಿ ನಡೆದಿದೆ. ಅಲ್ಲಿದ್ದ ಭದ್ರತಾ ಸಿಬ್ಬಂದಿ ತಕ್ಷಣವೇ ಆರೋಪಿಯನ್ನು ವಶಕ್ಕೆ ಪಡೆದಿದ್ದು, ದಾಳಿ ವಿಫಲವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಘಟನೆಯ ದೃಶ್ಯಾವಳಿಗಳು ಸಿಸಿಟಿವಿಯಲ್ಲಿ ಸೆರೆಯಾಗಿವೆ.
ಬುಧವಾರ ಸಂಜೆ ಜಮ್ಮುವಿನ ಹೊರವಲಯದಲ್ಲಿರುವ ಗ್ರೇಟರ್ ಕೈಲಾಶ್ ಪ್ರದೇಶದ ಹೋಟೆಲ್ ರಾಯಲ್ ಪಾರ್ಕ್ ನಲ್ಲಿ ನಡೆದ ಮದುವೆ ಸಮಾರಂಭದಲ್ಲಿ ಈ ಘಟನೆ ನಡೆದಿದೆ. ಈ ವೇಳೆ ಮಾಜಿ ಮುಖ್ಯಮಂತ್ರಿ ಫಾರೂಕ್ ಅಬ್ದುಲ್ಲಾ ಹಾಗೂ ಜಮ್ಮು ಮತ್ತು ಕಾಶ್ಮೀರದ ಉಪ ಮುಖ್ಯಮಂತ್ರಿ ಸುರೀಂದರ್ ಚೌಧರಿ ಸಮಾರಂಭದಲ್ಲಿ ಹಾಜರಿದ್ದರು.
ಸ್ಥಳದ ಸಿಸಿಟಿವಿ ದೃಶ್ಯಾವಳಿಯಲ್ಲಿ ಆರೋಪಿಯು ಹಿಂದಿನಿಂದ ಫಾರೂಕ್ ಅಬ್ದುಲ್ಲಾ ಅವರತ್ತ ಬಂದೂಕು ತೋರಿಸಿ ಗುಂಡು ಹಾರಿಸಿರುವುದು ಕಂಡುಬಂದಿದೆ. ಆದರೆ ಅಲ್ಲಿದ್ದ ಭದ್ರತಾ ಸಿಬ್ಬಂದಿ ತಕ್ಷಣವೇ ದಾಳಿಕೋರನನ್ನು ಹಿಡಿದು ನಂತರ ಪೊಲೀಸರಿಗೆ ಒಪ್ಪಿಸಿದ್ದಾರೆ.
ಈ ಪ್ರಕರಣದಲ್ಲಿ ಯಾವುದೇ ಭಯೋತ್ಪಾದಕ ಕೃತ್ಯವಿಲ್ಲ ಎಂದು ಪೊಲೀಸರು ಸ್ಪಷ್ಟಪಡಿಸಿದ್ದಾರೆ. ಜಮ್ಮುವಿನ ಹೊರವಲಯದಲ್ಲಿರುವ ಐಷಾರಾಮಿ ಗ್ರೇಟರ್ ಕೈಲಾಶ್ ಪ್ರದೇಶದ ಹೋಟೆಲ್ ರಾಯಲ್ ಪಾರ್ಕ್ ನಲ್ಲಿ ಈ ಘಟನೆ ನಡೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಆರೋಪಿಯನ್ನು ಕಮಲ್ ಸಿಂಗ್ ಜಮ್ಹಾಲ್ ಎಂದು ಗುರುತಿಸಲಾಗಿದ್ದು, ಆತ ಜಮ್ಮುವಿನ ನಿವಾಸಿಯಾಗಿದ್ದು ಕೆಲವು ಅಂಗಡಿಗಳನ್ನು ಹೊಂದಿದ್ದಾನೆ ಎಂದು ತಿಳಿದುಬಂದಿದೆ.
ಆರೋಪಿ ಕಮಲ್ ಸಿಂಗ್ ಜಮ್ಹಾಲ್ (60) ಮದ್ಯಪಾನ ಮಾಡಿದ ಸ್ಥಿತಿಯಲ್ಲಿ ಕಂಡುಬಂದಿದ್ದಾನೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಘಟನೆಯಲ್ಲಿ ಫಾರೂಕ್ ಅಬ್ದುಲ್ಲಾ ಅವರಿಗೆ ಯಾವುದೇ ಗಾಯಗಳಾಗಿಲ್ಲ. ಅವರು ಪಾರಾಗಿದ್ದು, ಅವರ ಪಕ್ಷದ ಸಹೋದ್ಯೋಗಿ ಹಾಗೂ ಉಪ ಮುಖ್ಯಮಂತ್ರಿ ಸುರೀಂದರ್ ಚೌಧರಿ ಅವರಿಗೆ ಸಣ್ಣಪುಟ್ಟ ಗಾಯಗಳಾಗಿವೆ ಎಂದು ವರದಿಯಾಗಿದೆ. ಆರೋಪಿಯನ್ನು ಪೊಲೀಸರು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.

ವಿಚಾರಣೆಯ ವೇಳೆ ಜಮ್ಹಾಲ್ ಕಳೆದ 20 ವರ್ಷಗಳಿಂದ ಫಾರೂಕ್ ಅಬ್ದುಲ್ಲಾ ಅವರನ್ನು ಕೊಲ್ಲಲು ಪ್ರಯತ್ನಿಸುತ್ತಿದ್ದೇನೆ ಎಂದು ಪೊಲೀಸರಿಗೆ ಹೇಳಿದ್ದು, ಈ ಪ್ರಯತ್ನವನ್ನು ವೈಯಕ್ತಿಕ ಕಾರ್ಯಸೂಚಿ ಎಂದು ಹೇಳಿದ್ದಾನೆ. ದಾಳಿಗೆ ಬಳಸಿದ ಬಂದೂಕು ತನ್ನ ವೈಯಕ್ತಿಕ ಪರವಾನಗಿ ಪಡೆದ ಪಿಸ್ತೂಲ್ ಎಂದು ಆತ ಹೇಳಿದ್ದಾನೆ.
ಘಟನೆಯಲ್ಲಿ ಬಳಸಲಾದ ಪಿಸ್ತೂಲ್ ಅನ್ನು ಆರೋಪಿಯ ಬಳಿಯಿಂದ ವಶಪಡಿಸಿಕೊಳ್ಳಲಾಗಿದೆ ಎಂದು ಹೇಳಿಕೆಯಲ್ಲಿ ಪೊಲೀಸರು ತಿಳಿಸಿದ್ದಾರೆ ಎಂದು ಪಿಟಿಐ ಸುದ್ದಿ ವರದಿ ಮಾಡಿದೆ.
ಈ ಘಟನೆ ಕುರಿತು ಪ್ರತಿಕ್ರಿಯಿಸಿರುವ ಜಮ್ಮು ಮತ್ತು ಕಾಶ್ಮೀರ ಮುಖ್ಯಮಂತ್ರಿ ಉಮರ್ ಅಬ್ದುಲ್ಲಾ ತಮ್ಮ ತಂದೆಯ ಮೇಲೆ ನಡೆದ ಹತ್ಯೆ ಪ್ರಯತ್ನವನ್ನು ಅವರ Z+ ಭದ್ರತಾ ಸಿಬ್ಬಂದಿಯ ರಕ್ಷಣಾ ತಂಡ ತಡೆದಿದೆ ಎಂದು ಹೇಳಿದ್ದಾರೆ.
“ಅಲ್ಲಾಹನು ದಯಾಮಯಿ. ನನ್ನ ತಂದೆ ತುಂಬಾ ಹತ್ತಿರದಿಂದ ಅಪಾಯದಿಂದ ಪಾರಾಗಿದ್ದಾರೆ. ಈ ಸಮಯದಲ್ಲಿನ ವಿವರಗಳು ಸ್ಪಷ್ಟವಾಗಿಲ್ಲ. ಆದರೆ ಲೋಡ್ ಮಾಡಿದ ಪಿಸ್ತೂಲ್ ಹೊಂದಿದ್ದ ವ್ಯಕ್ತಿಯೊಬ್ಬನು ಪಾಯಿಂಟ್ ಬ್ಲಾಂಕ್ ವ್ಯಾಪ್ತಿಯಲ್ಲಿ ಬಂದು ಗುಂಡು ಹಾರಿಸಲು ಯತ್ನಿಸಿದ. ನಿಕಟ ರಕ್ಷಣಾ ತಂಡ ತಕ್ಷಣವೇ ಕ್ರಮ ಕೈಗೊಂಡು ಹತ್ಯೆ ಪ್ರಯತ್ನ ವಿಫಲವಾಗಿದೆ .Z+ NSG ರಕ್ಷಣೆ ಹೊಂದಿರುವ ಮಾಜಿ ಮುಖ್ಯಮಂತ್ರಿಯ ಹತ್ತಿರ ಯಾರಾದರೂ ಹೇಗೆ ಬರಲು ಸಾಧ್ಯವಾಯಿತು ಎಂಬುದನ್ನು ಒಳಗೊಂಡಂತೆ ಹಲವು ಪ್ರಶ್ನೆಗಳು ಉದ್ಭವಿಸಿವೆ,” ಎಂದು ಅವರು X ನಲ್ಲಿ ಬರೆದಿದ್ದಾರೆ.
ಈ ಘಟನೆಯನ್ನು ಉಪ ಮುಖ್ಯಮಂತ್ರಿ ಸುರೀಂದರ್ ಚೌಧರಿ “ಗಂಭೀರ ಭದ್ರತಾ ಲೋಪ” ಎಂದು ಬಣ್ಣಿಸಿದ್ದು, ಪ್ರಕರಣದ ಕುರಿತು ಸಮಗ್ರ ತನಿಖೆ ನಡೆಯುತ್ತಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
“ಮಾಜಿ ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿ ಹಾಗೂ ಇತರ ಗಣ್ಯರು ಸಮಾರಂಭದಲ್ಲಿ ಹಾಜರಿದ್ದಾಗ, ಒಬ್ಬ ವ್ಯಕ್ತಿ ಬಂದೂಕು ಹಿಡಿದು ಒಳಗೆ ಪ್ರವೇಶಿಸಬಹುದಾದರೆ ಭದ್ರತಾ ವ್ಯವಸ್ಥೆಗಳು ಹೇಗಿದ್ದವು ಎಂಬುದು ದೊಡ್ಡ ಪ್ರಶ್ನೆಯಾಗಿದೆ,” ಎಂದು ಅವರು ಪಿಟಿಐಗೆ ತಿಳಿಸಿದ್ದಾರೆ.