ಗಗನಕ್ಕೇರಿದ ಕಚ್ಚಾ ತೈಲ ಬೆಲೆ: ಬ್ಯಾರೆಲ್ ಬೆಲೆ 115 ಡಾಲರ್ ಗಡಿ ದಾಟಿದ ತೈಲ

ಟೆಹ್ರಾನ್: ಮಧ್ಯಪ್ರಾಚ್ಯದಲ್ಲಿ ತೀವ್ರಗೊಂಡಿರುವ ಇರಾನ್ ಯುದ್ಧದ ಪರಿಣಾಮ ಜಾಗತಿಕ ಕಚ್ಚಾ ತೈಲ ಮಾರುಕಟ್ಟೆಯಲ್ಲಿ ಅಸ್ಥಿರತೆ ಹೆಚ್ಚಿದ್ದು, ತೈಲದ ಬೆಲೆಗಳು ಬ್ಯಾರೆಲ್ ಗೆ 115 ಡಾಲರ್ ಗಿಂತ ಹೆಚ್ಚಿನ ಬೆಲೆಗೆ ತಲುಪಿವೆ. ಉತ್ಪಾದನೆ ಹಾಗೂ ಸಾಗಣೆ ವ್ಯವಸ್ಥೆಗಳಿಗೆ ಎದುರಾಗುತ್ತಿರುವ ಅಡಚಣೆಗಳಿಂದ ಆರ್ಥಿಕ ಮಾರುಕಟ್ಟೆಗಳಲ್ಲಿಯೂ ಆತಂಕ ವ್ಯಕ್ತವಾಗಿದೆ.
ಸೋಮವಾರ ಆರಂಭಿಕ ವಹಿವಾಟಿನಲ್ಲಿ ಸ್ವಲ್ಪ ಇಳಿಕೆ ಕಂಡ ಬಳಿಕ ತೈಲದ ಬೆಲೆಗಳು ಮತ್ತೆ ಏರಿಕೆ ಕಂಡು ಬ್ಯಾರೆಲ್ ಗೆ ಸುಮಾರು 120 ಡಾಲರ್ ಮಟ್ಟಕ್ಕೆ ತಲುಪಿದವು. ಮಧ್ಯಪ್ರಾಚ್ಯದ ತೈಲ ಉತ್ಪಾದನಾ ಪ್ರದೇಶಗಳು ಮತ್ತು ಸಾಗಣೆ ಮಾರ್ಗಗಳಿಗೆ ಯುದ್ಧದಿಂದ ಉಂಟಾದ ಅಪಾಯವು ಈ ಏರಿಕೆಗೆ ಕಾರಣವಾಗಿದೆ.

ಅಂತರರಾಷ್ಟ್ರೀಯ ಮಾನದಂಡವಾದ ಬ್ರೆಂಟ್ ಕಚ್ಚಾ ತೈಲದ ಬೆಲೆ ಒಂದು ಹಂತದಲ್ಲಿ ಬ್ಯಾರೆಲ್ ಗೆ 119.50 ಡಾಲರ್ ಗೆ ತಲುಪಿದರೂ ನಂತರ ವಹಿವಾಟಿನಲ್ಲಿ 112.98 ಡಾಲರ್ ಮಟ್ಟದಲ್ಲಿ ನಿಂತಿತು. ಅಮೆರಿಕದಲ್ಲಿ ಉತ್ಪಾದನೆಯಾಗುವ ಹಗುರವಾದ ‘ವೆಸ್ಟ್ ಟೆಕ್ಸಾಸ್ ಇಂಟರ್ಮೀಡಿಯೇಟ್ ಕಚ್ಚಾ ತೈಲದ ಬೆಲೆ ಕೂಡ ಪ್ರತಿ ಬ್ಯಾರೆಲ್ ಗೆ 119.48 ಡಾಲರ್ ಗೆ ಏರಿದ ಬಳಿಕ ಮತ್ತೆ 110.17 ಡಾಲರ್ ಗೆ ಇಳಿಯಿತು.
ಸ್ವತಂತ್ರ ಸಂಶೋಧನಾ ಸಂಸ್ಥೆ ರಿಸ್ಟಾಡ್ ಎನರ್ಜಿ ಪ್ರಕಾರ, ಜಗತ್ತಿನ ಒಟ್ಟು ತೈಲ ಪೂರೈಕೆಯ ಸುಮಾರು 20 ಶೇಕಡಾ ಭಾಗವಾದ ಅಂದಾಜು 15 ಮಿಲಿಯನ್ ಬ್ಯಾರೆಲ್ ಕಚ್ಚಾ ತೈಲ ಪ್ರತಿದಿನ ಹಾರ್ಮುಜ್ ಜಲಸಂಧಿಯ ಮೂಲಕ ಸಾಗಿಸಲಾಗುತ್ತದೆ.
ಆದರೆ ಇರಾನ್ ನ ಕ್ಷಿಪಣಿ ಮತ್ತು ಡೋನ್ ದಾಳಿಯ ಭೀತಿ ಹಿನ್ನೆಲೆಯಲ್ಲಿ ಸೌದಿ ಅರೇಬಿಯಾ, ಕುವೈತ್, ಇರಾಕ್, ಖತರ್, ಬದ್ರೇನ್, ಯುನೈಟೆಡ್ ಅರಬ್ ಎಮಿರೇಟ್ಸ್ ಹಾಗೂ ಇರಾನ್ ದೇಶಗಳಿಂದ ತೈಲ ಮತ್ತು ಅನಿಲ ಸಾಗಿಸುವ ಟ್ಯಾಂಕರ್ ಗಳು ಇರಾನ್ನ ಉತ್ತರ ಗಡಿಯ ಸಮೀಪವಿರುವ ಹಾರ್ಮುಜ್ ಜಲಸಂಧಿಯ ಮೂಲಕ ಸಂಚಾರ ಮಾಡುವುದನ್ನು ಬಹುತೇಕ ನಿಲ್ಲಿಸಿವೆ.
ಕಚ್ಚಾ ತೈಲ ರಫ್ತು ಸಾಮರ್ಥ್ಯ ಕುಂಠಿತಗೊಂಡ ಹಿನ್ನೆಲೆಯಲ್ಲಿ ಇರಾಕ್, ಕುವೈತ್ ಮತ್ತು ಯುನೈಟೆಡ್ ಅರಬ್ ಎಮಿರೇಟ್ಸ್ ತಮ್ಮ ಸಂಗ್ರಹಣಾ ಟ್ಯಾಂಕ್ ಗಳು ತುಂಬಿಕೊಳ್ಳುತ್ತಿರುವ ಕಾರಣ ತೈಲ ಉತ್ಪಾದನೆಯನ್ನು ಕಡಿತಗೊಳಿಸಿವೆ.
ಯುದ್ಧ ಆರಂಭವಾದ ಬಳಿಕ ಇರಾನ್, ಇಸ್ರೇಲ್ ಮತ್ತು ಅಮೆರಿಕ ಪರಸ್ಪರ ತೈಲ ಮತ್ತು ಅನಿಲ ಸೌಲಭ್ಯಗಳ ಮೇಲೆ ದಾಳಿ ನಡೆಸಿರುವುದು ಜಾಗತಿಕ ಪೂರೈಕೆಯ ಕುರಿತ ಕಳವಳವನ್ನು ಮತ್ತಷ್ಟು ಹೆಚ್ಚಿಸಿದೆ. ಈ ಬೆಳವಣಿಗೆಗಳು ಮುಂದಿನ ದಿನಗಳಲ್ಲಿ ತೈಲದ ಬೆಲೆ ಮತ್ತು ಜಾಗತಿಕ ಆರ್ಥಿಕತೆಯ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ.