ಛತ್ರಪತಿ ಹ*ತ್ಯೆ ಪ್ರಕರಣ: ಗುರ್ಮೀತ್ ರಾಮ್ ರಹೀಮ್ ಸಿಂಗ್ ಖುಲಾಸೆ; ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್ ತೀರ್ಪು

ಚಂಡೀಗಢ: 2002ರಲ್ಲಿ ಸಿರ್ಸಾದ ಪತ್ರಕರ್ತ ರಾಮ್ ಚಂದರ್ ಛತ್ರಪತಿ ಅವರ ಹತ್ಯೆ ಪ್ರಕರಣದಲ್ಲಿ ಡೇರಾ ಸಚ್ಚಾ ಸೌದಾ ಮುಖ್ಯಸ್ಥ ಗುರ್ಮೀತ್ ಸಿಂಗ್ ಗೆ ವಿಧಿಸಲಾಗಿದ್ದ ಜೀವಾವಧಿ ಶಿಕ್ಷೆಯನ್ನು ಪಂಜಾಬ್ ಮತ್ತು ಹರ್ಯಾಣ ಹೈಕೋರ್ಟ್ ಶನಿವಾರ ರದ್ದುಗೊಳಿಸಿ, ಆರೋಪಗಳಿಂದ ಖುಲಾಸೆಗೊಳಿಸಿದೆ.
ಪಂಚಕುಲದ ಸಿಬಿಐ ವಿಶೇಷ ನ್ಯಾಯಾಲಯವು 2019ರಲ್ಲಿ ಗುರ್ಮೀತ್ ಸಿಂಗ್ ದೋಷಿ ಎಂದು ಘೋಷಿಸಿ ಜೀವಾವಧಿ ಶಿಕ್ಷೆ ವಿಧಿಸಿತ್ತು. ಆ ತೀರ್ಪನ್ನು ಪ್ರಶ್ನಿಸಿ ಸಲ್ಲಿಸಲಾದ ಮೇಲ್ಮನವಿಗಳನ್ನು ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಶೀಲ್ ನಾಗು ಹಾಗೂ ನ್ಯಾಯಮೂರ್ತಿ ವಿಕ್ರಮ್ ಅಗರ್ವಾಲ್ ಅವರ ವಿಭಾಗೀಯ ಪೀಠವು ಈ ತೀರ್ಪು ನೀಡಿದೆ.

ನ್ಯಾಯಾಲಯವು ಗುರ್ಮೀತ್ ಸಿಂಗ್ ಶಿಕ್ಷೆಯನ್ನು ರದ್ದುಗೊಳಿಸಿ, ಆರೋಪಗಳಿಂದ ಮುಕ್ತಗೊಳಿಸಿದೆ. ಆದರೆ ಪ್ರಕರಣದ ಇತರ ಇಬ್ಬರು ಆರೋಪಿಗಳು ಸಲ್ಲಿಸಿದ್ದ ಮೇಲ್ಮನವಿಗಳನ್ನು ವಜಾಗೊಳಿಸಿ ಅವರ ವಿರುದ್ಧದ ಶಿಕ್ಷೆಯನ್ನು ಯಥಾಸ್ಥಿತಿಯಲ್ಲಿ ಮುಂದುವರಿಸಿದೆ. ಶಿಕ್ಷೆಯನ್ನು ರದ್ದುಗೊಳಿಸಿದ ಕಾರಣಗಳನ್ನು ವಿವರಿಸುವ ವಿವರವಾದ ತೀರ್ಪು ಬಳಿಕ ಪ್ರಕಟವಾಗುವ ನಿರೀಕ್ಷೆಯಿದೆ.
ಸಿರ್ಸಾದಲ್ಲಿ ಸ್ಥಳೀಯ ಪತ್ರಿಕೆ ನಡೆಸುತ್ತಿದ್ದ ರಾಮ್ ಚಂದರ್ ಛತ್ರಪತಿ ಅವರನ್ನು 2002ರ ಅಕ್ಟೋಬರ್‌ನಲ್ಲಿ ಅವರ ಮನೆಯ ಹೊರಗೆ ಗುಂಡಿಕ್ಕಲಾಗಿತ್ತು. ಗಂಭೀರವಾಗಿ ಗಾಯಗೊಂಡ ಅವರು ನಂತರ ಸಾವನ್ನಪ್ಪಿದ್ದರು. ಡೇರಾ ಸಚ್ಚಾ ಸೌದಾದೊಳಗಿನ ಲೈಂಗಿಕ ಶೋಷಣೆ ಆರೋಪಗಳಿಗೆ ಸಂಬಂಧಿಸಿದ ವರದಿಗಳನ್ನು ಛತ್ರಪತಿ ಪ್ರಕಟಿಸಿದ್ದ ಹಿನ್ನೆಲೆಯಲ್ಲಿ ಈ ಹತ್ಯೆ ದೇಶದಾದ್ಯಂತ ಗಮನ ಸೆಳೆದಿತ್ತು.
ಆರಂಭಿಕ ತನಿಖೆಯ ಬಳಿಕ ಪ್ರಕರಣವನ್ನು ಕೇಂದ್ರ ತನಿಖಾ ದಳ ಸಿಬಿಐಗೆ ವರ್ಗಾಯಿಸಲಾಯಿತು. ತನಿಖೆ ನಡೆಸಿದ ಸಿಬಿಐ, ಗುರ್ಮೀತ್ ಸಿಂಗ್ ಸೇರಿದಂತೆ ಇತರರ ವಿರುದ್ಧ ಆರೋಪಪಟ್ಟಿ ಸಲ್ಲಿಸಿತು.
ಜನವರಿ 2019ರಲ್ಲಿ ಪಂಚಕುಲದ ವಿಶೇಷ ಸಿಬಿಐ ನ್ಯಾಯಾಲಯವು ರಾಮ್ ರಹೀಮ್ ಹಾಗೂ ಸಹ ಆರೋಪಿಗಳನ್ನು ಪತ್ರಕರ್ತನ ಕೊಲೆ ಸಂಚು ಪ್ರಕರಣದಲ್ಲಿ ತಪ್ಪಿತಸ್ಥರೆಂದು ಘೋಷಿಸಿ ಜೀವಾವಧಿ ಶಿಕ್ಷೆ ವಿಧಿಸಿತು.
ಅತ್ಯಾಚಾರ ಪ್ರಕರಣಗಳು ಸೇರಿದಂತೆ ಇತರ ಅಪರಾಧಗಳಿಗೆ ಸಂಬಂಧಿಸಿದಂತೆ ಗುರ್ಮೀತ್ ಸಿಂಗ್ ಇನ್ನೂ ಜೈಲಿನಲ್ಲಿದ್ದಾನೆ. ಪತ್ರಕರ್ತನ ಹತ್ಯೆ ಪ್ರಕರಣದಲ್ಲಿ ಹೈಕೋರ್ಟ್ ನೀಡಿರುವ ಈ ತೀರ್ಪು ದೀರ್ಘಕಾಲದಿಂದ ನಡೆಯುತ್ತಿದ್ದ ಪ್ರಕರಣದಲ್ಲಿ ಮಹತ್ವದ ಬೆಳವಣಿಗೆಯಾಗಿ ಪರಿಗಣಿಸಲಾಗಿದೆ.
‘ದೊಡ್ಡ ಹಿನ್ನಡೆ; ಸುಪ್ರೀಂ ಕೋರ್ಟ್‌ಗೆ ಹೋಗುತ್ತೇವೆ’
ತಮ್ಮ ತಂದೆಯ ಹತ್ಯೆ ಪ್ರಕರಣದಲ್ಲಿ ಗುರ್ಮೀತ್ ಸಿಂಗ್ ನನ್ನು ಖುಲಾಸೆಗೊಳಿಸಿದ ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್ ತೀರ್ಪು ‘ದೊಡ್ಡ ಹಿನ್ನಡೆ’ ಎಂದು ಪತ್ರಕರ್ತ ರಾಮ್ ಚಂದರ್ ಛತ್ರಪತಿ ಅವರ ಪುತ್ರ ಅನ್ಸುಲ್ ಛತ್ರಪತಿ ಹೇಳಿದ್ದಾರೆ.
“ನಾವು ಸುಪ್ರೀಂ ಕೋರ್ಟ್‌ಗೆ ಹೋಗುತ್ತೇವೆ. ನಮಗೆ ಬೇರೆ ಯಾವುದೇ ಪರ್ಯಾಯವಿಲ್ಲ. ನಮ್ಮ ಕಾನೂನು ಹೋರಾಟ ಮುಂದುವರಿಯುತ್ತದೆ. ಇಲ್ಲಿಯವರೆಗೆ ನಾವು ನಡೆದು ಬಂದ ಹಾದಿಯನ್ನು ಮುಂದುವರಿಸುತ್ತೇವೆ. ಉಳಿದಿರುವ ಎಲ್ಲಾ ಕಾನೂನು ಪರಿಹಾರಗಳನ್ನು ನಾವು ಅನ್ವೇಷಿಸುತ್ತೇವೆ. ಈ ತೀರ್ಪಿನ ವಿರುದ್ಧ ನಾವು ಸುಪ್ರೀಂ ಕೋರ್ಟ್‌ಗೆ ಹೋಗುತ್ತೇವೆ,” ಎಂದು 46 ವರ್ಷದ ಅನ್ಯುಲ್ ಹೇಳಿದರು.
“ಇತರ ಆರೋಪಿಗಳ ಶಿಕ್ಷೆಯನ್ನು ಹೈಕೋರ್ಟ್ ಎತ್ತಿಹಿಡಿದಿದೆ ಎಂದು ನಮಗೆ ತಿಳಿದುಬಂದಿದೆ. ಆದರೆ ನಮ್ಮ ಹೋರಾಟ ಡೇರಾ ಸಚ್ಚಾ ಸೌದಾ ಮುಖ್ಯಸ್ಥ ಗುರ್ಮೀತ್ ಸಿಂಗ್ ವಿರುದ್ಧವಾಗಿತ್ತು. ಪ್ರಮುಖ ಆರೋಪಿಯನ್ನು ಖುಲಾಸೆಗೊಳಿಸಿರುವುದು ನಮಗೆ ದೊಡ್ಡ ಹಿನ್ನಡೆಯಾಗಿದೆ. ಶೂಟರ್ ಗಳು ಅಥವಾ ಡೇರಾ ವ್ಯವಸ್ಥಾಪಕರಿಗೆ ನನ್ನ ತಂದೆಯೊಂದಿಗೆ ಯಾವುದೇ ಸಂಬಂಧ ಇರಲಿಲ್ಲ. ಆ ಸಮಯದಲ್ಲಿ ನನ್ನ ತಂದೆಯಿಂದ ಬಹಿರಂಗಗೊಂಡಿದ್ದು ಗುರ್ಮೀತ್ ಸಿಂಗ್ ವಿರುದ್ಧದ ಆರೋಪಗಳು,” ಎಂದು ಅವರು ಹೇಳಿದರು.
“ಕಳೆದ ಸುಮಾರು 25 ವರ್ಷಗಳಿಂದ ನಾನು ಈ ಕಾನೂನು ಹೋರಾಟ ನಡೆಸುತ್ತಿದ್ದೇನೆ. ಅಷ್ಟು ಪ್ರಭಾವಿ ವ್ಯಕ್ತಿಯನ್ನು ಎದುರಿಸುವುದು ಸುಲಭವಲ್ಲ. ವಿಚಾರಣೆ ಆರಂಭವಾಗುವ ಮೊದಲು ಕೂಡ ನಾವು ಹಲವು ಹಿನ್ನಡೆಗಳನ್ನು ಎದುರಿಸಿದ್ದೆವು. ವಿಚಾರಣಾ ನ್ಯಾಯಾಲಯವು ಆರೋಪಿಯನ್ನು ದೋಷಿ ಎಂದು ಘೋಷಿಸಿದಾಗ ನಮಗೆ ನ್ಯಾಯ ಸಿಕ್ಕಂತಾಯಿತು. ಆದರೆ ಹೈಕೋರ್ಟ್ ತೀರ್ಪಿನ ಬಳಿಕವೂ ನಮ್ಮ ಕಾನೂನು ಹೋರಾಟ ಮುಂದುವರಿಯುತ್ತದೆ,’ ಎಂದು ಅನ್ಯುಲ್ ಹೇಳಿದರು.