ರಷ್ಯಾದಿಂದ ತೈಲ ಖರೀದಿಸಿ ಎಂದ ಅಮೆರಿಕ; ಭಾರತಕ್ಕೆ ನೀಡಿದ ಈ ಸಲಹೆಯ ಹಿಂದಿನ ಅಸಲಿ ಗುಟ್ಟು ಬಿಚ್ಚಿಟ್ಟ ಕ್ರಿಸ್ ರೈಟ್

ವಾಷಿಂಗ್ಟನ್: ಭಾರತವು (India) ರಷ್ಯಾದ ಕಚ್ಚಾ ತೈಲವನ್ನು (Crude oil) ಖರೀದಿಸಲು ಅನುಮತಿ ನೀಡಿರುವುದರ
ಕಾರಣ ಏನೆಂಬುದನ್ನು ಅಮೆರಿಕದ ಇಂಧನ ಸಚಿವ ಕ್ರಿಸ್ ರೈಟ್ (Chris Wright) ಬಹಿರಂಗಪಡಿಸಿದ್ದಾರೆ. ಸಂದರ್ಶನವೊಂದರಲ್ಲಿ ಮಾತನಾಡಿದ ಅವರು, ಇರಾನ್‌ನೊಂದಿಗಿನ ಸಂಘರ್ಷದಿಂದಾಗಿ ಜಾಗತಿಕ ಕಚ್ಚಾ ಮಾರುಕಟ್ಟೆಯ ಮೇಲೆ ಒತ್ತಡದ ಸನ್ನಿವೇಶ ಸೃಷ್ಟಿಯಾಗಿದೆ. ತೈಲ ಮಾರುಕಟ್ಟೆಯ ಮೇಲಿನ ಈ ಒತ್ತಡವನ್ನು ಕಡಿಮೆ ಮಾಡುವ ದೃಷ್ಟಿಯಿಂದ ರಷ್ಯಾದ ತೈಲ ಖರೀದಿಸುವಂತೆ ಭಾರತಕ್ಕೆ ಮನವಿ ಮಾಡಲಾಗಿದೆ ಎಂದು ಹೇಳಿದ್ದಾರೆ.
ಭಾರತವು ರಷ್ಯಾದಿಂದ ಸಂಗ್ರಹಿತ ತೈಲವನ್ನು ಖರೀದಿಸಿ ತನ್ನ ರಿಫೈನರಿಗಳಲ್ಲಿ ಬಳಸಿದರೆ ಜಾಗತಿಕ ತೈಲ ಮಾರುಕಟ್ಟೆಯ ಮೇಲೆ ಇರುವ ಒತ್ತಡ ಕಡಿಮೆಯಾಗುತ್ತದೆ. ಇದರಿಂದ ಇತರ ದೇಶಗಳ ರಿಫೈನರಿಗಳ ಮೇಲಿನ ಒತ್ತಡವೂ ತಗ್ಗಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ತೈಲದ ಬೆಲೆ ಸ್ಥಿರವಾಗಲು ಸಹಾಯವಾಗಬಹುದು ಎಂದು ಕ್ರಿಸ್ ರೈಟ್ ಹೇಳಿದ್ದಾರೆ.
ಅಮೆರಿಕದ ಪ್ರಕಾರ, ಭಾರತ ಹೆಚ್ಚು ಪ್ರಮಾಣದಲ್ಲಿ ರಷ್ಯಾ ತೈಲವನ್ನು ಖರೀದಿಸಿದರೆ ಅದು ಭಾರತೀಯ ರಿಫೈನರಿಗಳಲ್ಲಿ ಸಂಸ್ಕರಣೆಗೆ ಹೋಗುತ್ತದೆ. ಇದರಿಂದ ಜಾಗತಿಕ ಮಾರುಕಟ್ಟೆಯಲ್ಲಿ ಇತರ ರಿಫೈನರಿಗಳಿಗೆ ಲಭ್ಯವಾಗುವ ತೈಲದ ಒತ್ತಡ ಕಡಿಮೆಯಾಗುತ್ತದೆ ಮತ್ತು ಬೆಲೆ ಏರಿಕೆಯನ್ನು ನಿಯಂತ್ರಿಸಲು ಸಹಾಯವಾಗುತ್ತದೆ. ಹೀಗಾಗಿ ನಮ್ಮ ಸ್ನೇಹಿತ ರಾಷ್ಟ್ರವಾದ ಭಾರತದ ಬಳಿ ರಷ್ಯಾದ ತೈಲ ಖರೀದಿಸುವಂತೆ ಕೇಳಿಕೊಂಡಿದ್ದೇವೆ ಎಂದು ಅಮೆರಿಕ ಹೇಳಿದೆ.


ರಷ್ಯಾದ ತೈಲ ಖರೀದಿಸಲು 30 ದಿನಗಳ ಕಾಲ ಭಾರತಕ್ಕೆ ಅನುವು ಮಾಡಿಕೊಡಲಾಗಿದೆ ಎಂದು ಅಮೆರಿಕ ಮಾರ್ಚ್ 6 ರಂದು ತಿಳಿಸಿತ್ತು. ಆದಾಗ್ಯೂ, ಅಮೆರಿಕ ಅಧಿಕೃತ ಹೇಳಿಕೆ ನೀಡುವುದಕ್ಕೂ ಮುನ್ನವೇ ರಷ್ಯಾದಿಂದ ಕಚ್ಚಾ ತೈಲ ಖರೀದಿ ಬಗ್ಗೆ ಭಾರತ ನಿರ್ಧಾರ ಪ್ರಕಟಿಸಿತ್ತೆಂಬುದು ಗಮನಾರ್ಹ. ಮಧ್ಯಪ್ರಾಚ್ಯ ಬಿಕ್ಕಟ್ಟು ಹಾಗೂ ಹಾರ್ಮುಜ್ ಜಲಸಂಧಿ ಬಂದ್ ಬೆನ್ನಲ್ಲೇ ಭಾರತಕ್ಕೆ ರಷ್ಯಾ ಹೆಚ್ಚುವರಿ 9.5 ಮಿಲಿಯನ್ ಬ್ಯಾರೆಲ್ ಕಚ್ಚಾ ತೈಲ ಪೂರೈಸಲು ಸಿದ್ಧವಾಗಿದೆ ಎಂದು ಮಾರ್ಚ್ 4 ರಂದು ವರದಿಯಾಗಿತ್ತು. 9.5 ಮಿಲಿಯನ್ ಬ್ಯಾರೆಲ್ ರಷ್ಯನ್ ಕಚ್ಚಾ ತೈಲ ಈಗಾಗಲೇ ಭಾರತೀಯ ಸಮುದ್ರ ಗಡಿಯ ಸಮೀಪದಲ್ಲಿರುವ ಹಡಗುಗಳಲ್ಲಿ ಲಭ್ಯವಿದ್ದು, ಇದು ಕೆಲವು ವಾರಗಳಲ್ಲಿ ಭಾರತಕ್ಕೆ ತಲುಪುವ ಸಾಧ್ಯತೆ ಇದೆ ಎಂದೂ ವರದಿಯಾಗಿತ್ತು.
ಈ ಎಲ್ಲ ಬೆಳವಣಿಗೆಗಳ ಬೆನ್ನಲ್ಲೇ ಮಾರ್ಚ್ 6 ರಂದು, ಭಾರತಕ್ಕೆ ರಷ್ಯಾದ ಕಚ್ಚಾ ತೈಲ ಖರೀದಿಗೆ ಅನುಮತಿ ನೀಡಿರುವುದಾಗಿ ಅಮೆರಿಕ ಹೇಳಿತ್ತು. ಇದು ಭಾರತದಲ್ಲಿ ತೀವ್ರ ರಾಜಕೀಯ ಚರ್ಚೆಗೂ ಗ್ರಾಸವಾಗಿತ್ತು. ಅಮೆರಿಕವು ಭಾರತವನ್ನು ತನಗೆ ಬೇಕಾದಂತೆ ನಡೆಸಿಕೊಳ್ಳುತ್ತಿದೆ ಎಂಬ ಟೀಕೆಗಳೂ ವ್ಯಕ್ತವಾಗಿದ್ದವು. ಆದರೀಗ, ರಷ್ಯಾ ತೈಲ ಖರೀದಿಸುವಂತೆ ಸ್ನೇಹಿತ ರಾಷ್ಟ್ರವಾದ ಭಾರತಕ್ಕೆ ಮನವಿ ಮಾಡಿದ್ದೇವೆ ಎಂದು ಅಮೆರಿಕದ ಇಂಧನ ಸಚಿವ ಕ್ರಿಸ್ ರೈಟ್ ಹೇಳಿದ್ದಾರೆ. ಅಲ್ಲದೆ, ಈ ಮನವಿಯ ಹಿಂದಿನ ಕಾರಣವನ್ನೂ ಬಿಚ್ಚಿಟ್ಟಿದ್ದಾರೆ.