ತಮಿಳುನಾಡಿನಲ್ಲಿ ₹1,000 ಕೋಟಿ ಮದ್ಯ ಹಗರಣ – ಅಣ್ಣಾಮಲೈ ವಶಕ್ಕೆ

ಚೆನ್ನೈ: ತಮಿಳುನಾಡಿನಲ್ಲಿ ಬಹುಕೋಟಿ ರೂಪಾಯಿ ಮೌಲ್ಯದ ಮದ್ಯ ಹಗರಣ ನಡೆದಿದೆ ಎಂದು ಆರೋಪಿಸಿ ಇಂದು ಪ್ರತಿಭಟನೆಗೆ ಮುಂದಾಗಿದ್ದ ತಮಿಳುನಾಡು ಬಿಜೆಪಿ ಅಧ್ಯಕ್ಷ ಕೆ.ಅಣ್ಣಾಮಲೈ ಮತ್ತು ಪಕ್ಷದ ಬೆಂಬಲಿಗರನ್ನು ಪೊಲೀಸರು ವಶಕ್ಕೆ ಪಡೆದರು.

ತಮಿಳುನಾಡಿನ ಚಿಲ್ಲರೆ ಮದ್ಯ ಮಾರಾಟ ನಿಗಮದಲ್ಲಿ 1,000 ಕೋಟಿ ರೂ ಮೌಲ್ಯದ ಅಕ್ರಮ ನಡೆದಿದೆ ಎಂಬ ಆರೋಪ ಕೇಳಿಬಂದ ಹಿನ್ನೆಲೆಯಲ್ಲಿ ಜಾರಿ ನಿರ್ದೇಶನಾಲಯ(ಇ.ಡಿ.) ತನಿಖೆ ನಡೆಸುತ್ತಿದೆ. ಸರ್ಕಾರಿ ಸ್ವಾಮ್ಯದ ಟಿಎಎಸ್ಎಂಎಸಿ ಅವ್ಯವಹಾರಗಳಲ್ಲಿ ಭಾಗಿಯಾಗಿರುವ ಆರೋಪವಿದೆ. ಈ ಹಿನ್ನೆಲೆಯಲ್ಲಿ ಟಿಎಎಸ್ಎಂಎಸಿಯನ್ನು ಗುರಿಯಾಗಿಸಿ ಬಿಜೆಪಿ ರಾಜ್ಯದೆಲ್ಲೆಡೆ ಪ್ರತಿಭಟನೆಗೆ ಕರೆ ನೀಡಿತ್ತು. ಅದರಂತೆ ಇಂದು ಪ್ರತಿಭಟನೆಗೆ ಮುಂದಾದಾಗ ಅಣ್ಣಾಮಲೈ ಮತ್ತು ಪಕ್ಷದ ನಾಯಕರನ್ನು ಪೊಲೀಸರು ವಶಕ್ಕೆ ಪಡೆದರು.
ತೆಲಂಗಾಣ ಮತ್ತು ಪುದುಚೇರಿ ಮಾಜಿ ರಾಜ್ಯಪಾಲೆ ತಮಿಳಿಸೈ ಸೌಂದರ್ಯರಾಜನ್ ಅವರನ್ನೂ ಕೂಡ ಬಿಗಿ ಪೊಲೀಸ್ ಭದ್ರತೆಯನ್ನು ಅವರ ನಿವಾಸದಿಂದಲೇ ಪೊಲೀಸರು ವಶಕ್ಕೆ ಪಡೆದರು. ಈ ವೇಳೆ ಮಾತನಾಡಿದ ಸೌಂದರ್ಯರಾಜನ್, “ಪೊಲೀಸರು ನನ್ನ ನಿವಾಸದಿಂದಲೇ ನನ್ನನ್ನು ವಶಕ್ಕೆ ಪಡೆದರು. ನಾನು ಏಕಾಂಗಿಯಾಗಿ ಹೋಗುವುದಿಲ್ಲ. ಎಲ್ಲರೂ ನನ್ನ ಜೊತೆ ಬರಬೇಕೆಂದು ಬಯಸುತ್ತೇನೆ” ಎಂದರು.
ಮಹಿಳಾ ಮೋರ್ಚಾ ಮುಖ್ಯಸ್ಥ ಮತ್ತು ಕೊಯಮತ್ತೂರಿನ ದಕ್ಷಿಣ ಕ್ಷೇತ್ರದ ಶಾಸಕಿ ವನತಿ ಶ್ರೀನಿವಾಸನ್, ವಿನೋಜ್ ಪಿ.ಸೆಲ್ವಂ ಮತ್ತು ಅಮರ್ ಪ್ರಸಾದ್ ರೆಡ್ಡಿ ಸೇರಿದಂತೆ ಅನೇಕರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಪೊಲೀಸರು ವಶಕ್ಕೆ ಪಡೆಯುವುದಕ್ಕೂ ಮುನ್ನ ಮಾತನಾಡಿದ ಅಣ್ಣಾಮಲೈ, “ಟಿಎಎಸ್ಎಂಎಸಿ (ತಮಿಳುನಾಡು ಸ್ಟೇಟ್ ಮಾರ್ಕೆಟಿಂಗ್ ಕಾರ್ಪೊರೇಷನ್)ನಲ್ಲಿ 1,000 ಕೋಟಿ ರೂ ಅಕ್ರಮ ನಡೆದಿದೆ. ಈ ಅಕ್ರಮವನ್ನು ಖಂಡಿಸಿ ಬಿಜೆಪಿ ಪ್ರತಿಭಟನೆ ಮುಂದುವರೆಸಲಿದೆ” ಎಂದು ತಿಳಿಸಿದರು.
“ದೆಹಲಿ ಮತ್ತು ಚಂಡೀಗಢದ ರೀತಿಯಲ್ಲಿಯಲ್ಲೇ ರಾಜ್ಯದಲ್ಲೂ ಕೂಡ ಭಾರಿ ಪ್ರಮಾಣದಲ್ಲಿ ಮದ್ಯ ಹಗರಣ ನಡೆದಿದೆ. ಡಿಎಂಕೆ ಸರ್ಕಾರ ಸಾರ್ವಜನಿಕರ ಗಮನವನ್ನು ಈ ಹಗರಣದಿಂದ ಬೇರೆಡೆ ತಿರುಗಿಸುವ ನಿಟ್ಟಿನಲ್ಲಿ ರೂಪಾಯಿ ಸಿಂಬಲ್ನಂತಹ ಅನಗತ್ಯ ವಿಷಯಗಳೆಡೆಗೆ ವಿಷಯಾಂತರ ಮಾಡುತ್ತಿದೆ” ಎಂದು ಅವರು ಆರೋಪಿಸಿದ್ದಾರೆ.
