ಮಂಗಳೂರು: ಮೀನುಗಾರ ಮಹಿಳೆಯರ ಸಮಸ್ಯೆಗಳ ಪರಿಹಾರಕ್ಕೆ ಪ್ರಾಮಾಣಿಕ ಪ್ರಯತ್ನ; ಡಾ. ನಾಗಲಕ್ಷ್ಮಿ ಚೌಧರಿ ಭರವಸೆ

ಮಂಗಳೂರು: ನಗರದ ಸ್ಟೇಟ್ ಬ್ಯಾಂಕ್ ನ ಮಾರುಕಟ್ಟೆಯಲ್ಲಿ ಮೀನುಗಾರ ಮಹಿಳೆಯರು ತಮ್ಮ ಸಮಸ್ಯೆಯನ್ನು ಹೇಳಿಕೊಂಡಿದ್ದಾರೆ. ನೂತನವಾಗಿ ನಿರ್ಮಾಣವಾಗಿರುವ ಮೀನು ಮಾರುಕಟ್ಟೆಯಲ್ಲಿ ವ್ಯವಸ್ಥೆಗಳು ಅವೈಜ್ಞಾನಿಕವಾಗಿರುವುದಾಗಿ ಹೇಳಿಕೊಂಡಿರುವ ಮಹಿಳೆಯರು, ಅಲ್ಲಿಗೆ ತಮ್ಮ ವ್ಯಾಪಾರವನ್ನು ಸ್ಥಳಾಂತರಿಸಲು ನಿರಾಕರಿಸುತ್ತಿದ್ದಾರೆ. ಈ ಬಗ್ಗೆ ಜಿಲ್ಲಾಧಿಕಾರಿ ಮಾತ್ರವಲ್ಲದೆ ಸರಕಾರದ ಗಮನಕ್ಕೂ ತರುವುದಾಗಿ ಕರ್ನಾಟಕ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಡಾ.ನಾಗಲಕ್ಷ್ಮಿಚೌಧರಿ ತಿಳಿಸಿದ್ದಾರೆ.
ದ.ಕ. ಜಿಲ್ಲಾ ಭೇಟಿಯಲ್ಲಿರುವ ಅವರು ಗುರುವಾರ ಮಧ್ಯಾಹ್ನ ಸ್ಟೇಟ್ ಬ್ಯಾಂಕ್ ನಲ್ಲಿರುವ ಹಸಿ ಮತ್ತು ಒಣ ಮೀನು ಮಾರುಕಟ್ಟೆಗೆ ಭೇಟಿ ನೀಡಿ ಅವರ ಸಮಸ್ಯೆಗಳನ್ನು ಆಲಿಸಿದ ಬಳಿಕ ಸುದ್ದಿಗಾರರ ಜೊತೆ ಮಾತನಾಡುತ್ತಿದ್ದರು.

ಸ್ಟೇಟ್ ಬ್ಯಾಂಕ್ ಹಸಿ ಮೀನು ಮಾರುಕಟ್ಟೆಯಲ್ಲಿ ತಾವು ಹಲವು ದಶಕಗಳಿಂದ ವ್ಯಾಪಾರ ಮಾಡುತ್ತಿದ್ದು, ಇಲ್ಲಿಯೇ ವ್ಯಾಪಾರಕ್ಕೆ ಅವಕಾಶ ಮಾಡುವಂತೆ ಮಹಿಳೆಯರು ತಮ್ಮ ಬೇಡಿಕೆ ಇರಿಸಿದ್ದಾರೆ. ನೂತನವಾಗಿ ನಿರ್ಮಿಸಲಾಗಿರುವ ಮಾರುಕಟ್ಟೆಯಲ್ಲಿ ಸೂಕ್ತ ಗಾಳಿ, ಬೆಳಕಿನ ವ್ಯವಸ್ಥೆಯ ಕೊರತೆಯ ಜತೆಗೆ ಬಾಡಿಗೆಯೂ ದುಬಾರಿಯಾಗಿದೆ ಎಂದು ಹೇಳಿದ್ದಾರೆ. ದ.ಕ. ಜಿಲ್ಲಾಧಿಕಾರಿ ಹಾಗೂ ಇತರ ಜಿಲ್ಲಾ ಮಟ್ಟದ ಅಧಿಕಾರಿಗಳ ಜತೆ ನಾಳೆ ಸಭೆಯಲ್ಲಿ ಈ ಬಗ್ಗೆ ಪ್ರಸ್ತಾವಿಸಲಿದ್ದೇನೆ. ಸಮಸ್ಯೆಯನ್ನು ಆಡಳಿತದ ಗಮನಕ್ಕೆ ತರುವ ನಿಟ್ಟಿನಲ್ಲಿ ಮಹಿಳಾ ಮೀನುಗಾರ ಪ್ರತಿನಿಧಿಗಳೂ ಭಾಗವಹಿಸುವಂತೆ ಕೋರಿದ್ದೇನೆ. ಮೀನುಗಾರ ಮಹಿಳೆಯರು ಲಿಖಿತವಾಗಿ ನೀಡುವ ಬೇಡಿಕೆಗಳ ಕುರಿತಂತೆ, ಸೂಕ್ತ ವ್ಯವಸ್ಥೆ ಕಲ್ಪಿಸುವ ನಿಟ್ಟಿನಲ್ಲಿ ಸರಕಾರದ ಗಮನಕ್ಕೆ ತರಲಾಗುವುದು ಎಂದರು.
ಆರಂಭದಲ್ಲಿ ಹಸಿ ಮೀನು ಮಾರುಕಟ್ಟೆಗೆ ಭೇಟಿ ನೀಡಿದ ಡಾ. ನಾಗಲಕ್ಷ್ಮಿಚೌಧರಿ, ಸಮಸ್ಯೆ ಏನಿದೆ ಹೇಳಿ ಎಂದು ಕೋರಿದಾಗ ಮೀನುಗಾರ ಮಹಿಳೆಯರು ಮೌನ ವಹಿಸಿದರು.
ಮತ್ತೆ ಕೆಲವರಲ್ಲಿ ಮಾತನಾಡಿದ ಡಾ.ನಾಗಲಕ್ಷ್ಮಿ ಸಮಸ್ಯೆ ಹೇಳಿಕೊಂಡರೆ ಅದಕ್ಕೆ ತಕ್ಕುದಾದ ರೀತಿಯಲ್ಲಿ ವ್ಯವಸ್ಥೆ ಕಲ್ಪಿಸಲು ಸಂಬಂಧಪಟ್ಟವರಿಗೆ ನಿರ್ದೇಶನ ನೀಡುವುದಾಗಿ ತಿಳಿಸಿದಾಗ, ಯಶೋಧಾ ಎಂಬವರು ಮುಂದೆ ಬಂದು ಸಮಸ್ಯೆಗಳ ಬಗ್ಗೆ ಬೆಳಕು ಚೆಲ್ಲಿದರು.
‘ನಾವು ಇಲ್ಲಿ ಹಲವು ವರ್ಷಗಳಿಂದ ವ್ಯಾಪಾರ ಮಾಡಿಕೊಂಡು ಬಂದಿದ್ದೇವೆ. ಈಗ ಬೇರೆ ಕಡೆಗೆ ಸ್ಥಳಾಂತರಿಸಿದರೆ ನಮಗೆ ವ್ಯಾಪಾರ ಆಗದು. ಮಾತ್ರವಲ್ಲದೆ, ನೂತನ ಮಾರುಕಟ್ಟೆಯಲ್ಲಿ ಇಲ್ಲಿರುವಷ್ಟು ಗಾಳಿ ಬೆಳಕಿನ ವ್ಯವಸ್ಥೆಯೂ ಇಲ್ಲ. ಅಲ್ಲಿ ಬಾಡಿಗೆಯೂ ದುಬಾರಿಯಾಗಿದೆ’ ಎಂದರು. ಇದಕ್ಕೆ ಅಲ್ಲಿದ್ದ ಹಲವು ಮೀನುಗಾರ ಮಹಿಳೆಯರು ದನಿಗೂಡಿಸಿದರು.
ಒಣ ಮೀನು ಮಾರುಕಟ್ಟೆಗೆ ಭೇಟಿ ನೀಡಿದ ವೇಳೆ ಮೀನುಗಾರ ಮಹಿಳೆಯಾದ ರವಿಕಲಾ ಎಂಬವರು ಮಾತನಾಡಿ, ಈಗಾಗಲೇ ಹೊಸ ಮಾರುಕಟ್ಟೆಗೆ ಸ್ಥಳಾಂತರಕ್ಕೆ ಸೂಚಿಸಲಾಗಿದೆ. ಆದರೆ ಅಲ್ಲಿ ಒಂದು ಮೂಲೆಯಲ್ಲಿ ಒಣ ಮೀನುಗಾರರಿಗೆ ವ್ಯವಸ್ಥೆ ಮಾಡಲಾಗಿದೆ. ಈಗಾಗಲೇ ವ್ಯಾಪಾರ ನಷ್ಟದಿಂದ ಸಂಕಷ್ಟದಲ್ಲಿರುವ ಮಹಿಳೆಯರು ಅವ್ಯವಸ್ಥಿತ ಜಾಗದಲ್ಲಿ ವ್ಯಾಪಾರ ಮಾಡಲು ಕಷ್ಟವಾಗಲಿದೆ ಎಂದರು.
ಹಾಲಿ ಮಾರುಕಟ್ಟೆಯಲ್ಲಿ ಮಳೆಗಾಲದಲ್ಲಿ ನೀರು ಸೋರಿಕೆಯಾಗುತ್ತದೆ. ಕಳ್ಳರು ನುಗ್ಗಿ ಹಣ ದೋಚುತ್ತಿರುವ ಪ್ರಕರಣಗಳು ನಡೆದಿವೆ. ಇಲ್ಲಿ ಸಿಸಿಟಿವಿ ಕ್ಯಾಮರಾ ಅಳವಡಿಸಬೇಕು ಎಂದು ಇತರ ಮೀನುಗಾರ ಮಹಿಳೆಯರು ಆಗ್ರಹಿಸಿದರು.
ಬಳಿಕ ಸಮೀಪದ ಖಾಸಗಿ ಬಸ್ ನಿಲ್ದಾಣಕ್ಕೆ ಡಾ.ನಾಗಲಕ್ಷ್ಮಿ ಚೌಧರಿ ಭೇಟಿ ನೀಡಿದಾಗ, ಅಲ್ಲಿ ಸಿಸಿಟಿವಿ ಕ್ಯಾಮರಾ ಕೊರತೆ, ಪ್ರಯಾಣಿಕರಿಗೆ ವಿಶ್ರಾಂತಿ ಪಡೆಯಲು ಆಸನಗಳ ಕೊರತೆ ಬಗ್ಗೆ ಅಲ್ಲಿದ್ದವರು ಗಮನ ಸೆಳೆದರು.
ಮೀನುಗಾರಿಕಾ ಇಲಾಖೆಯ ಉಪ ನಿರ್ದೇಶಕ ದಿಲೀಪ್ ಕುಮಾರ್ ಸೇರಿದಂತೆ ಇತರ ಅಧಿಕಾರಿಗಳು ಉಪಸ್ಥಿತರಿದ್ದರು.