ಇರಾನ್ ವಿರುದ್ಧದ ಯುದ್ಧಕ್ಕೆ ವಿರೋಧ: ಸ್ಪೇನ್ ನಿಲುವನ್ನು ಶ್ಲಾಘಿಸಿದ ಅಧ್ಯಕ್ಷ ಮಸೌದ್ ಪೆಜೆಶ್ಕಿಯನ್

ಟೆಹ್ರಾನ್: ಇರಾನ್ ವಿರುದ್ಧದ ಯುದ್ದದಲ್ಲಿ ಅಮೆರಿಕಕ್ಕೆ ಸಹಕರಿಸಲು ಸ್ಪೇನ್ ನಿರಾಕರಿಸಿರುವುದನ್ನು ಇರಾನ್ ಅಧ್ಯಕ್ಷ ಮಸೌದ್ ಪೆಜೆಶ್ಚಿಯನ್ ಶ್ಲಾಘಿಸಿದ್ದಾರೆ.
ಇರಾನ್ ಸೇರಿದಂತೆ ಹಲವು ದೇಶಗಳ ವಿರುದ್ಧ ‘ಜಿಯೋನಿಸ್ಟ್-ಅಮೆರಿಕನ್ ಒಕ್ಕೂಟ’ ನಡೆಸುತ್ತಿರುವ ಮಾನವ ಹಕ್ಕುಗಳ ಉಲ್ಲಂಘನೆ ಮತ್ತು ಮಿಲಿಟರಿ ಆಕ್ರಮಣವನ್ನು ವಿರೋಧಿಸುವಲ್ಲಿ ಸ್ಪೇನ್ ಜವಾಬ್ದಾರಿಯುತ ನಿಲುವು ತಾಳಿದೆ ಎಂದು ಅವರು ಹೇಳಿದ್ದಾರೆ ಎಂದು Aljazeera ವರದಿ ಮಾಡಿದೆ.
‘ಇರಾನ್ ಸೇರಿದಂತೆ ಹಲವು ದೇಶಗಳ ವಿರುದ್ಧ ಜಿಯೋನಿಸ್ಟ್-ಅಮೆರಿಕನ್ ಒಕ್ಕೂಟ ನಡೆಸುತ್ತಿರುವ ಸ್ಪಷ್ಟ ಮಾನವ ಹಕ್ಕುಗಳ ಉಲ್ಲಂಘನೆ ಮತ್ತು ಮಿಲಿಟರಿ ಆಕ್ರಮಣವನ್ನು ವಿರೋಧಿಸುವಲ್ಲಿ ಸ್ಪೇನ್ ತೋರಿದ ಜವಾಬ್ದಾರಿಯುತ ನಡವಳಿಕೆ, ಪಶ್ಚಿಮ ರಾಷ್ಟ್ರಗಳಲ್ಲಿಯೂ ನೈತಿಕತೆ ಮತ್ತು ಜಾಗೃತ ಆತ್ಮಸಾಕ್ಷಿ ಇನ್ನೂ ಅಸ್ತಿತ್ವದಲ್ಲಿವೆ ಎಂಬುದನ್ನು ತೋರಿಸುತ್ತದೆ. ಸ್ಪ್ಯಾನಿಷ್ ಅಧಿಕಾರಿಗಳು ತೆಗೆದುಕೊಂಡಿರುವ ನಿಲುವಿಗಾಗಿ ನಾನು ಅವರನ್ನು ಶ್ಲಾಘಿಸುತ್ತೇನೆ’ ಎಂದು ಪೆಜೆಶ್ಚಿಯನ್ ಹೇಳಿದ್ದಾರೆ.

ಇರಾನ್ ವಿರುದ್ಧದ ಯುದ್ಧದಲ್ಲಿ ಅಮೆರಿಕ ತನ್ನ ಮಿಲಿಟರಿ ನೆಲೆಗಳನ್ನು ಬಳಸಲು ಅವಕಾಶ ನೀಡಲು ಸ್ಪೇನ್ ನಿರಾಕರಿಸಿದ್ದನ್ನು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಟೀಕಿಸಿದ್ದರು.
ಇದಕ್ಕೆ ಪ್ರತಿಕ್ರಿಯಿಸಿದ ಸ್ಪೇನ್ ಪ್ರಧಾನಿ ಪೆಟ್ರೊ ಸ್ಯಾಂಚೆಜ್, ಮ್ಯಾಡ್ರಿಡ್ ಲಕ್ಷಾಂತರ ಜನರ ಜೀವಗಳನ್ನು ಪಣಕ್ಕಿಡುವ ಜೂಜಾಟವಾಡಲು ನಿರಾಕರಿಸಿದೆ’ ಎಂದು ಹೇಳಿದ್ದರು.
ಇದಾದ ಬಳಿಕ ಟ್ರಂಪ್ ಸ್ಪೇನ್ನೊಂದಿಗೆ ಇರುವ ಎಲ್ಲಾ ವ್ಯಾಪಾರ ಸಂಬಂಧಗಳನ್ನು ಮುರಿಯುವುದಾಗಿ ಬೆದರಿಕೆ ಹಾಕಿದ್ದರು. ಬುಧವಾರ ಶ್ವೇತಭವನವು ಸ್ಪೇನ್ ಅಮೆರಿಕದ ಬೇಡಿಕೆಗಳಿಗೆ ಬಗ್ಗಿ ಸಹಕರಿಸಲು ಒಪ್ಪಿಕೊಂಡಿದೆ ಎಂದು ಹೇಳಿಕೆ ನೀಡಿತ್ತು.
ಆದರೆ ಸ್ಪೇನ್ ಸರ್ಕಾರವು ಆ ಹೇಳಿಕೆಯನ್ನು ತಿರಸ್ಕರಿಸಿ, ಇರಾನ್ ಯುದ್ಧದ ವಿಷಯದಲ್ಲಿ ತನ್ನ ನಿಲುವು ಯಾವುದೇ ರೀತಿಯಲ್ಲೂ ಬದಲಾಗಿಲ್ಲ ಎಂದು ಸ್ಪಷ್ಟಪಡಿಸಿದೆ.