ಪುನೀತ್ ರಾಜಕುಮಾರ್ 50 ನೇ ಜಯಂತೋತ್ಸವ ರಾಜರತ್ನನಿಗೆ ಅಭಿಮಾನಿಗಳ ನಮನ

ದಿವಂಗತ ನಟ ಪುನೀತ್ ರಾಜ್‌ಕುಮಾರ್ ಅವರ 50ನೇ ಹುಟ್ಟುಹಬ್ಬ ಆಚರಣೆ ಸಡಗರ ಸಂಭ್ರಮದಿಂದ ಕೂಡಿದೆ. ಅಪ್ಪು ಅಗಲಿಕೆಯ ನೋವಿನಲ್ಲೇ ಈ ದಿನವನ್ನು ವಿಶೇಷವಾಗಿಸಲು ಅಭಿಮಾನಿಗಳು ಮುಂದಾಗಿದ್ದಾರೆ. ಕಂಠೀರವ ಸ್ಟುಡಿಯೋಗೆ ಭೇಟಿ ನೀಡಿ ಅಭಿಮಾನಿಗಳು ಅಪ್ಪು ಸಮಾಧಿಗೆ ನಮನ ಸಲ್ಲಿಸುತ್ತಿದ್ದಾರೆ.
ಪ್ರತಿ ವರ್ಷ ಮಾರ್ಚ್ 17 ಬಂತೆಂದರೆ ಅಭಿಮಾನಿಗಳು ಸಂಭ್ರಮಿಸುತ್ತಾರೆ. ಪುನೀತ್ ರಾಜ್‌ಕುಮಾರ್ ಬರ್ತ್ಡೇಪ್ರಯುಕ್ತ ಹಲವಾರು ಬಗೆಯ ಸಮಾಜಮುಖಿ ಕೆಲಸಗಳನ್ನು ಮಾಡಲಾಗುತ್ತದೆ. ಈ ಬಾರಿ ಕೂಡ ಅದು ಮುಂದುವರಿದಿದೆ. ಅಪ್ಪು ಅಭಿಮಾನಿಗಳು ಅನ್ನದಾನ, ರಕ್ತದಾನ, ನೇತ್ರದಾನ ನೋಂದಣಿ ಸೇರಿದಂತೆ ಅನೇಕ ಬಗೆಯ ಕಾರ್ಯಗಳನ್ನು ಕೈಕೊಳ್ಳುತ್ತಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಕೂಡ ಪುನೀತ್ ಅವರಿಗೆ ಜನ್ಮದಿನದ ಶುಭಾಶಯ ಕೋರುವ ಮೂಲಕ ಸ್ಮರಿಸಲಾಗುತ್ತಿದೆ.
ನಟನಾಗಿ ಮಾತ್ರವಲ್ಲದೇ ನಿರ್ಮಾಪಕನಾಗಿ ಕೂಡ ಪುನೀತ್ ರಾಜ್‌ಕುಮಾರ್ ಅವರು ಸಕ್ರಿಯರಾಗಿದ್ದರು. ‘ಪಿಆರ್ಕೆ ಪ್ರೊಡಕ್ಷನ್ಸ್’ ಮೂಲಕ ಅವರು ಮಹತ್ವದ ಸಿನಿಮಾಗಳನ್ನು ನಿರ್ಮಿಸುವ ಗುರಿ ಹೊಂದಿದ್ದರು. ಆ ಕಾಯಕವನ್ನು ಈಗ ಅಶ್ವಿನಿ ಪುನೀತ್ ರಾಜ್‌ಕುಮಾರ್ ಅವರು ಮುಂದುವರಿಸುತ್ತಿದ್ದಾರೆ. ಇಂದು ಜನ್ಮದಿನದ ಪ್ರಯುಕ್ತ ಅನೇಕರು ಅಪ್ಪು ಸಮಾಧಿಗೆ ಭೇಟಿ ನೀಡಿ ನಮನ ಸಲ್ಲಿಸಲಿದ್ದಾರೆ. ಡಾ. ರಾಜ್‌ಕುಮಾರ್ ಕುಟುಂಬದವರು ಕೂಡ ಸಮಾಧಿ ಸ್ಥಳಕ್ಕೆ ಭೇಟಿ ನೀಡಲಿದ್ದಾರೆ.

