ಇಸ್ರೇಲ್-ಇರಾನ್ ಸಂಘರ್ಷ: ಇಸ್ರೇಲ್‌ನಲ್ಲಿರುವ ಭಾರತೀಯರಿಗೆ ವಿದೇಶಾಂಗ ಇಲಾಖೆಯಿಂದ ತುರ್ತು ಮಾರ್ಗಸೂಚಿ

ಹೊಸದಿಲ್ಲಿ: ಇರಾನ್ ಮೇಲೆ ದಾಳಿ ಬೆನ್ನಲ್ಲೆ ಅತ್ಯಂತ ಎಚ್ಚರಿಕೆಯಿಂದ ಮತ್ತು ಎಲ್ಲಾ ಸಮಯದಲ್ಲೂ ಜಾಗರೂಕರಾಗಿರುವಂತೆ ಭಾರತೀಯ ಪ್ರಜೆಗಳಿಗೆ ಇಸ್ರೇಲ್‌ನ ಟೆಲ್ ಅವೀವ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿ ಸಲಹೆ ನೀಡಿದೆ.
ಹೋಮ್ ಫ್ರಂಟ್ ಕಮಾಂಡ್‌ನ ನಿರ್ದೇಶನಗಳನ್ನೊಳಗೊಂಡಂತೆ ಇಸ್ರೇಲ್ ಅಧಿಕಾರಿಗಳು ಹೊರಡಿಸಿದ ಎಲ್ಲಾ ಸುರಕ್ಷತಾ ಸೂಚನೆಗಳು ಮತ್ತು ಮಾರ್ಗಸೂಚಿಗಳನ್ನು ಅನುಸರಿಸಬೇಕೆಂದು ರಾಯಭಾರಿ ಕಚೇರಿಯು ತಿಳಿಸಿದೆ.
ಇಸ್ರೇಲ್‌ನಲ್ಲಿ ವಾಸಿಸುತ್ತಿರುವ ಭಾರತೀಯರು ತಮ್ಮಮನೆ ಅಥವಾ ಕೆಲಸದ ಸ್ಥಳದ ಸಮೀಪದಲ್ಲಿರುವ ನಿಗದಿತ ಆಶ್ರಯ ಕೇಂದ್ರಗಳ ಬಳಿ ಇರುವಂತೆ ಸೂಚಿಸಲಾಗಿದೆ. ಮುಂದಿನ ಸೂಚನೆಗಳವರೆಗೆ ಅನಾವಶ್ಯಕ ಪ್ರಯಾಣವನ್ನು ತಪ್ಪಿಸುವಂತೆ ಮತ್ತು ಮಾಹಿತಿಗಾಗಿ ಸ್ಥಳೀಯ ಸುದ್ದಿ ಮಾಧ್ಯಮಗಳು, ಪ್ರಕಟಣೆಗಳ ಬಗ್ಗೆ ಗಮನಹರಿಸುವಂತೆ ಸೂಚಿಸಲಾಗಿದೆ.
ತುರ್ತು ಸಂದರ್ಭಗಳಲ್ಲಿ ಭಾರತೀಯ ನಾಗರಿಕರು ಟೆಲ್ ಅವೀವ್‌ನಲ್ಲಿರುವ ಭಾರತೀಯ ರಾಯಭಾರಿ ಕಚೇರಿಯನ್ನು ಸಂಪರ್ಕಿಸುವಂತೆ ಸೂಚಿಸಲಾಗಿದೆ.
