ಬೆಂಗಳೂರು: ಮದ್ಯದ ಅಮಲಿನಲ್ಲಿ ಕಾರು ಚಲಾಯಿಸಿ ಯುವಕರ ಅಟ್ಟಹಾಸ; ವ್ಯಕ್ತಿ ಸಾ*ವು

ಆನೇಕಲ್: ರಾಜ್ಯದ (Bengaluru) ಗಡಿಭಾಗ ತಮಿಳು ನಾಡಿನ ಹೊಸೂರು ನಗರದಲ್ಲಿ ಪ್ರಭಾವಿ ಮುಖಂಡರ ಮಕ್ಕಳಿಂದ ಓರ್ವನ ಹತ್ಯೆಯಾಗಿದೆ. ಕುಡಿದ ನಶೆಯಲ್ಲಿಯೇ ವಾಹನ ಚಾಲನೆ ಮಾಡಿದ್ದ ಕಾಲೇಜು ವಿದ್ಯಾರ್ಥಿಗಳು ಉದ್ದೇಶಪೂರ್ವಕವಾಗಿ ವ್ಯಕ್ತಿಯೊಬ್ಬರ ಮೇಲೆ ವಾಹನ ಹರಿಸಿದ್ದಾರೆ ಎಂದು ಆರೋಪಿಸಲಾಗಿದೆ. ಸಧ್ಯ ಮೂವರನ್ನೂ ಹೊಸೂರು ಪೊಲೀಸರು ಬಂಧಿಸಿದ್ದಾರೆ.

ಅಸಿಸ್ಟೆಂಟ್ ಲೇಬರ್ ಇನ್ಸ್ಪೆಕ್ಟರ್ ಆಗಿದ್ದ ವ್ಯಕ್ತಿ
ಕುಡಿದ ನಶೆಯಲ್ಲಿದ್ದ ಈ ಮೂವರು ಕಾಲೇಜು ವಿದ್ಯಾರ್ಥಿಗಳು ಮೊದಲು ವಾಹನವೊಂದಕ್ಕೆ ಗುದ್ದಿದ್ದು, ನಂತರ ಬೇಕಂತಲೇ ಶಿವಮೂರ್ತಿ (54) ಎನ್ನುವವರ ಮೇಲೆ ಕಾರು ಹರಿಸಲಾಗಿದೆ ಎಂದು ಹೇಳಲಾಗಿದೆ. ಶಿವಮೂರ್ತಿ ಹೊಸೂರಿನ ಅಣ್ಣೈ ಅರವಿಂದ್ ನಗರದ ನಿವಾಸಿಯಾಗಿದ್ದು, ಅಸಿಸ್ಟೆಂಟ್ ಲೇಬರ್ ಇನ್ಸ್ಪೆಕ್ಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದರು. ಮನೆ ಮುಂದೆ ಬೈಕ್ ನಿಲ್ಲಿಸಿದ್ದ ಶಿವಮೂರ್ತಿ ಅವರ ವಾಹನಕ್ಕೆ ಕಾರಿನಲ್ಲಿ ಬಂದ ಮೂವರು ವಿದ್ಯಾರ್ಥಿಗಳು ಡಿಕ್ಕಿ ಹೊಡೆದಾಗ ಕೋಪಗೊಂಡ ಶಿವಮೂರ್ತಿ ಮತ್ತು ಕುಟುಂಬಸ್ಥರು ಹೊರಬಂದು ಪ್ರಶ್ನಿಸಿದ್ದಾರೆ. ಈ ನಡುವೆ ಪರಸ್ಪರ ವಾಗ್ವಾದ ನಡೆದಿದೆ. ಈ ವೇಳೆ ಆರೋಪಿಗಳು ಕಾರನ್ನು ಏಕಾಏಕಿ ಮುಂದೆ ಚಲಾಯಿಸಿ ಶಿವಮೂರ್ತಿ ಮೇಲೆ ಹರಿಸಿದ್ದಾರೆ ಎನ್ನಲಾಗಿದೆ. ಗಂಭೀರವಾಗಿ ಗಾಯಗೊಂಡ ಶಿವಮೂರ್ತಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
ಘಟನೆಯಲ್ಲಿ ಶಿವಮೂರ್ತಿ ಅವರ ಮಗ, ಸೊಸೆ ಮತ್ತು ಮೊಮ್ಮಗ ಕೂಡ ಗಾಯಗೊಂಡಿದ್ದು, ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಪ್ರಕರಣ ಸಂಬಂಧ ಆದಿತ್ಯ (20), ರಿತಿಕ್ ಕುಮಾರ್ (19) ಹಾಗೂ ಹರೀಶ್ (19) ಎಂಬ ಮೂವರು ಆರೋಪಿಗಳನ್ನು ಬಂಧಿಸಲಾಗಿದೆ. ಈ ಕುರಿತು ಹೊಸೂರು ಪೊಲೀಸ್ ಠಾಣೆ ಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ. ಅಪಘಾತದ ಬಳಿಕ ಜನರ ಕಿರುಚಾಟದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದೆ.