ಕೋಲ್ಕತ್ತಾ: ಪಶ್ಚಿಮ ಬಂಗಾಳದಲ್ಲಿ ಭೂಕಂಪನದ ಅನುಭವ; ಬಾಂಗ್ಲಾದೇಶದಲ್ಲಿ ಕೇಂದ್ರಬಿಂದು

ಕೋಲ್ಕತ್ತಾ: ಪಶ್ಚಿಮ ಬಂಗಾಳದ ರಾಜಧಾನಿ ಕೋಲ್ಕತ್ತಾ ನಗರದಲ್ಲಿ ಶುಕ್ರವಾರ ಮಧ್ಯಾಹ್ನ ಪ್ರಬಲ ಭೂಕಂಪನದ ಅನುಭವವಾಗಿದ್ದು, ಜನರು ಕೆಲಕಾಲ ಆತಂಕಗೊಂಡು ಮನೆಗಳು, ಕಚೇರಿಗಳು ಮತ್ತು ಶಾಲೆಗಳ ಕಟ್ಟಡಗಳಿಂದ ಹೊರಗೆ ಓಡಿಬಂದರು. ಮಧ್ಯಾಹ್ನ 1:22ರ ಸುಮಾರಿಗೆ ಕಂಪನ ಅನುಭವವಾಗಿದೆ ಎಂದು ನಿವಾಸಿಗಳು ತಿಳಿಸಿದ್ದಾರೆ.
ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರ NCS ಪ್ರಕಾರ, ರಿಕ್ಟರ್ ಮಾಪಕದಲ್ಲಿ ಭೂಕಂಪದ ತೀವ್ರತೆ 5.5 ದಾಖಲಾಗಿದೆ. ಭೂಕಂಪವು 10 ಕಿ.ಮೀ ಆಳದಲ್ಲಿ ಸಂಭವಿಸಿದ್ದು, ಕೇಂದ್ರ ಬಿಂದುವು ಬಾಂಗ್ಲಾದೇಶದಲ್ಲಿ 22.57°N ಅಕ್ಷಾಂಶ ಮತ್ತು 89.11°E ರೇಖಾಂಶದಲ್ಲಿದೆ ಎಂದು ತಿಳಿಸಿದೆ.ಇನ್ನೊಂದೆಡೆ, ಯುಎಸ್ ಜಿಯೋಲಾಜಿಕಲ್ ಸರ್ವೆ USGS 5.3 ತೀವ್ರತೆಯನ್ನು ದಾಖಲಿಸಿದ್ದು, ಕೇಂದ್ರ ಬಿಂದುವು ಪಶ್ಚಿಮ ಬಂಗಾಳದ ಟಕಿ ಪ್ರದೇಶದಿಂದ ಸುಮಾರು 26 ಕಿ.ಮೀ ಆಗ್ನೆಯಕ್ಕೆ ಇದೆ ಎಂದು ದೃಢಪಡಿಸಿದೆ. ಆರಂಭಿಕ ವರದಿಗಳಲ್ಲಿ 4.9 ತೀವ್ರತೆಯ ಭೂಕಂಪ ಎಂದು ಉಲ್ಲೇಖಿಸಲಾಗಿತ್ತು.


ಬಾಂಗ್ಲಾದೇಶದಲ್ಲಿ ಮೊದಲು ಸಂಭವಿಸಿದ ಭೂಕಂಪನದ ಅಲೆಗಳು ಬಳಿಕ ಕೋಲ್ಕತ್ತಾಕ್ಕೆ ತಲುಪಿತು. ಬಳಿಕ ನಗರಾದ್ಯಂತ ಸೀಲಿಂಗ್ ಫ್ಯಾನ್ಗಳು ಒಮ್ಮೆಲೇ ಅಲುಗಾಡಿದವು. ಪೀಠೋಪಕರಣಗಳು ನಡುಗಿದವು ಹಾಗೂ ಕಿಟಕಿಗಳು ಅಲುಗಾಡಿ ಸದ್ದು ಮಾಡಿದವು ಎಂದು ಹಲವು ಪ್ರದೇಶಗಳ ನಿವಾಸಿಗಳು ತಿಳಿಸಿದ್ದಾರೆ. ಬಹುಮಹಡಿ ಕಟ್ಟಡಗಳಲ್ಲಿ ಕಂಪನದ ಪರಿಣಾಮ ಹೆಚ್ಚು ತೀವ್ರವಾಗಿ ಕಂಡುಬಂದಿದೆ. ಭಾರತ-ಬಾಂಗ್ಲಾದೇಶ ಗಡಿಯ ಸಮೀಪವಿರುವ ಜಿಲ್ಲೆಗಳಿಂದಲೂ ಕಂಪನದ ವರದಿಗಳು ಬಂದಿವೆ.ಮುಂಜಾಗ್ರತಾ ಕ್ರಮವಾಗಿ ಅನೇಕ ಕಚೇರಿಗಳನ್ನು ತಾತ್ಕಾಲಿಕವಾಗಿ ಖಾಲಿ ಮಾಡಲಾಗಿದ್ದು, ಅಪಾರ್ಟ್ಮೆಂಟ್ ಸಂಕೀರ್ಣಗಳ ನಿವಾಸಿಗಳು ತೆರೆದ ಪ್ರದೇಶಗಳಲ್ಲಿ ಜಮಾಯಿಸಿದರು. ಜನರು ತಮ್ಮ ಮೊಬೈಲ್ ಫೋನ್ಗಳಲ್ಲಿ ಸ್ವೀಕರಿಸಿದ ಭೂಕಂಪ ಎಚ್ಚರಿಕೆ ಸಂದೇಶಗಳ ಸ್ಟೀನ್ಶಾಟ್ಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡರು.