ಪಣಂಬೂರು: ಲಾರಿ ಮತ್ತು ಬೈಕ್ ನಡುವೆ ಭೀಕರ ಡಿಕ್ಕಿ; ಸ್ಥಳದಲ್ಲೇ ಸವಾರನ ದುರ್ಮರಣ

ಮಂಗಳೂರು: ಲಾರಿ ಢಿಕ್ಕಿ ಹೊಡೆದ ಪರಿಣಾಮ ದ್ವಿಚಕ್ರ ವಾಹನ ಸವಾರ ಸ್ಥಳದಲ್ಲೇ ಮೃತಪಟ್ಟ ಘಟನೆ ಗುರುವಾರ ಸಂಜೆ ಮಂಗಳೂರು ಹೊರವಲಯ ಪಣಂಬೂರು ಇಂಡಿಯನ್ ಆಯಿಲ್ ಪೆಟ್ರೋಲ್ ಪಂಪ್ ಮುಂಭಾಗ ನಡೆದಿದೆ.ಮೃತ ಬೈಕ್ ಸವಾರನನ್ನು ಮೂಲತಃ ಉತ್ತರ ಕನ್ನಡ ಜಿಲ್ಲೆಯ ಅಂಕೋಲ ತಾಲೂಕು ನಿವಾಸಿ ಸದ್ಯ ಮಂಗಳೂರು ಬಿಜೈಯಲ್ಲಿ ಬಾಡಿಗೆ ಮನೆಯಲ್ಲಿ ವಾಸವಿರುವ ಶಿವದಾಸ್ ಗಣಪತಿ ನಾಯ್ಕ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಶಿವದಾಸ್ ಗಣಪತಿ ನಾಯ್ಕ ಅವರು ಬೈಕಂಪಾಡಿಯ ಔಷಧಿ ತಯಾರಕ ಸಂಸ್ಥೆಯಲ್ಲಿ ಕೆಲಸ ನಿರ್ವಹಿಸುತ್ತಿದ್ದರು ಎನ್ನಲಾಗಿದ್ದು, ಕೆಲಸ ಮುಗಿಸಿಕೊಂಡು ಬಿಜೈಯಲ್ಲಿರುವ ತಮ್ಮ ಮನೆಗೆ ತೆರಳುತ್ತಿದ್ದ ವೇಳೆ ಲಾರಿಯೊಂದು ಹಿಂದಿನಿಂದ ಬಂದು ಢಿಕ್ಕಿ ಹೊಡೆದಿದೆ ಎಂದು ತಿಳಿದುಬಂದಿದೆ.ಢಿಕ್ಕಿಯ ರಭಸಕ್ಕೆ ಅವರು ಲಾರಿಯ ಹಿಂಭಾಗದ ಚಕ್ರಕ್ಕೆ ಸಿಲುಕಿ ಸ್ಥಳದಲ್ಲೇ ಮೃತಪಟ್ಟರೆಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಘಟನಾ ಸ್ಥಳಕ್ಕೆ ಮಂಗಳೂರು ಉತ್ತರ ಸಂಚಾರ ಪೊಲೀಸ್ ನಿರೀಕ್ಷಕ ಶಿವಕುಮಾರ್ ಎಂ. ಮತ್ತು ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಮುಂದಿನ ಕಾನೂನು ಕ್ರಮಗಳನ್ನು ಕೈಗೊಂಡಿದ್ದಾರೆ.
