ಕ್ಯೂಬಾ ಕರಾವಳಿಯಲ್ಲಿ ರಕ್ತಪಾತ: ಅಮೆರಿಕದ ಸ್ಪೀಡ್‌ಬೋಟ್ ಮೇಲೆ ಕ್ಯೂಬಾ ಗಾರ್ಡ್‌ಗಳಿಂದ ಗುಂಡಿನ ದಾಳಿ

ಹವಾನಾ, ಕ್ಯೂಬಾ: ಕ್ಯೂಬಾ ಕರಾವಳಿಯಲ್ಲಿ ದೇಶದ ಕರಾವಳಿ ಕಾವಲು ಪಡೆ ಮತ್ತು ಅಮೆರಿಕ ನೋಂದಾಯಿತ ಸ್ಪೀಡ್ ಬೋಟ್‌ನಲ್ಲಿ ಪ್ರಯಾಣಿಸುತ್ತಿದ್ದವರ ನಡುವೆ ಬುಧವಾರ ನಡೆದ ಗುಂಡಿನ ಚಕಮಕಿಯಲ್ಲಿ ಬೋಟ್‌ನಲ್ಲಿದ್ದ ನಾಲ್ವರು ಮೃತಪಟ್ಟು ಇತರ ಆರು ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ.
ಫ್ಲೋರಿಡಾ ನೋಂದಣಿ ಹೊಂದಿದ್ದ ಸ್ಪೀಡ್ ಬೋಟ್, ವಿಲ್ಲಾ ಕ್ಲಾರಾ ಪ್ರಾಂತ್ಯದ ಫಾಲ್ಕನ್ಸ್ ಕೇ ಎಂಬಲ್ಲಿಂದ ಒಂದು ನಾಟಿಕಲ್ ಮೈಲು ದೂರದಲ್ಲಿ ಕಾನೂನುಬಾಹಿರವಾಗಿ ಸಂಚರಿಸುತ್ತಿದ್ದುದನ್ನು ಪತ್ತೆ ಮಾಡಿ ದಾಳಿ ಮಾಡಲಾಗಿದೆ ಎಂದು ರಕ್ಷಣಾ ಸಚಿವಾಲಯ ಸ್ಪಷ್ಟಪಡಿಸಿದೆ.

ಸ್ಪೀಡ್ ಬೋಟನ್ನು ಗುರುತಿಸುವ ಸಲುವಾಗಿ ಕರಾವಳಿ ಕಾವಲು ಪಡೆಯ ಹಡಗು ಸಮೀಪಕ್ಕೆ ಬಂದಾಗ ನಾವೆಯಿಂದ ಗುಂಡು ಹಾರಿಸಲಾಗಿದೆ. ಇದರಿಂದ ಕ್ಯೂಬಾ ಹಡಗಿನ ಕಮಾಂಡರ್ ಗಾಯಗೊಂಡಿದ್ದಾರೆ. ಈ ಸಂಘರ್ಷದಲ್ಲಿ ನಾವೆಯಲ್ಲಿದ್ದ ನಾಲ್ವರು ದಾಳಿಕೋರರು ಮೃತಪಟ್ಟಿದ್ದು ಇತರ ಆರು ಮಂದಿಗೆ ಗಾಯಗಳಾಗಿವೆ ಎಂದು ಸಚಿವಾಲಯ ಸ್ಪಷ್ಟನೆ ನೀಡಿದೆ. ಗಾಯಾಳುಗಳಿಗೆ ವೈದ್ಯಕೀಯ ನೆರವು ನೀಡಲಾಗುತ್ತಿದೆ. ತನ್ನ ಜಲಪ್ರದೇಶವನ್ನು ರಕ್ಷಿಸಿಕೊಳ್ಳಲು ಕ್ಯೂಬಾ ಬದ್ಧವಾಗಿದೆ ಎಂದು ಸಚಿವಾಲಯ ಹೇಳಿಕೆ ನೀಡಿದೆ.
ಅಮೆರಿಕ ಮತ್ತು ಕಮ್ಯೂನಿಸ್ಟ್ ಆಡಳಿತದ ದ್ವೀಪದ ನಡುವಿನ ಸಂಬಂಧ ಹದಗೆಟ್ಟಿರುವ ಹಿನ್ನೆಲೆಯಲ್ಲಿ ಫ್ಲೋರಿಡಾದಿಂದ ಕೇವಲ 100 ಮೈಲು ಅಂತರದ ಪ್ರದೇಶದಲ್ಲಿ ನಡೆದಿರುವ ಈ ಸಂಘರ್ಷ ಹೆಚ್ಚಿನ ಮಹತ್ವ ಪಡೆದಿದೆ.