ಒಂದು ಪ್ಲೇಟ್ ಇಡ್ಲಿಗೆ 315 ರೂ.; ಏರ್‌ಪೋರ್ಟ್ ರಾಮೇಶ್ವರಂ ಕೆಫೆ ಬಿಲ್ ವೈರಲ್.

ಸಾಮಾನ್ಯವಾಗಿ ಕಡಿಮೆ ಬೆಲೆಯಲ್ಲಿ ಹೊಟ್ಟೆ ತುಂಬಾ ತಿನ್ನಬಹುದು ಎಂದು ಹೇಳಿಕೊಳ್ಳುವ ಆಹಾರದ ಪೈಕಿ ಪ್ರಮುಖ ಸ್ಥಾನ ಇರುವುದು ಇಡ್ಲಿಗೆ. ಅದೂ ದಕ್ಷಿಣದ ಇಡ್ಲಿ ಎಂದರೆ ಸಕತ್ ಫೇಮಸ್. 30 ರೂಪಾಯಿ ಕೊಟ್ಟರೆ ಒಂದು ಪ್ಲೇಟ್ ಅಂದ್ರೆ ಎರಡು ಇಡ್ಲಿಗಳು ಸಿಗುತ್ತೆ. ಬೆಂಗಳೂರಿನಂಥ ನಗರಗಳ ಕೆಲವು ಪ್ರತಿಷ್ಠಿತ ಎಂದುಕೊಳ್ಳುವ ಕೆಲವು ಪ್ರದೇಶಗಳಲ್ಲಿ ಹತ್ತಿಪ್ಪತ್ತು ರೂಪಾಯಿ ಹೆಚ್ಚಿಗೆ ಇದ್ದರೆ, ಸ್ಟಾರ್ ಹೋಟೆಲ್ಗಳಲ್ಲಿ ಇದರ ಬೆಲೆ ದುಪ್ಪಟ್ಟು ಇರುತ್ತೆ ಅನ್ನಿ. ಇಡ್ಲಿಯ ಖ್ಯಾತಿಯನ್ನು ನೋಡಿಯೇ, ಅದರಲ್ಲಿ ವಿಭಿನ್ನ ರೀತಿಯ ವೆರೈಟಿ ಮಾಡಲಾಗುತ್ತದೆ. ರವಾ ಇಡ್ಲಿ, ಟೊಮೆಟೊ ಇಡ್ಲಿ, ತುಪ್ಪ (?)ದ ಇಡ್ಲಿ, ಮೃದುವಾದ ಸಾದಾ ಇಡ್ಲಿ, ದೊಡ್ಡ ತಟ್ಟೆ ಇಡ್ಲಿ, ರಾಗಿ ಇಡ್ಲಿ, ವೋಟ್ಸ್ ಇಡ್ಲಿ. ನವಧಾನ್ಯಗಳ ಇಡ್ಲಿ…. ಹೀಗೆ ಹೇಳುತ್ತಾ ಹೋದರೆ ಹೆಸರು ದೊಡ್ಡದ್ದೇ ಇದೆ.

ಇಡ್ಲಿ ಮಹಾತ್ಮೆ
ಇಡ್ಲಿಯ ಗಾತ್ರ ಮತ್ತು ಅದಕ್ಕೆ ಹಾಕುವ ಸಾಮಗ್ರಿಗಳ ಮೇಲೆ ಇಡ್ಲಿಯ ರೇಟ್ ಹೆಚ್ಚೂ ಕಡಿಮೆ ಆಗುವುದೂ ಇದೆ. ಅದೇನೇ ಇದ್ದರೂ 70-80 ರೂಪಾಯಿಗಳನ್ನು ಮೀರುವುದಿಲ್ಲ. ಇಡ್ಲಿ ಮಾಡುವ ವಿಧಾನ ಒಂದೇ ರೀತಿ ಇದ್ದರೂ, ಅದ್ಯಾಕೋ ಕೆಲವು ಹೋಟೆಲ್ಗಳು, ಡಾಬಾಗಳು ಅಥವಾ ರಸ್ತೆ ಬದಿಯ ಅಂಗಡಿಗಳ ಆಹಾರಗಳಲ್ಲಿ ಅದೇನೋ ಟೇಸ್ಟ್ ಇರುತ್ತದೆ. ಆದ್ದರಿಂದ ಎಲ್ಲೆಲ್ಲಿಂದಲೂ ಜನ ಆ ಪ್ರದೇಶವನ್ನು ಹುಡುಕಿ ಬರುವುದು ಇದೆ. ಅದು ಮಾಡುವವರ ಕೈಗುಣವೋ, ಆ ಪ್ರದೇಶದ ಮಹಿಮೆಯೋ, ಅಡುಗೆ ಮಾಡುವಾಗಿನ ಸೂಕ್ಷ್ಮತೆಯೋ ಕಾರಣ ನಿಗೂಢವಾಗಿದ್ದರೂ, ಆಹಾರಗಳನ್ನು ಮಾತ್ರ ಆಹಾ ಎಂದು ತಿನ್ನುವಂತಿರುತ್ತದೆ. ಅದೇ ರೀತಿ ಕೆಲವು ಪ್ರದೇಶಗಳ ಇಡ್ಲಿ ಕೂಡ.
ಇಡ್ಲಿ ರೇಟ್ ವೈರಲ್
ಆದರೆ, ಇದೀಗ ಬೆಂಗಳೂರು ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಇಡ್ಲಿ ಮಾತ್ರ ಇಡೀ ದೇಶದ ಗಮನ ಸೆಳೆದಿದೆ. ಅದು ಸೋಷಿಯಲ್ ಮೀಡಿಯಾದಲ್ಲಿ ಭಾರಿ ವೈರಲ್ ಆಗುತ್ತಿದೆ. ದುಬಾರಿ ಹಾಗೂ ಟೇಸ್ಟ್ಗೆ ಪ್ರಸಿದ್ಧವಾಗಿರುವ ರಾಮೇಶ್ವರಂ ಕೆಫೆಯ ಹೋಟೆಲ್ ಇಡ್ಲಿ ಇದಾಗಿದೆ. ಅಷ್ಟಕ್ಕೂ ಇದು ಇಷ್ಟು ಫೇಮಸ್ ಆಗಲು ಕಾರಣ, ಇದರ ರೇಟ್. ಒಂದು ಇಡ್ಲಿಗೆ 300 ಪ್ಲಸ್ 15 ರೂಪಾಯಿಗಳ ಟ್ಯಾಕ್ಸ್ ಸೇರಿಸಿ 315 ರೂಪಾಯಿ ಮಾಡಿದ್ದಾರೆ! ಇದಕ್ಕೆ ತುಪ್ಪದ ಇಡ್ಲಿ (Ghee Podi Idli) ಎಂದು ಹೆಸರು ಕೊಡಲಾಗಿದೆ. ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಒಬ್ಬ ಪ್ರಯಾಣಿಕ ರಾಮೇಶ್ವರಂ ಕೆಫೆಯ ಟರ್ಮಿನಲ್ 1 ಔಟ್ಲೆಟ್ ನಲ್ಲಿ ಒಂದು ಪ್ಲೇಟ್ ತುಪ್ಪದ ಪೋಡಿ ಇಡ್ಲಿಗೆ 315 ರೂಪಾಯಿ ಪಾವತಿಸಿ ಆಘಾತಕ್ಕೊಳಗಾದರು ಎಂದು ಇದಕ್ಕೆ ಕ್ಯಾಪ್ಷನ್ ನೀಡಿದ್ದು, viralbhayani ಇನ್ಸ್ಟಾಗ್ರಾಮ್ನಲ್ಲಿ ಶೇರ್ ಮಾಡಲಾಗಿದೆ. ಗ್ರಾಹಕರು ಫೆಬ್ರವರಿ 23-24, 2026 ರ ಸುಮಾರಿಗೆ ರೆಡ್ಡಿಟ್ ನಲ್ಲಿ ಈ ರಶೀದಿಯನ್ನು ಹಂಚಿಕೊಂಡಿದ್ದಾರೆ. ಇವರದ್ದೇ ಹೋಟೆಲ್ನಲ್ಲಿ ಬೇರೆ ಕಡೆ ಇದೇ ಇಡ್ಲಿಗೆ 90 ರೂಪಾಯಿಗಳಿಗಿಂತಲೂ ಕಡಿಮೆ ಇದೆ. ಆದರೆ ಇಲ್ಲಿ ಇಷ್ಟು ದುಬಾರಿ. ಇದರ ಬಗ್ಗೆ ಗಮನ ಹರಿಸುವವರು ಯಾರೂ ಇಲ್ಲವೆ ಎಂದು ಪ್ರಶ್ನಿಸಲಾಗಿದೆ.ಪರ-ವಿರೋಧದ ನಿಲುವು
ಇದಕ್ಕೆ ಪರ-ವಿರೋಧದ ನಿಲುವು ವ್ಯಕ್ತವಾಗಿದೆ. ಹಲವರು ತಮಗೆ ಇದೇ ರೀತಿ ಮೋಸ ಆಗಿರುವುದಾಗಿ ಬರೆದುಕೊಂಡಿದ್ದಾರೆ. ಅಂತರರಾಷ್ಟ್ರೀಯ ವಿಮಾನ ನಿಲ್ದಾಣಗಳಲ್ಲಿ ಮೂರ್ನಾಲ್ಕು ಗಂಟೆ ಮೊದಲೇ ಹೋದಾಗ ಹಸಿವೆ ಆಗುವುದು ಸಹಜ. ಆದರೆ ಇಲ್ಲಿಯ ಔಟ್ಲೆಟ್ಗಳಲ್ಲಿ ಆಹಾರ ತೆಗೆದುಕೊಳ್ಳಲು ಹೋದರೆ ಶಾಕ್ ಆಗುವುದು ಖಂಡಿತ ಎಂದಿದ್ದರೆ, ಮತ್ತೆ ಕೆಲವರು ಇಲ್ಲಿಯ ಮಳಿಗೆಗಳ ಬಾಡಿಗೆ ಕೂಡ ಅಷ್ಟೇ ದುಬಾರಿಯಾಗಿರುತ್ತದೆ. ಆದ್ದರಿಂದ ಇಷ್ಟು ರೇಟ್ ಮಾಡುವುದು ಅನಿವಾರ್ಯ ಎಂದಿದ್ದಾರೆ. ಮತ್ತೆ ಕೆಲವರು ವಿಮಾನಗಳಲ್ಲಿ ಹಾರಾಡಲು ಶಕ್ಯ ಇರುವ ಯಾರಿಗೂ ಇದೇನು ದೊಡ್ಡ ದುಬಾರಿ ರೇಟ್ ಆಗಿರೋದಿಲ್ಲ ಬಿಡಿ ಎನ್ನುತ್ತಿದ್ದಾರೆ. ಅದೇನೇ ಇದ್ದರೂ ಸದ್ಯ ದೇಶಾದ್ಯಂತ ಇದು ಚರ್ಚೆಯಾಗುತ್ತಿದೆ.