ಮದುವೆ ಒಪ್ಪಂದದ ಬಳಿಕ ಜಾತಕದ ನೆಪ ಸಲ್ಲದು; ದೆಹಲಿ ಹೈಕೋರ್ಟ್ನಿಂದ ಐತಿಹಾಸಿಕ ತೀರ್ಪು

ನವದೆಹಲಿ: ಮದುವೆಯ ಭರವಸೆ ನೀಡಿ, ಲೈಂಗಿಕ ಸಂಬಂಧ ಹೊಂದಿ, ನಂತರ ಜಾತಿ ಕೂಡಿಬರುವುದಿಲ್ಲ ಎಂದು ಮದುವೆಯನ್ನು ರದ್ದುಗೊಳಿಸುವುದು ಅಪರಾಧ ಎಂದು ದೆಹಲಿ ಹೈಕೋರ್ಟ್ (Delhi High Court) ಹೇಳಿದೆ. ಜಾತಕ ಹೊಂದಾಣಿಕೆಯ ಆಧಾರದ ಮೇಲೆ ನಂತರ ಮದುವೆಯಾಗಲು ನಿರಾಕರಿಸುವುದು, ನಿರಂತರ ಲೈಂಗಿಕ ಸಂಬಂಧದ ನಂತರ ಮದುವೆ ಬೇಡ ಎನ್ನುವುದು ಕಾನೂನು ರೀತಿಯಲ್ಲಿಯೂ ಅಪರಾಧ ಎಂದು ಹೈಕೋರ್ಟ್ ತೀರ್ಪು ನೀಡಿದೆ.
ಭಾರತೀಯ ದಂಡ ಸಂಹಿತೆಯ ಸೆಕ್ಷನ್ 376 ಮತ್ತು ಭಾರತೀಯ ನ್ಯಾಯ ಸಂಹಿತಾದ ಸೆಕ್ಷನ್ 69ರ ಅಡಿಯಲ್ಲಿ ಪ್ರಕರಣ ದಾಖಲಿಸಲಾದ ಆರೋಪಿಯ ಜಾಮೀನು ಅರ್ಜಿಯನ್ನು ತಿರಸ್ಕರಿಸಿದ ಹೈಕೋರ್ಟ್ ನ್ಯಾಯಮೂರ್ತಿ ಸ್ವರ್ಣ ಕಾಂತ ಶರ್ಮಾ ಫೆಬ್ರವರಿ 17ರಂದು ಈ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.ನ್ಯಾಯಾಲಯವು ಕೇವಲ ಸಮ್ಮತಿಯನ್ನಷ್ಟೇ ಅಲ್ಲ, ನಡವಳಿಕೆಯನ್ನು ಕೂಡ ಪರಿಶೀಲಿಸುತ್ತದೆ. ಆರೋಪಿಯ ನಡವಳಿಕೆಯನ್ನು ನ್ಯಾಯಾಂಗ ಪರಿಶೀಲನೆಗೆ ಒಳಪಡಿಸಲಾಗಿದೆ. ದೂರುದಾರರು ತನಗೆ ವಿವಾಹದ ಪುನರಾವರ್ತಿತ ಭರವಸೆಗಳನ್ನು ನೀಡಿ ದೀರ್ಘಕಾಲದಿಂದ ಲೈಂಗಿಕ ಸಂಬಂಧವನ್ನು ಹೊಂದಿದ್ದಾರೆ ಎಂದು ಆರೋಪಿಸಿರುವುದನ್ನು ಕೋರ್ಟ್ ಗಮನಿಸಿದೆ. ಆದರೆ, ಅಂತಿಮವಾಗಿ ಜಾತಕ ಹೊಂದಾಣಿಕೆಯಿಲ್ಲದ ಕಾರಣದಿಂದ ಮದುವೆಯನ್ನು ನಿರಾಕರಿಸಲಾಯಿತು. ಈ ಬಗ್ಗೆ ಮೊದಲೇ ಯೋಚಿಸಬೇಕಾಗಿತ್ತು. ಸುಳ್ಳು ಭರವಸೆ ನೀಡಿ ತನ್ನ ಕಾಮತೃಷೆ ತೀರಿಸಿಕೊಂಡು ಜಾತಕದ ನೆಪ ನೀಡುವುದು ಅಪರಾಧ ಎಂದು ಕೋರ್ಟ್ ಹೇಳಿದೆ.
ಆರೋಪಿ ದೂರುದಾರ ಯುವತಿಗೆ ತಮ್ಮ ಜಾತಕ ಹೊಂದಿಕೆಯಾಗುತ್ತವೆ ಮತ್ತು ಸದ್ಯದಲ್ಲೇ ಮದುವೆಯಾಗೋಣ ಎಂದು ಹೇಳಿದ್ದ ವಾಟ್ಸಾಪ್ ಚಾಟ್ಗಳನ್ನು ಹೈಕೋರ್ಟ್ ಗಮನಿಸಿದೆ. ಅದರಲ್ಲಿ “ಕಲ್ ಹಿ ಶಾದಿ ಕರ್ ರಹೇ ಹೈ ಹಮ್” (ನಾಳೆಯೇ ನಾವು ಮದುವೆಯಾಗೋಣ) ಎಂಬ ಸಂದೇಶವೂ ಸೇರಿತ್ತು.ಒಂದುವೇಳೆ, ಆರೋಪಿ ಮತ್ತು ಅವನ ಕುಟುಂಬಕ್ಕೆ ಜಾತಕ ಹೊಂದಾಣಿಕೆಯೇ ಮುಖ್ಯವಾಗಿದ್ದರೆ ಅದನ್ನು ಪ್ರಾರಂಭದಲ್ಲಿಯೇ ಪರಿಶೀಲಿಸಬೇಕಾಗಿತ್ತು ಎಂದು ನ್ಯಾಯಾಲಯ ಒತ್ತಿಹೇಳಿತು. ಹಲವು ವರ್ಷಗಳ ಭರವಸೆಗಳ ನಂತರ ಜಾತಕದ ವಿಷಯ ಮುಂದೆ ತಂದು ಮದುವೆ ಬೇಡ ಎಂದಿರುವುದು ಸರಿಯಲ್ಲ. ಇದು ಸುಳ್ಳು ಅಥವಾ ಮೋಸಗೊಳಿಸುವ ಭರವಸೆಯ ಆಧಾರದ ಮೇಲೆ ಲೈಂಗಿಕ ಸಂಬಂಧಗಳಿಗೆ ಒಪ್ಪಿಗೆಯನ್ನು ಪಡೆಯಲಾಗಿದೆಯೇ ಎಂಬ ಬಗ್ಗೆ ಗಂಭೀರ ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಆರೋಪಿಗೆ ಜಾಮೀನು ನಿರಾಕರಿಸಲಾಗಿದೆ ಎಂದು ನ್ಯಾಯಮೂರ್ತಿ ಶರ್ಮಾ ಹೇಳಿದ್ದಾರೆ.
