ಮೈಸೂರು: ಡ್ರಗ್ಸ್ ಜಾಲದ ಮೇಲೆ ಪೊಲೀಸರ ದಾಳಿ; 10 ಲಕ್ಷ ಮೌಲ್ಯದ ಎಂಡಿಎಂಎ ವಶ, ನಾಲ್ವರ ಬಂಧನ

ಮೈಸೂರು: ಮೈಸೂರು (Mysuru) ನಗರದಲ್ಲಿ ಡ್ರಗ್ ಹಾವಳಿ ಇನ್ನೂ ನಿಂತಿಲ್ಲ. ಮಹಾರಾಷ್ಟ್ರ ಪೊಲೀಸರು ಬಂದು ಕಾರ್ಯಾಚರಣೆ ನಡೆಸಿದ ನಂತರ ಪದೇಪದೆ ಪೊಲೀಸರು ದಾಳಿ ನಡೆಸಿ ಡ್ರಗ್ಸ್ ಹಾಗೂ ಪೂರೈಕೆ ಮಾಡುತ್ತಿರುವ ಆರೋಪಿಗಳನ್ನು ವಶಕ್ಕೆ ಪಡೆಯುತ್ತಿದ್ದಾರೆ. ಇದೀಗ ಸೋಮವಾರ ಮೈಸೂರು ಮಂಡಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ದಾಳಿ ಮಾಡಿರುವ ಪೊಲೀಸರು, 10.30 ಲಕ್ಷ ರೂ. ಮೌಲ್ಯದ 103 ಗ್ರಾಂ ಎಂಡಿಎಂಎ ವಶಕ್ಕೆ ಪಡೆದಿದ್ದು, ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ. ಬಂಧಿತರನ್ನು ಜಿಯಾವುಲ್ಲಾ, ಜಾವೇದ್ ಅಹ್ಮದ್, ಸೋಹೆಲ್, ನೂಯೇದ್ ಎಂದು ಗುರುತಿಸಲಾಗಿದೆ.

ಆರೋಪಿಗಳ ಬಳಿಯಿಂದ ಇನ್ನೋವಾ ಕಾರು, 5 ಮೊಬೈಲ್ಗಳನ್ನೂ ಜಪ್ತಿ ಮಾಡಲಾಗಿದೆ.

ಮೈಸೂರಿನಲ್ಲಿ ಇತ್ತೀಚಿನ ಡ್ರಗ್ಸ್ ವಿರುದ್ಧದ ಕಾರ್ಯಾಚರಣೆಗಳ ವಿವರ
2026 ಫೆಬ್ರವರಿ 17: ಸಿಸಿಬಿ ಪೊಲೀಸರು ಬೆಂಗಳೂರು ಮೂಲದ ಇಬ್ಬರು ಡ್ರಗ್ ಪೆಡ್ಲರ್ಗಳನ್ನು ಬಂಧಿಸಿ, ಅವರಿಂದ 6.35 ಲಕ್ಷ ರೂ. ಮೌಲ್ಯದ ಎಂಡಿಎಂಎ ಮತ್ತು ಗಾಂಜಾವನ್ನು ವಶಪಡಿಸಿಕೊಂಡಿದ್ದರು.
2026 ಫೆಬ್ರವರಿ 15: ಮಂಡಿ ಪೊಲೀಸರು ಮೊಹಮ್ಮದ್ ರೋಷನ್ ಎಂಬಾತನನ್ನು ಬಂಧಿಸಿ 4 ಲಕ್ಷ ರೂ. ಮೌಲ್ಯದ 41 ಗ್ರಾಂ ಎಂಡಿಎಂಎ ಜಪ್ತಿ ಮಾಡಿದ್ದರು. ಈತ ಬೆಂಗಳೂರಿನಿಂದ ಡ್ರಗ್ಸ್ ತಂದು ನಗರದಲ್ಲಿ ಮಾರಾಟ ಮಾಡುತ್ತಿದ್ದ ಎನ್ನಲಾಗಿದೆ.
2026 ಫೆಬ್ರವರಿ 12: ಮೈಸೂರು ನಗರದಲ್ಲಿ ಡ್ರಗ್ಸ್ ಜಾಲದ ವಿರುದ್ಧ ಸಿಸಿಬಿ ಮತ್ತು ಮಂಡಿ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿ ಒಟ್ಟು ಐವರು ಆರೋಪಿಗಳನ್ನು ಬಂಧಿಸಿದ್ದರು. ಒಟ್ಟು 3 ಪ್ರಕರಣಗಳಲ್ಲಿ ಅಪಾರ ಪ್ರಮಾಣದ ಡ್ರಗ್ಸ್ ವಶಕ್ಕೆ ಪಡೆದಿದ್ದರು.
2026 ಫೆಬ್ರವರಿ 7: ಸಾತಗಳ್ಳಿ ಬಳಿ ಎಂಡಿಎಂಎ ಮಾರಾಟ ಮಾಡುತ್ತಿದ್ದ ನಾಲ್ವರನ್ನು ಬಂಧಿಸಿ 1.20 ಲಕ್ಷ ರೂ. ಮೌಲ್ಯದ ಮಾದಕವಸ್ತು ವಶಪಡಿಸಿಕೊಳ್ಳಲಾಗಿತ್ತು.
2026 ಜನವರಿ 30: ರಾಷ್ಟ್ರೀಯ ಮಾದಕ ದ್ರವ್ಯ ನಿಯಂತ್ರಣ ಘಟಕ (NCB) ಮೈಸೂರಿನ ಹೆಬ್ಬಾಳ ಕೈಗಾರಿಕಾ ಪ್ರದೇಶದಲ್ಲಿ ರಹಸ್ಯವಾಗಿ ನಡೆಯುತ್ತಿದ್ದ ಹೈಟೆಕ್ ಡ್ರಗ್ಸ್ ತಯಾರಿಕಾ ಘಟಕವನ್ನು ಪತ್ತೆಹಚ್ಚಿ, ಕೋಟ್ಯಂತರ ರೂ. ಮೌಲ್ಯದ ಮಾದಕವಸ್ತುವನ್ನು ಜಪ್ತಿ ಮಾಡಿತ್ತು. ಇದು ಇಡೀ ರಾಜ್ಯವೇ ಬೆಚ್ಚಿಬೀಳುವಂತೆ ಮಾಡಿತ್ತು.
ಮೈಸೂರು ನಗರ ಈಗ ಡ್ರಗ್ಸ್ ಮಾರಾಟದ ತಾಣವಷ್ಟೇ ಅಲ್ಲದೆ, ತಯಾರಿಕಾ ತಾಣವಾಗಿಯೂ ಬದಲಾಗುತ್ತಿರುವುದು ಪೊಲೀಸ್ ಇಲಾಖೆಗೆ ದೊಡ್ಡ ಸವಾಲಾಗಿ ಪರಿಣಮಿಸಿದೆ.