ನಷ್ಟದ ಸುಳಿಯಲ್ಲಿ ಓಲಾ ಎಲೆಕ್ಟ್ರಿಕ್: 4000 ದಿಂದ 550ಕ್ಕೆ ಶೋರೂಂ ಇಳಿಕೆ

ಬೆಂಗಳೂರು: ಮಾರಾಟ ತೀವ್ರ ಕುಸಿತಗೊಂಡ ಬೆನ್ನಲ್ಲೇ ಓಲಾ ಎಲೆಕ್ಟ್ರಿಕ್(Ola Electric) ತನ್ನ ಶೋರೂಂ ಸಂಖ್ಯೆಯನ್ನು ಮಾರ್ಚ್ ಅಂತ್ಯಕ್ಕೆ 550ಕ್ಕೆ ಇಳಿಸಲು ಚಿಂತನೆ ನಡೆಸಿದೆ ಎಂದು ಮಾಧ್ಯಮ ವರದಿ ಮಾಡಿದೆ.
ಬೆಂಗಳೂರು ಮೂಲದ ಎಲೆಕ್ಟ್ರಿಕ್ ವಾಹನ (EV) ಯಾರಕ ಕಂಪನಿಯು ತನ್ನ ಚಿಲ್ಲರೆ ಮಾರಾಟ ಜಾಲವನ್ನು ದೇಶಾದ್ಯಂತ 4,000 ಮಳಿಗೆಗಳಿಗೆ ವಿಸ್ತರಿಸುವುದಾಗಿ ಘೋಷಿಸಿದ ಕೇವಲ ಒಂದು ವರ್ಷದ ಒಳಗಡೆ ಮಳಿಗೆ ಇಳಿಸಲು ಈಗ ಮುಂದಾಗಿದೆ.


ಈಗಾಗಲೇ ಈಗ ತನ್ನ ಶೋರೂಂ ಸಂಖ್ಯೆಯನ್ನು 700ಕ್ಕೆ ಇಳಿಸಿದೆ. ಕಾರ್ಯಾಚರಣಾ ಭಾಗವಾಗಿ ಈಗ 550ಕ್ಕೆ ಇಳಿಸಲು ಮುಂದಾಗಿದೆ. ಕಂಪನಿಯು ದೇಶಾದ್ಯಂತ ಹಲವು ಶೋರೂಂಗಳನ್ನು ಮುಚ್ಚಿದ್ದು ಆ ಸ್ಥಳಗಳಲ್ಲಿದ್ದ ಹಲವಾರು ಉದ್ಯೋಗಿಗಳನ್ನು ತೊರೆಯುವಂತೆ ಸೂಚಿಸಲಾಗಿದೆ.
ಡಿಸೆಂಬರ್ 31, 2025 ಅಂತ್ಯಗೊಂಡ ತ್ರೈಮಾಸಿಕದಲ್ಲಿ, ಓಲಾ ಎಲೆಕ್ಟ್ರಿಕ್ಗೆ 487 ಕೋಟಿ ನಿವ್ವಳ ನಷ್ಟವಾಗಿತ್ತು. ಕಾರ್ಯಾಚರಣೆಗಳಿಂದ ಬರುವ ಆದಾಯವು ವರ್ಷದಿಂದ ವರ್ಷಕ್ಕೆ ಶೇ.55 ರಷ್ಟು ಕುಸಿದು 470 ಕೋಟಿ ರೂ.ಗೆ ತಲುಪಿದೆ. ಕಂಪನಿಯು ತ್ರೈಮಾಸಿಕದಲ್ಲಿ 32,680 ಎಲೆಕ್ಟ್ರಿಕ್ ದ್ವಿಚಕ್ರ ವಾಹನಗಳನ್ನು ವಿತರಿಸಿತ್ತು. ವರ್ಷದಿಂದ ವರ್ಷಕ್ಕೆ ಹೋಲಿಸಿದರೆ ಮಾರಾಟ ಶೇ. 61 ರಷ್ಟು ಇಳಿಕೆಯಾಗಿದೆ.ವಾಹನ್ ವೆಬ್ಸೈಟ್ ಪ್ರಕಾರ, ಎಲೆಕ್ಟ್ರಿಕ್ ದ್ವಿಚಕ್ರ ವಾಹನ ವಿಭಾಗದಲ್ಲಿ ಓಲಾ ಎಲೆಕ್ಟ್ರಿಕ್ನ ಮಾರುಕಟ್ಟೆ ಪಾಲು ಕುಸಿದಿದೆ. ಒಂದು ವರ್ಷದ ಹಿಂದೆ ಶೇ.26 ರಷ್ಟು ಹೊಂದಿದ್ದ ಓಲಾದ ಪಾಲು ಈಗ ಶೇ. 6.3ಕ್ಕೆ ಇಳಿದಿದೆ. ಫೆಬ್ರವರಿ ತಿಂಗಳ ಮೊದಲ 18 ದಿನಗಳಲ್ಲಿ ಕಂಪನಿಯು 2,575 ವಾಹನಗಳನ್ನು ಮಾರಾಟ ಮಾಡಿತ್ತು.
ಕಳೆದ ವರ್ಷ ಮಾರುಕಟ್ಟೆಯಲ್ಲಿ ನಾಯಕನಾಗಿದ್ದ ಓಲಾ ಎಲೆಕ್ಟ್ರಿಕ್, ಪ್ರಸ್ತುತ ಟಿವಿಎಸ್ ಮೋಟಾರ್, ಬಜಾಜ್ ಆಟೋ ಮತ್ತು ಹೀರೋ ಮೋಟೋಕಾರ್ಪ್, ಎಥರ್ ಎನರ್ಜಿಯಿಂದ ಪ್ರಬಲವಾದ ಸ್ಪರ್ಧೆ ಎದುರಿಸುತ್ತಿದೆ.